ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರಿಸಿದ ಮಳೆ: ಮನೆಗಳು ಜಲಾವೃತ

63 ವಿದ್ಯುತ್ ಕಂಬಗಳಿಗೆ ಹಾನಿ; ತಗ್ಗುಪ್ರದೇಶಗಳ ಜನಜೀವನ ಅಸ್ತವ್ಯಸ್ತ
Last Updated 17 ಜುಲೈ 2020, 13:28 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಅವಾಂತರಗಳನ್ನು ಸೃಷ್ಟಿಸಿದೆ. ಗಾಳಿ ಮಳೆಗೆ ಮರಗಳು ಬಿದ್ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಉಡುಪಿ ನಗರದಲ್ಲಿ ಜನವಸತಿ ಪ್ರದೇಶಗಳು ಜಲಾವೃತಗೊಂಡು, ಮನೆಗಳಿಗೆ ನೀರು ನುಗ್ಗಿದೆ. ರಸ್ತೆಗಳು, ತಗ್ಗು ಪ್ರದೇಶಗಳು ಕೆರೆಗಳಂತೆ ಕಾಣುತ್ತಿದ್ದು ಕೃತಕ ನೆರೆ ಭೀತಿ ಸೃಷ್ಟಿಯಾಗಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು, ಕಡಲ್ಕೊರೆತ ಭೀತಿ ಎದುರಾಗಿದೆ.

ಉಡುಪಿಯ ಮೂಡನಿಡಂಬೂರಿನಲ್ಲಿರುವ ಬ್ರಹ್ಮ ಬೈದರ್ಕಳ ಗರೋಡಿ ಬಳಿ ಮೊಣಕಾಲುದ್ದ ನೀರು ತುಂಬಿಕೊಂಡಿತ್ತು. ಬೈಲಕೆರೆ, ಬನ್ನಂಜೆ, ಮಠದಬೆಟ್ಟು ಪ್ರದೇಶಗಳು ಜಲಾವೃತಗೊಂಡಿದ್ದವು. ಅಪಾರ್ಟ್‌ಮೆಂಟ್‌ಗಳ ಪಾರ್ಕಿಂಗ್ ಜಾಗ ಈಜು ಕೊಳದಂತಾಗಿದ್ದವು.

ಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶ ಕೆರೆಯಂತಾಗಿತ್ತು. ಕಲ್ಸಂಕ ತೋಡು ತುಂಬಿ ಹರಿದು, ಅಕ್ಕಪಕ್ಕದ ಮನೆಗಳಿಗೆ ನೀರುನುಗ್ಗಿ ನಿವಾಸಿಗಳು ಮನೆಯಿಂದ ಹೊರಗೆ ಬಾರದಂತ ಪರಿಸ್ಥಿತಿ ನಿರ್ಮಾಣವಾಗಿತ್ತು.‌

ಧರೆಗುರುಳಿದ ವಿದ್ಯುತ್ ಕಂಬಗಳು:ಗುರುವಾರ ರಾತ್ರಿ ಹಾಗೂ ಶುಕ್ರವಾರ ಸುರಿದ ಮಳೆಗೆ ಜಿಲ್ಲೆಯಲ್ಲಿ 63 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಉಡುಪಿಯಲ್ಲಿ 35, ಕುಂದಾಪುರದಲ್ಲಿ 28 ಕಂಬಗಳಿಗೆ ಹಾನಿಯಾಗಿದೆ. ಬೆಸ್ಕಾಂ ಸಿಬ್ಬಂದಿ 50 ಕಂಬಗಳನ್ನು ಬದಲಾಯಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಗಾಳಿ ಮಳೆಗೆ 1.74 ಕಿ.ಮೀ ವಿದ್ಯುತ್ ಮಾರ್ಗ ಹಾನಿಯಾಗಿದ್ದು, ಗ್ರಾಮೀಣ ಭಾಗದಲ್ಲಿವಿದ್ಯುತ್ ವ್ಯತ್ಯಯ ಉಂಟಾಗಿತ್ತು. ದುರಸ್ಥಿ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಸ್ತೆಗೆ ಚರಂಡಿ ಹೊಲಸು:ರಾತ್ರಿಯಿಡೀ ಸುರಿದ ಮಳೆಯಿಂದ ಚರಂಡಿ ತುಂಬಿ ತ್ಯಾಜ್ಯ ಮನೆಯೊಳಗೆ ಹರಿದು, ಸಾರ್ವಜನಿಕರು ಪರದಾಡಬೇಕಾಯಿತು. ನಗರದ ಚರಂಡಿಗಳು, ಮ್ಯಾನ್‌ಹೋಲ್‌ಗಳು ಉಕ್ಕುತ್ತಿದ್ದು ರಸ್ತೆಗೆ ಹೊಲಸು ಹರಿಯುತ್ತಿದ್ದು, ಹಲವು ಬಡಾವಣೆಗಳಲ್ಲಿ ಅಸಹನೀಯ ವಾತಾವರಣ ನಿರ್ಮಾಣವಾಗಿದೆ.

ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಜಿಟಿ ಜಿಟಿ ಮಳೆ:ದಿನವಿಡೀ ಮೋಡಕವಿದ ವಾತಾವರಣವಿದ್ದು, ಜಿಟಿಜಿಟಿ ಮಳೆ ಸುರಿಯುತ್ತಲೇ ಇತ್ತು. ಮಲ್ಪೆ, ಪಡುಕೆರೆ ಭಾಗದಲ್ಲಿ ಕಡಲ್ಕೊರೆತ ಭೀತಿ ಶುರುವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT