ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ನೆರೆಗೆ ಕರಾವಳಿ ತತ್ತರ; ಬೇಕು ಶಾಶ್ವತ ಪರಿಹಾರ

ಅಭಿವೃದ್ಧಿ ಹೆಸರಿನಲ್ಲಿ ಅವೈಜ್ಞಾನಿಕ ಯೋಜನೆಗಳ ಅನುಷ್ಠಾನದ ಫಲ
Last Updated 17 ಜುಲೈ 2022, 19:30 IST
ಅಕ್ಷರ ಗಾತ್ರ

ಉಡುಪಿ: ಪ್ರತಿ ಮಳೆಗಾಲದಲ್ಲಿ ವರುಣನ ಆರ್ಭಟಕ್ಕೆ ಉಡುಪಿ ಜಿಲ್ಲೆ ನಲುಗುತ್ತಿದೆ. ಗ್ರಾಮಗಳು ಜಲಾವೃತಗೊಂಡು ಜನ ಜೀವನ ಅಸ್ತವ್ಯಸ್ತವಾಗುತ್ತಿದೆ. ಜೀವ ಹಾನಿ ಸಂಭವಿಸುತ್ತಿವೆ. ನೂರಾರು ಮಂದಿ ಸೂರು ಕಳೆದುಕೊಳ್ಳುತ್ತಿದ್ದಾರೆ. ಅಪಾರ ಪ್ರಮಾಣದ ಕೃಷಿ ನಾಶವಾಗುತ್ತಿದೆ. ಇಷ್ಟೆಲ್ಲ ಅನಾಹುತಗಳು ಸಂಭವಿಸಿದರೂ ನೆರೆ ಬಂದಾಗಷ್ಟೆ ಎಚ್ಚೆತ್ತುಕೊಳ್ಳುವ ಆಡಳಿತ ನೆರೆಗೆ ಶಾಶ್ವತ ಪರಿಹಾರ ಹುಡುಕುವ ಕಾರ್ಯಕ್ಕೆ ಮುಂದಾಗದಿರುವುದು ವ್ಯವಸ್ಥೆಯ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ದಶಕಗಳ ಹಿಂದೆ ಜಿಲ್ಲೆಯಲ್ಲಿ ಎಷ್ಟೆ ಮಳೆ ಸುರಿದರೂ ಅಷ್ಟಾಗಿ ನೆರೆ ಸಮಸ್ಯೆ ಬಾಧಿಸುತ್ತಿರಲಿಲ್ಲ. ಬಿದ್ದ ಮಳೆಯ ನೀರು ಸರಾಗವಾಗಿ ಸಮುದ್ರ ಸೇರುತ್ತಿತ್ತು. ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮಘಟ್ಟದಲ್ಲಿ ಅನುಷ್ಠಾನಗೊಂಡ ಯೋಜನೆಗಳು, ಅವೈಜ್ಞಾನಿಕ ಕಿಂಡಿ ಅಣೆಕಟ್ಟುಗಳು, ನದಿ ಮೂಲಗಳ ನಾಶ, ನದಿಗಳ ಹರಿವಿಗೆ ಅಡ್ಡಿ ಮಾಡಿದ ಪರಿಣಾಮ ಜಿಲ್ಲೆಯಲ್ಲಿ ಪ್ರತಿವರ್ಷ ಕೃತಕ ನೆರೆ ಸೃಷ್ಟಿಯಾಗುತ್ತಿದೆ.

ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನಲ್ಲಿ ಕೊಂಕಣ ರೈಲ್ವೆ ಹಳಿ ಕಾಮಗಾರಿ ಮಾಡುವಾಗ ಗದ್ದೆಗಳ ಮಧ್ಯೆ ದೊಡ್ಡ ಬಂಡುಗಳನ್ನು ನಿರ್ಮಾಣ ಮಾಡಲಾಯಿತು. ಆದರೆ, ಕೃಷಿ ಗದ್ದೆಗಳಿಂದ ಸರಾಗವಾಗಿ ನೀರು ಹರಿಯಲು ತೂಬುಗಳು ನಿರ್ಮಾಣ ಮಾಡಲಿಲ್ಲ. ಪರಿಣಾಮ ಸಣ್ಣ ಮಳೆಗೂ ಈ ಭಾಗದಲ್ಲಿ ನೆರೆ ಸೃಷ್ಟಿಯಾಗಿ ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡು ಬೆಳೆ ಹಾನಿ ಸಂಭವಿಸುತ್ತಿದೆ.

ಮಳೆಗಾಲದಲ್ಲಿ ಘಟ್ಟದ ಮೇಲ್ಭಾಗದಲ್ಲಿ ಸುರಿಯುವ ಭಾರಿ ಮಳೆ ಕರಾವಳಿಗೆ ಇಳಿದು ಇಲ್ಲಿನ ಜೀವ ನದಿಗಳು ಉಕ್ಕಿ ಹರಿಯುತ್ತವೆ. ನದಿಯ ನೀರು ಸಮುದ್ರಕ್ಕೆ ಸೇರಲು ಅವೈಜ್ಞಾನಿಕ ಕಾಮಗಾರಿಗಳು, ಯೋಜನೆಗಳು ಅಡ್ಡಿಯಾಗಿರುವುದರಿಂದ ನದಿಗಳ ನೀರಿನ ಸಮತೋಲನದ ಮಟ್ಟ ಪ್ರಾಕೃತಿಕ ಸಮತೋಲನಕ್ಕೆ ವಿರುದ್ಧವಾಗಿದ್ದು ನೆರೆ ಸಮಸ್ಯೆ ಕಾಡುತ್ತಿದೆ.

ಇದರ ಜತೆಗೆ ಉಪ್ಪು ನೀರಿನ ತಡೆಗೋಡೆಗಳ ಅವ್ಯವಸ್ಥಿತ ನಿರ್ವಹಣೆ ಹಾಗೂ ಭೌಗೋಳಿಕ ಅಧ್ಯಯನ ಮಾಡದೆ ನಿರ್ಮಾಣ ಮಾಡಲಾಗಿರುವ ಕಿಂಡಿ ಅಣೆಕಟ್ಟುಗಳಿಂದಲೂ ಕೃತಕ ನೆರೆ ಸಮಸ್ಯೆಗೆ ಕಾರಣವಾಗಿದೆ.

ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿದಿ.ಎ.ಜಿ.ಕೊಡ್ಗಿಯವರ ನೇತೃತ್ವದಲ್ಲಿ ಕುಂದಾಪುರ ಹಾಗೂ ಬೈಂದೂರು ಭಾಗದ ಪ್ರಮುಖರ ನಿಯೋಗ ಅವರನ್ನು ಭೇಟಿಮಾಡಿ ಕೊಂಕಣ ರೈಲ್ವೆಯ ಅವೈಜ್ಞಾನಿಕ ಕಾಮಗಾರಿಯ ಬಗ್ಗೆ ಮನವರಿಕೆ ಮಾಡಿ, ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಸೂಚಿಸಲಾಗಿತ್ತು. ಆದರೆ, ಪ್ರಯೋಜನವಾಗಲಿಲ್ಲ.

ವಿನಯ ಕುಮಾರ ಸೊರಕೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ನೆರೆ ಅನಾಹುತ ತಪ್ಪಿಸಲು ಪ್ರತಿ ಮಳೆಗಾಲದಲ್ಲಿ ಉಕ್ಕಿ ಹರಿಯುವ ಜೀವ ನದಿಗಳ ನೀರನ್ನು ಕುಡಿಯುವ, ಕೃಷಿ ಹಾಗೂ ಇತರೆ ಉದ್ದೇಶಗಳಿಗೆ ಬಳಕೆಯಾಗುವಂತೆ ಯೋಜನಾ ವರದಿ ಸಿದ್ಧಪಡಿಸಿದ್ದರು. ಹಿರಿಯ ಮುತ್ಸದ್ಧಿಗಳಾದ ದಿ.ಆಸ್ಕರ್ ಫರ್ನಾಂಡಿಸ್ ಹಾಗೂ ಪ್ರತಾಪ್ ಚಂದ್ರ ಶೆಟ್ಟಿ ಅವರ ಸಲಹೆ ಮೇರೆಗೆ ಯೋಜನೆ ರೂಪಿಸಲಾಗಿತ್ತು. ಈ ಪ್ರಸ್ತಾವವೂ ನನೆಗುದಿಗೆ ಬಿದ್ದಿದೆ.

ಪರಿಣಾಮ ಬೈಂದೂರು ಹಾಗೂ ಕುಂದಾಪುರ ತಾಲ್ಲೂಕು ವ್ಯಾಪ್ತಿಯ ‌ ಸಾಲ್ಬುಡ, ನಾಡ, ಗುಡ್ಡೆಗುಡ್ಡೆಯಂಗಡಿ, ಹಡವು, ಪಡುಕೋಣೆ, ಚಿಕ್ಕಳ್ಳಿ, ಬಡಾಕೆರೆ, ನಾವುಂದದ ಕುದ್ರು, ಮರವಂತೆ ಹಾಗೂ ಸೇನಾಪುರಗಳಲ್ಲಿ ನಿರಂತರವಾಗಿ ನೆರೆ ಭೀತಿ ಎದುರಾಗುತ್ತಿದೆ.

ಉಡುಪಿ ನಗರ ಕೂಡ ಮಳೆಗಾದಲ್ಲಿ ಕೃತಕ ನೆರೆಗೆ ಸಿಲುಕುತ್ತದೆ. ಮೂಡನಿಡಂಬೂರು, ಮಠದಬೆಟ್ಟು, ಬೈಲಕೆರೆ, ಕೃಷ್ಣಮಠದ ಸುತ್ತಮುತ್ತಲಿನ ಪ್ರದೇಶಗಳು ಸಣ್ಣ ಮಳೆಗೂ ನಲುಗುತ್ತವೆ. ನೂರಾರು ಮನೆಗಳಿಗೆ ಮಳೆಯ ನೀರು ನುಗ್ಗಿ ಸಾರ್ವಜನಿಕರು ಸಮಸ್ಯೆಗೆ ಸಿಲುಕುತ್ತಾರೆ.

ನಗರದ ಮಧ್ಯೆ ಹರಿಯುವ ಕಲ್ಸಂಕ ತೋಡಿನ ಹೂಳನ್ನು ಕಾಲಕಾಲಕ್ಕೆ ತೆಗೆಯದೆ ಬನ್ನಂಜೆ ವಾರ್ಡ್‌ನ ಮೂಡನಿಡಂಬೂರು ನಿವಾಸಿಗಳು ಮಳೆಗಾಲದಲ್ಲಿ ಜಾಗರಣೆ ಮಾಡುವಂತಾಗಿದೆ. ಗದ್ದೆಗಳಿದ್ದ ಜಾಗದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣವಾಗಿ ನೀರಿನ ಹರಿವಿಗೆ ಅಡ್ಡಿಯಾಗಿರುವುದು ಕೂಡ ಕೃತಕ ನೆರೆ ಹೆಚ್ಚಾಗಲು ಕಾರಣ ಎನ್ನಲಾಗಿದೆ.

ಬೈಂದೂರು; ಮುಗಿಯದ ಗೋಳು
ಕರಾವಳಿ ಮಲೆನಾಡು ಪ್ರದೇಶ ಒಳಗೊಂಡಿರುವ ಬೈಂದೂರು ತಾಲ್ಲೂಕಿನ ಜಲಪ್ರವಾಹಕ್ಕೆ ಹಲವು ಗ್ರಾಮಗಳು ನಲುಗಿವೆ. ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕಡಲ್ಕೊರೆತವಾಗಿದೆ. ಕಷ್ಟನಷ್ಟಗಳು ಸಂಭವಿಸಿವೆ. ಶಿರೂರು ಗ್ರಾಮದ ಆಲಂದೂರು, ತೂದಳ್ಳಿ, ಹೊಸೂರು, ಕರಾವಳಿ, ಮೇಲ್ಪಂಕ್ತಿ, ತಗ್ಗರ್ಸೆ ಗ್ರಾಮದ ತಗ್ಗುಪ್ರದೇಶ, ನಾವುಂದ ಗ್ರಾಮದ ಸಾಲ್ಬುಡ, ಬಡಾಕೆರೆ, ಕುದ್ರು, ನಾಡ, ಗುಡ್ಡೆಅಂಗಡಿ, ಪಡುಕೋಣೆ, ಹಳಗೇರಿ, ಹೇರಂಜಾಲು, ಕಾಲ್ತೋಡು ಗ್ರಾಮಗಳು ನೆರೆಗೆ ತತ್ತರಿಸಿವೆ.

ನೆರೆಗೆ ಕಾರಣ:ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸುರಿಯುವ ಧಾರಾಕಾರ ಮಳೆಯಿಂದ ಶಿರೂರು ಹೊಳೆ, ಸುಮನಾ ನದಿ, ಸೌಪರ್ಣಿಕಾ ನದಿ, ಎಡಮಾವಿನ ಹೊಳೆಗಳು ತುಂಬಿ ಹರಿಯುತ್ತದೆ. ನದಿಯ ನೀರು ಸಮುದ್ರಕ್ಕೆ ಸೇರಲು ಎದುರಾಗುವ ಅಡ್ಡಿಗಳಿಂದ ನದಿಪಾತ್ರದ ತಗ್ಗಪ್ರದೇಶಗಳು ಮುಳುಗಡೆಯಾಗಿ ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೃಷಿ ಹಾಳಾಗುತ್ತಿದೆ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತವೆ.

ನದಿಗಳ ಇಕ್ಕೆಲಗಳಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರು ಜಮೀನನಲ್ಲೇ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಇವರಿಗೆ ಪ್ರತಿವರ್ಷವೂ ನೆರೆ ಸಂಕಷ್ಟ ತಪ್ಪಿದ್ದಲ್ಲ. ನದಿಯ ನೀರಿನ ಪ್ರಮಾಣ ಹೆಚ್ಚಾದರೆ ಗದ್ದೆಗಳು, ತೋಟಗಳು ಜಲಾವೃತಗೊಳ್ಳುತ್ತವೆ. ಮನೆಗಳಿಗೆ ನೀರು ನುಗ್ಗುತ್ತದೆ. ಎಷ್ಟೆಲ್ಲ ಅಧ್ವಾನಗಳಿದ್ದರೂ ಇಲ್ಲಿಯ ಜನರು ನೆರೆ ಇಳಿದ ಕೂಡಲೇ ಮತ್ತೆ ಬದುಕು ಕೊಟ್ಟಿಕೊಳ್ಳುತ್ತಾರೆ.

ಪರಿಹಾರ: ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ ಎಂದರೆ ತಗ್ಗುಪ್ರದೇಶದಲ್ಲಿರುವ ಜನರನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಿ ಅಗತ್ಯ ವ್ಯವಸ್ಥೆ ಮಾಡಬೇಕು. ಬೆಳೆನಾಶಕ್ಕೆ ಸೂಕ್ತ ಪರಿಹಾರ ನೀಡಬೇಕು. ಮರವಂತೆ, ಕಿರಿಮಂಜೇಶ್ವರ, ಉಪ್ಪುಂದ, ಪಡುವರಿ, ಶಿರೂರುಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ರೂಪಿಸಬೇಕು.

ಉಕ್ಕಿ ಹರಿವ ಸ್ವರ್ಣೆ: ಭಾರಿ ಮಳೆಗೆ ಹಿರಿಯಡಕ ಪರಿಸರದ ಬೊಮ್ಮರಬೆಟ್ಟು, ಭೈರಂಪಳ್ಳಿ, ಶೀರೂರು, ಆತ್ರಾಡಿ, ಪರೀಕ ಪರಿಸರದ ಸ್ವರ್ಣಾ ನದಿ ಪಾತ್ರದ ಕೃಷಿ ಭೂಮಿಗಳು, ಪಾಪನಾಶಿನಿ ನದಿ ಪಾತ್ರದ ಹಿರೇಬೆಟ್ಟು, ಮರ್ಣೆ, ಕೊಡಂಗಳ, ಕರ್ವಾಲು, ಪೆರ್ಣಂಕಿಲ, ಕೊಡಿಬೆಟ್ಟು ಭಾಗದ ಕೃಷಿ ಭೂಮಿ, ತೋಟಗಳು ಜಲಾವೃತಗೊಳ್ಳುತ್ತಿವೆ.

ನದಿಗಳಲ್ಲಿ ಅಪಾರ ಪ್ರಮಾಣದಲ್ಲಿ ಮರಳು ತುಂಬಿರುವ ಕಾರಣ ಸಾಧಾರಣ ಮಳೆಗೂ ನದಿ ಪಾತ್ರದ ಕೃಷಿ ಭೂಮಿಗಳು ಜಲಾವೃತಗೊಳ್ಳುತ್ತಿವೆ. ‌

ಬ್ರಹ್ಮಾವರದಲ್ಲಿ ಕೃತಕ ನೆರೆ: ಕೋಟ ಗ್ರಾಮ ಪಂಚಾಯಿತಿ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಹಾಗೂ ಹೊಳೆಗಳ ಹೂಳೆತ್ತದ ಪರಿಣಾಮ ಕೃತಕ ನೆರೆಯಿಂದ ಕೃಷಿಗೆ ಹಾನಿಯಾಗುತ್ತಿದೆ. ಗಿಳಿಯಾರು, ಕಾರ್ಕಡ, ಚಿತ್ರಪಾಡಿ, ಬನ್ನಾಡಿ ಪರಿಸರದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತವಾಗುತ್ತಿದೆ. ನೆರೆ ನೀರು ಇಳಿಯದೆ ದೋಣಿಯ ಮೂಲಕ ಜನರು ಸಾಗಬೇಕಾದ ಪರಿಸ್ಥಿತಿ ಇದೆ. ಮಲ್ಯಾಡಿಯಿಂದ ಕಾವಡಿವರೆಗೆ ಹರಿಯುತ್ತಿರುವ ನದಿಯ ಹಾಗೂ ಮಣೂರು, ಗಿಳಿಯಾರು, ಚಿತ್ರಪಾಡಿ, ಬೇಳೂರು, ಅಚ್ಲಾಡಿ ಗ್ರಾಮದಲ್ಲಿ ಹರಿಯುವ ತೋಡುಗಳ ಹೂಳೆತ್ತದೆ ಸಮಸ್ಯೆ ಹೆಚ್ಚಾಗಿದೆ.

ಕೊಯ್ಕೂರು ರಸ್ತೆ, ಗಿಳಿಯಾರು ರಸ್ತೆ, ಬನ್ನಾಡಿ ರಸ್ತೆಯಲ್ಲಿ ನೀರು ಹರಿಯುವ ತೋಡನ್ನು ಕಿರು ಸೇತುವೆಯಾಗಿ ನಿರ್ಮಿಸಿ, ಕೃಷಿ ಭೂಮಿ ನಾಶ ಮಾಡುತ್ತಿರುವ ಅಂತರಗಂಗೆ ಕಳೆಯ ನಿರ್ಮೂಲನಕ್ಕೆ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯರ ಬೇಡಿಕೆ. ಉಪ್ಪೂರು, ಆರೂರು, ಬಾವಲಿಕುದ್ರು ಪ್ರದೇಶದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದ್ದು, ಕಿಂಡಿ ಅಣೆಕಟ್ಟುಗಳಲ್ಲಿ ಮರದ ದಿಮ್ಮಿಗಳು, ಕಸ ಸಿಲುಕಿ ನೀರು ಸರಾಗವಾಗಿ ಹರಿಯಲು ಸಾದ್ಯವಾಗದೆ ಸಮಸ್ಯೆ ಉಂಟಾಗುತ್ತಿದೆ.

ಆಗುಂಬೆ ಘಾಟಿ: ಪ್ರತಿ ಮಳೆಗಾಲದಲ್ಲಿ ಸಮಸ್ಯೆ
ಉಡುಪಿ–ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕೊಂಡಿಯಾಗಿರುವ ಆಗುಂಬೆ ಘಾಟಿಯಲ್ಲಿ ಪ್ರತಿ ಮಳೆಗಾಲದ ಸಂದರ್ಭ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಘಾಟಿಯಂಚಿನ ಗುಡ್ಡ ಕುಸಿದು, ಬೃಹತ್‌ ಗಾತ್ರದ ಮರಗಳು ರಸ್ತೆಗೆ ಬೀಳುತ್ತಿವೆ.ಮಲೆನಾಡುಹಾಗೂಕರಾವಳಿಯ ಸಂಪರ್ಕ ಕಡಿತಗೊಳ್ಳುತ್ತಿದೆ. ಸೀತಾನದಿ ಉಕ್ಕಿ ಹರದು ಉಡುಪಿ–ಹೆಬ್ರಿ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಅಡ್ಡಿಯಾಗುತ್ತಲೇ ಇದೆ. ಪರಿಣಾಮ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಂದ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇಷ್ಟಾದರೂ ಮಳೆಗಾಲಕ್ಕೆ ಮುನ್ನ ಘಾಟಿಯ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ.

ಪುನರ್ವಸತಿ ಕಲ್ಪಿಸುವ ಉದ್ದೇಶ: ಜಿಲ್ಲಾಧಿಕಾರಿ
ಮಳೆಗಾಲದಲ್ಲಿ ಕೃತಕ ನೆರೆ ಹೆಚ್ಚಾಗಿ ಬಾಧಿಸುತ್ತಿರುವ ಗ್ರಾಮಗಳ ಪಟ್ಟಿ ಮಾಡುತ್ತಿದ್ದು ಅಲ್ಲಿನ ಗ್ರಾಮಸ್ಥರಿಗೆ ಬೇರೆಡೆ ಪುನರ್ವಸತಿ ಕಲ್ಪಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು. ಮಳೆಯ ನೀರಿನ ಹರಿವಿಗೆ ಅಡ್ಡಿಯಾಗುವ ಕಾಮಗಾರಿಗಳಿಗೆ ತಡೆಯೊಡ್ಡಲಾಗುವುದು. ನಗರ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಮಳೆಗಾಲಕ್ಕೂ ಮುನ್ನ ತೋಡುಗಳ ಸ್ವಚ್ಛಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದರು.

––––––––––

ನೆರವು: ರಾಜೇಶ್‌ ಕೆ.ಸಿ, ಸುಬ್ರಹ್ಮಣ್ಯ ಭಟ್‌, ಸುಕುಮಾರ್ ಮುನಿಯಾಲ್‌, ರಾಘವೇಂದ್ರ ಭಟ್‌, ಶೇಷಗಿರಿ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT