ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮಳೆಗೆ ಮುರಿದ ಬದುಕು ಕಟ್ಟಿಕೊಳ್ಳಲು ಪರದಾಟ

ನೂರಾರು ವಾಹನ, ಗೃಹೋಪಯೋಗಿ ವಸ್ತುಗಳಿಗೆ ಹಾನಿ, ಕೋಟ್ಯಂತರ ರೂಪಾಯಿ ನಷ್ಟ
Last Updated 22 ಸೆಪ್ಟೆಂಬರ್ 2020, 14:55 IST
ಅಕ್ಷರ ಗಾತ್ರ

ಉಡುಪಿ: ಎರಡು ದಿನಗಳ ಹಿಂದೆ ಜಿಲ್ಲೆಯಲ್ಲಿ ಅಬ್ಬರಿಸಿದ್ದ ಮಳೆ ಮಂಗಳವಾರ ಕ್ಷೀಣವಾಗಿದೆ. ಆದರೆ, ಬಡ ಮಧ್ಯಮ ವರ್ಗದವರ ಬದುಕಿಗೆ ಬಲವಾದ ಪೆಟ್ಟುಕೊಟ್ಟು ಹೋಗಿದೆ. ನೆರೆ ಇಳಿದ ಬಳಿಕ ಮುರಿದಿದ್ದ ಬದುಕು ಕಟ್ಟಿಕೊಳ್ಳಲು ಸಂತ್ರಸ್ತರು ಪರದಾಡುತ್ತಿದ್ದಾರೆ.

ಉಡುಪಿ, ಕಾಪು, ಬ್ರಹ್ಮಾವರ ತಾಲ್ಲೂಕು ಮಹಾಮಳೆಗೆ ಹೆಚ್ಚು ನಲುಗಿದ್ದವು. ಜಿಲ್ಲಾಡಳಿತದ ಅಂಕಿ ಅಂಶಗಳ ಪ್ರಕಾರ 67 ಮನೆಗಳು ಮಾತ್ರ ಸಂಪೂರ್ಣ ಕುಸಿದಿವೆ.ಆದರೆ, ನೂರಾರುಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ. ಜಿಲ್ಲಾಡಳಿತ ನೆರೆಹಾನಿ ಅಂದಾಜು ವಿವರವನ್ನು ಕಲೆಹಾಕುತ್ತಿದೆ.

ಜಿಲ್ಲೆಯಲ್ಲಿ ಮಳೆ ಕ್ಷೀಣವಾದ ಬಳಿಕ ಕಾಳಜಿ ಕೇಂದ್ರಗಳಿಂದ ಸ್ವಂತ ಸೂರುಗಳಿಗೆ ತೆರಳಿರುವ ಸಂತ್ರಸ್ತರು, ಮನೆಯ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ. ಭಾಗಶಃ ಬಿದ್ದ ಗೋಡೆಗಳನ್ನು ರಿಪೇರಿ ಮಾಡುತ್ತಿದ್ದಾರೆ.

ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಹಾನಿ:ಸಾವಿರಾರು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಎಲೆಕ್ಟ್ರಾನಿಕ್ಸ್‌ ಉಪಕರಣಗಳು ಕೆಟ್ಟುಹೋಗಿವೆ. ಟಿ.ವಿ, ರೆಫ್ರೆಜರೇಟರ್‌ ಸೇರಿದಂತೆ ಕೆಟ್ಟ ಗೃಹೋಪಯೋಗಿ‌ ವಸ್ತಗಳನ್ನು ದುರಸ್ತಿಗೆ ಕೊಂಡೊಯ್ಯುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡುಬಂತು.

ಬೈಕ್‌, ಕಾರುಗಳಿಗೆ ಹಾನಿ:ಬನ್ನಂಜೆ, ಮೂಡನಿಡಂಬೂರು, ಬೈಲಕೆರೆ, ಕಲ್ಸಂಕ, ಮಠದಬೆಟ್ಟು, ಆದಿ ಉಡುಪಿ ಹಾಗೂ ಕೃಷ್ಣಮಠದ ಸುತ್ತಮುತ್ತಲಿನ ಬಡಾವಣೆಗಳು ಮಳೆಯಿಂದ ಜಲಾವೃತಗೊಂಡಿದ್ದರಿಂದ ಮನೆಯ ಮುಂದೆ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ನೂರಾರು ಬೈಕ್‌ಗಳು ಹಾಗೂ ಕಾರುಗಳು ಮುಳುಗಿ ಹೆಚ್ಚಿನ ಹಾನಿ ಸಂಭವಿಸಿದೆ. ಕೆಟ್ಟುನಿಂತಿದ್ದ ವಾಹನಗಳನ್ನು ಮಾಲೀಕರು ದುರಸ್ತಿ ಮಾಡಿಸಲು ಗ್ಯಾರೇಜ್‌ಗಳಿಗೆ ಸಾಗಿಸಿದರು.

ಕೊಚ್ಚಿಹೋದ ವಸ್ತುಗಳು:ಮಹಾಮಳೆಗೆ ಮನೆಯಲ್ಲಿದ್ದ ವಸ್ತುಗಳು ತೇಲಿಹೋಗಿವೆ. ಹಾಸಿಗೆ ಸಹಿತ, ಮನೆ ಬಳಕೆಯ ಸಾಮಾಗ್ರಿಗಳು ಕೊಚ್ಚಿಕೊಂಡು ಹೋಗಿದ್ದು, ನಗರದಲ್ಲಿ ಅಲ್ಲಲ್ಲಿ ಹರಿಯುತ್ತಿದ್ದ ಹಳ್ಳ, ತೋಡುಗಳಲ್ಲಿ ಸಿಲುಕಿದ್ದ ದೃಶ್ಯ ಕಂಡುಬಂತು. ಜತೆಗೆ, ಬಟ್ಟೆ–ಬರೆಗಳು ಕೆಸರಿನಲ್ಲಿ ತೊಯ್ದು ಸಂಪೂರ್ಣ ಹಾಳಾಗಿವೆ. ಮಳೆಗಾಲಕ್ಕೆ ಸಂಗ್ರಹಿಸಿಟ್ಟಿದ್ದ ಆಹಾರ ಪದಾರ್ಥಗಳು ಮಳೆನೀರಿನಲ್ಲಿ ತೊಯ್ದು ನಾಶವಾಗಿವೆ.

ಗುಂಡಿಬಿದ್ದ ರಸ್ತೆಗಳು:ಭಾರಿ ಮಳೆಗೆ ನಗರದ ಹಲವು ರಸ್ತೆಗಳು ಹಾಳಾಗಿದ್ದು, ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಒಳಚರಂಡಿ ವ್ಯವಸ್ಥೆ ಕಟ್ಟಿಕೊಂಡಿದ್ದು, ನೆರೆ ಪೀಡಿತ ಪ್ರದೇಶಗಳು ಗಬ್ಬು ನಾರುತ್ತಿದೆ. ಮಳೆನೀರು ಸರಾಗವಾಗಿ ಹರಿಯುವ ತೋಡುಗಳು ಕೂಡ ಅಲ್ಲಲ್ಲಿ ಕಟ್ಟಿಕೊಂಡು ಸಮಸ್ಯೆ ಸೃಷ್ಟಿಯಾಗಿದೆ. ಉಡುಪಿ ತಾಲ್ಲೂಕಿನಲ್ಲಿ ತೋಟಗಾರಿಕಾ ಬೆಳೆಗಳಿಗೂ ಹೆಚ್ಚಿನ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT