ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಎರಡು ಮನೆಗೆ ಹಾನಿ

ಪಡುಬಿದ್ರಿ, ಕುಂದಾಪುರ, ಬೈಂದೂರುಗಳಲ್ಲಿ ಗಾಳಿ ಅಬ್ಬರ
Last Updated 25 ಅಕ್ಟೋಬರ್ 2019, 9:20 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಕಾಪು ತಾಲ್ಲೂಕಿನಲ್ಲಿ ಗುರುವಾರ ಭಾರಿ ಮಳೆ ಹಾಗೂ ಗಾಳಿಗೆ ಎರಡು ಮನೆಗಳಿಗೆ ಹಾನಿಯಾಗಿದೆ.

ಕುತ್ಯಾರು ಗ್ರಾಮದ ಇರಂದಾಡಿ ಎಂಬಲ್ಲಿ ಸಾಕು ಶೆಟ್ಟಿ ಎಂಬುವರ ಮನೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ. ನಷ್ಟ ₹40 ಸಾವಿರ ಎಂದು ಅಂದಾಜಿಸಲಾಗಿದೆ. ಬಡಾ ಗ್ರಾಮದ ರಘು ಆರ್. ದೇವಾಡಿಗ ಎಂಬುವರ ಮನೆಗೆ ಗಾಳಿ ಮಳೆಯಿಂದ ತೆಂಗಿನ ಮರ ಬಿದ್ದು ಹಾನಿಯಾಗಿದ್ದು, ₹50 ಸಾವಿರ ಮೊತ್ತದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಮಧ್ಯಾಹ್ನ ಬಲವಾಗಿ ಬೀಸಿದ ಮಳೆ ಗಾಳಿಗೆ ಪಡುಬಿದ್ರಿ-ಕಾರ್ಕಳ ಮುಖ್ಯ ರಸ್ತೆಯ ಅಡ್ವೆ ಭಾಗದಲ್ಲಿ ಬೃಹತ್ ಜಾಹೀರಾತು ಫಲಕವೊಂದು ರಸ್ತೆಯ ಮೇಲೆ ವಾಲಿದ್ದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಜಲಾವೃತ
ಕುಂದಾಪುರ:
ಮಳೆಯ ಆರ್ಭಟಕ್ಕೆ ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಜನ ಹೈರಾಣರಾಗಿದ್ದಾರೆ. ಗುರುವಾರ ಮಧ್ಯಾಹ್ನದ ಬಳಿಕ ಜೋರಾಗಿದೆ.

ಮಳೆಯ ನೀರು ತಗ್ಗು ಪ್ರದೇಶಗಳಲ್ಲಿ ಆತಂಕಗಳನ್ನು ಹೆಚ್ಚಿಸಿದೆ. ನಾಡಾ ಗುಡ್ಡೆಯಂಗಡಿ ಗ್ರಾಮದ ಚಿಕ್ಕಳ್ಳಿ, ಹಡವು, ಮರವಂತೆಯ ಸಾಲ್ಬುಡ ಮುಂತಾದ ಕಡೆಗಳಲ್ಲಿ ಉಕ್ಕೇರುತ್ತಿರುವ ಸೌಪರ್ಣಿಕಾ ನದಿಯ ನೀರು ತಗ್ಗು ಪ್ರದೇಶಗಳಲ್ಲಿ ಮುಳುಗಡೆ ಭೀತಿಯನ್ನು ಉಂಟು ಮಾಡಿದೆ. ಭಾರಿ ಗಾಳಿಗೆ ಹಕ್ಲಾಡಿ ಭಜನಾ ಮಂದಿರದ ಬಳಿಯಲ್ಲಿ ವಿದ್ಯುತ್‌ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ವಿದ್ಯುತ್‌ ತಂತಿ, ವಿದ್ಯುತ್‌ ಕಂಬಗಳು ನೆಲಕಚ್ಚಿವೆ. ಬಂಟ್ವಾಡಿಯಿಂದ ಆಲೂರಿಗೆ ತೆರಳುವ ರಸ್ತೆಯ ಬದಿಭಾರಿ ಗಾತ್ರದ ಮರವೊಂದು ಉರುಳಿ ಬಿದ್ದಿರುವುದರಿಂದ ಸಂಚಾರಕ್ಕೆ ತೊಡಕುಂಟಾಗಿದೆ.

ಮಳೆ ನೀರು ಕೃಷಿ ಗದ್ದೆಗಳಲ್ಲಿ ತುಂಬುತ್ತಿದ್ದು ಕಟಾವಿಗಾಗಿ ಸಿದ್ಧವಾಗಿರುವ ಭತ್ತದ ಪೈರು ನಾಶವಾಗಬಹುದು ಎನ್ನುವ ಆತಂಕ ರೈತಾಪಿ ವರ್ಗವನ್ನು ಕಾಡುತ್ತಿದೆ. ಮಳೆ , ಗಾಳಿಯಿಂದ ವಿದ್ಯುತ್‌ ಸ್ಥಗಿತಗೊಂಡು ಜನ ಹೈರಾಣಾಗಿ ಹೋಗಿದ್ದಾರೆ. ಲ್ಯಾಂಡ್‌ಫೋನ್‌, ಮೊಬೈಲ್‌ ಸಂಪರ್ಕ ವ್ಯತ್ಯಯವಾಗಿವೆ.

ಬೈಂದೂರು: ಹಾನಿ
ಬೈಂದೂರು:
ಭಾರಿ ಮಳೆಯಿಂದ ಬೈಂದೂರು ಸುತ್ತಮುತ್ತ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಗದ್ದೆ, ತೋಟಗಳಲ್ಲಿ ನೀರು ತುಂಬಿದೆ. ಸಮುದ್ರದಲ್ಲಿ ತೆರೆಗಳ ಆರ್ಭಟ ಜೋರಾಗಿದೆ.

ಶಿರೂರು ದೊಂಬೆಯ ಗುರುವಮ್ಮನಮನೆ ಎಂಬಲ್ಲಿ ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿದ ಪುಟ್ಟ ದೋಣಿಗೆ ಹಾನಿಯಾಗಿದ್ದು, ₹15,000 ಮೌಲ್ಯದ ಬಲೆ ಸಮುದ್ರ ಪಾಲಾಗಿದೆ. ಸಮೀಪದ ಅಕ್ಷರ ಕರಾವಳಿ, ಕಳಿಹಿತ್ಲು ಪ್ರದೇಶಗಳಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ. ಶಿರೂರು, ಉಪ್ಪುಂದದ ಅಂಬಾಗಿಲು, ನಾವುಂದ ಹೆದ್ದಾರಿ ಅಂಡರ್‌ಪಾಸ್‌ಗಳ ಇಕ್ಕಡೆಯ ಸರ್ವಿಸ್ ರಸ್ತೆಗಳ ಮೇಲೆ ಹಳ್ಳದಂತೆ ನೀರು ಹರಿಯುತ್ತಿರುವುದರಿಂದ ಜನ, ವಾಹನ ಸಂಚಾರಕ್ಕೆ ತೊಡಕಾಗಿದೆ.

ಬೈಂದೂರು ಸುತ್ತಮುತ್ತ ಗ್ರಾಮಗಳಲ್ಲಿ ಕಟಾವಿಗೆ ಸಿದ್ಧವಾದ ಭತ್ತದ ಪೈರಿಗೆ ಈ ಅಕಾಲಿಕ ಮಳೆಯಿಂದ ತೀವ್ರ ಹಾನಿಯಾಗುವ ಸಾಧ್ಯತೆ ಇದೆ. ಕೆಲವೆಡೆ ಭತ್ತದ ಪೈರಿನ ಮೇಲೆ ನೀರು ನಿಂತಿದೆ. ಮಳೆ ಮುಂದುವರಿದರೆ ನದಿಗಳು ಉಕ್ಕಿ ಹರಿದು ಭತ್ತದ ಗದ್ದೆಗಳಲ್ಲಿ ನೆರೆ ಹೆಚ್ಚಿದರೆ ಫಸಲು, ಹುಲ್ಲು ಎರಡೂ ಕೈಸೇರದಿರುವ ಭೀತಿ ರೈತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT