ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ₹ 2,793 ಕೋಟಿ ಅಭಿವೃದ್ಧಿ ಕಾಮಗಾರಿ

ರಿಪೋರ್ಟ್‌ ಕಾರ್ಡ್‌ ನೀಡಿದ ಶಾಸಕ ಕೆ.ರಘುಪತಿ ಭಟ್‌
Last Updated 20 ಜನವರಿ 2023, 13:09 IST
ಅಕ್ಷರ ಗಾತ್ರ

ಉಡುಪಿ: 2018ರಿಂದ ಇಲ್ಲಿಯವರೆಗೂ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ₹ 2,793 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ‘ಸಮೃದ್ಧ ಉಡುಪಿಗೆ ಸಾರ್ಥಕ ಯೋಜನೆಗಳು’ ಕಿರು ಹೊತ್ತಿಗೆ ಬಿಡುಗಡೆಗೊಳಿಸಿ ಮಾತನಾಡಿ, ಶಾಸಕನಾಗಿ ರಸ್ತೆ, ಚರಂಡಿ, ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಜತೆಗೆ, ಕೇದಾರೋತ್ಥಾನ ಟ್ರಸ್ಟ್‌ ಮೂಲಕ ಹಡಿಲು ಭೂಮಿ ಕೃಷಿ ಆಂದೋಲನ ನಡೆಸಿ ಸಾವಿರಾರು ಎಕರೆ ಬರಡು ಭೂಮಿಯನ್ನು ಹಸನುಗೊಳಿಸಿದ ತೃಪ್ತಿ ಇದೆ.

ಕರಾವಳಿ ಮಣ್ಣಿನ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಯಕ್ಷ ಶಿಕ್ಷಣ ಟ್ರಸ್ಟ್‌ ರಚಿಸಿ ಉಡುಪಿ ವಿಧಾನಸಭಾ ಕ್ಷೇತ್ರದ 44 ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

ಪಿಪಿಪಿ ಮಾದರಿಯ 200 ಬೆಡ್‌ಗಳ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ. ₹ 150 ಕೋಟಿ ವೆಚ್ಚದಲ್ಲಿ ಜಿಲ್ಲಾ ಆಸ್ಪತ್ರೆ ಕೂಡ ನಿರ್ಮಾಣವಾಗುತ್ತಿದ್ದು 450 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆಗಳು ಸರ್ಕಾರದ ಸುಪರ್ದಿಗೆ ಬಂದಂತಾಗಿವೆ ಎಂದರು.

ಮೂಲ ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಪರಿಷ್ಕೃತಗೊಳಿಸಿ ಕಾಮಗಾರಿ ಪೈ‍ಪ್‌ಲೈನ್ ಹಾದುಹೋಗುವ ಎಲ್ಲ ಗ್ರಾಮಗಳಿಗೆ, 19 ಪಂಚಾಯಿತಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಸಲು ನಗರ ವ್ಯಾಪ್ತಿಯಲ್ಲಿ ₹ 338 ಕೋಟಿ ಹಾಗೂ ಗ್ರಾಮಾಂತರ ಭಾಗಗಳಲ್ಲಿ ₹ 138 ಕೋಟಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ಅಂಬಾಗಿಲು ಪೆರಂಪಳ್ಳಿ ರಸ್ತೆ 22 ಮೀಟರ್ ವಿಸ್ತಾರವಾಗುತ್ತಿದ್ದು ನಾಲ್ಕು ಪಥದ ರಸ್ತೆಯಾಗಲಿದೆ. ಸ್ಮಾರ್ಟ್‌ ಬೀದಿ ದೀಪಗಳ ಅಳವಡಿಕೆಗೂ ಟೆಂಡರ್ ಅಂತಿಮವಾಗಿದೆ. ಬ್ರಹ್ಮಾವರದಿಂದ ಹೆಬ್ರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ಭಾಗದ ರಸ್ತೆಯನ್ನು ₹ 120 ಕೋಟಿ ವೆಚ್ಚದಲ್ಲಿ 4 ಪಥದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಹೆಬ್ರಿಯಿಂದ ಮಲ್ಪೆಯವರೆಗೆ ರಾಷ್ಟ್ರೀಯ ಹೆದ್ದಾರಿ 169 ಎ ಕಾಮಗಾರಿ ನಡೆಯುತ್ತಿದೆ. ₹ 310 ಕೋಟಿ ವೆಚ್ಚದಲ್ಲಿ ಹಂದಾಡಿ ಮತ್ತು ಬೆಣ್ಣೆಕುದ್ರುವಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ, ಕೃಷಿ ಭೂಮಿಗೆ ಉಪ್ಪು ನೀರು ತಡೆಯುವ ಯೋಜನೆ ಟೆಂಡರ್ ಹಂತದಲ್ಲಿದೆ ಎಂದರು.

ಕೋವಿಡ್‌ ಕಾಲಘಟ್ಟದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿಗೆ ಆಹಾರದ ವ್ಯವಸ್ಥೆ, ಬೆಡ್‌ಗಳ ಸಮಸ್ಯೆ ಎದುರಾಗದಂತೆ ನಿರ್ವಹಣೆಗೆ ಶ್ರಮಿಸಿದ್ದೇನೆ ಎಂದರು.

ಲೋಕಸಭೆಯ ಆಸೆ ಇಲ್ಲ: ರಘುಪತಿ ಭಟ್‌

ಉಡುಪಿಯಲ್ಲಿ ಬಿಜೆಪಿ ಪ್ರಬಲವಾಗಿರುವ ಕಾರಣ ಟಿಕೆಟ್‌ಗೆ ಅಪೇಕ್ಷೆ ಪಡುವುದು ಸಹಜ. ಆದರೆ, ಟಿಕೆಟ್‌ ಯಾರಿಗೆ ಕೊಡಬೇಕು ಎಂಬುದನ್ನು ವರಿಷ್ಠರು ನಿರ್ಧರಿಸಲಿದ್ದಾರೆ. 1994ರಿಂದಲೂ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದು, ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಒಮ್ಮೆಯೂ ಸೋತಿಲ್ಲ. ಇವೆಲ್ಲ ಅಂಶಗಳನ್ನು ಪರಿಗಣಿಸಿ ಟಿಕೆಟ್‌ ಖಚಿತವಾಗಿ ಸಿಗಲಿದೆ ಎಂಬ ವಿಶ್ವಾಸವಿದೆ. ಕೆಲವರು ಟಿಕೆಟ್‌ಗಾಗಿ ಹಗಲು ಗನಸು ಕಾಣುತ್ತಿದ್ದಾರೆ. ಮುಂದೆ ಪಟ್ಟಿ ಬಿಡುಗಡೆಯಾದಾಗ ಭ್ರಮನಿರಸನವಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇರಾದೆ ಇಲ್ಲ. ಟಿಕೆಟ್‌ ಕೊಟ್ಟರೂ ಸ್ಪರ್ಧಿಸುವುದಿಲ್ಲ.

–ರಘುಪತಿ ಭಟ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT