ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಂದೂರು ನೆರೆ ಹಾನಿ: ಬದುಕು ಕಟ್ಟಿಕೊಳ್ಳುತ್ತಿರುವ ಸಂತ್ರಸ್ತರು

ಬೈಂದೂರು ನೆರೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಶಾಸಕ ಭೇಟಿ
Last Updated 10 ಜುಲೈ 2022, 15:23 IST
ಅಕ್ಷರ ಗಾತ್ರ

ಉಡುಪಿ/ಬೈಂದೂರು: ಜಿಲ್ಲೆಯಾದ್ಯಂತ ಭಾನುವಾರವೂ ಬಿರುಸಿನ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಲೆನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ಕರಾವಳಿಯಲ್ಲಿ ಸೌಪರ್ಣಿಕ ಸೇರಿದಂತೆ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು ನೆರೆ ಪ್ರಮಾಣ ಸಂಪೂರ್ಣವಾಗಿ ತಗ್ಗಿಲ್ಲ.

ಬೈಂದೂರು ತಾಲ್ಲೂಕಿನಲ್ಲಿ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಭೇಟಿನೀಡಿ ಪರಿಶೀಲಿಸಿ ಸಂತ್ರಸ್ತರಿಗೆ ಆಹಾರದ ಕಿಟ್‌ ವಿತರಿಸಿದರು.

ನಾವುಂದ ಗ್ರಾಮದ ಸಾಲ್ಬುಡ, ಕುದ್ರು ಸೇರಿದಂತೆ ಹಲವು ಭಾಗಗಳಿಗೆ ನೆರೆ ನೀರು ನುಗ್ಗಿ ಜಲಾವೃತಗೊಂಡಿದ್ದವು. ತಾಲ್ಲೂಕಿನಲ್ಲಿ ಮಳೆ ಕ್ಷೀಣಿಸಿದ್ದು, ನೆರೆ ಕಡಿಮೆಯಾಗುತ್ತಿದೆ. ಮನೆ ಬಿಟ್ಟು ತೆರಳಿದ್ದ ಸಂತ್ರಸ್ತರು ಮನೆಗಳತ್ತ ಮುಖ ಮಾಡಿದ್ದು ಮತ್ತೆ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿದ್ದಾರೆ. ಮಳೆಗೆ ಹಾಳಾದ ಮನೆಯಲ್ಲಿದ್ದ ವಸ್ತುಗಳನ್ನು ಹೊರಹಾಕುವ ಹಾಗೂ ಮನೆಯ ದುರಸ್ತಿ ಕಾರ್ಯ ನಡೆಯುತ್ತಿದೆ.

ಸ್ಥಳೀಯ ಶಾಸಕರಾದ ಬಿ.ಎಂ.ಸುಕುಮಾರ ಶೆಟ್ಟಿ ಹಾಗೂ ಅಧಿಕಾರಿಗಳು ನೆರೆ ಪೀಡಿತ ಗ್ರಾಮಗಳಿಗೆ ಭೇಟಿನೀಡಿ 80 ಕುಟುಂಬಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸಿದರು.

ಪ್ರತಿವರ್ಷವೂ ನೆರೆಯಿಂದ ತೊಂದರೆಗೊಳಗಾಗುವ ಈ ಭಾಗದ ಜನರಿಗೆ ನೆರೆಯ ಮುನ್ನೆಚ್ಚರಿಕೆ ನೀಡುವ
ಹಾಗೂ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಶಾಸಕರು ಜಿಲ್ಲಾಧಿಕಾರಿ ಜತೆ ಚರ್ಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಪ್ರಸನ್ನ, ಬೈಂದೂರು ತಹಶೀಲ್ದಾರ ಕಿರಣ ಗೋರಯ್ಯ,
ಮುಖಂಡರಾದ ದೀಪಕ್ ಕುಮಾರ ಶೆಟ್ಟಿ ಇದ್ದರು.

ಕುಸಿದ ಶಾಲೆಗೆ ಶಾಸಕರ ಭೇಟಿ

ಶನಿವಾರ ಸುರಿದ ಭಾರಿ ಗಾಳಿಮಳೆಗೆ ಶಾಲಾ ಕಟ್ಟಡ ಕುಸಿದಿದ್ದ ಉಪ್ಪುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಮ್ಮನವರ ತೊಪ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭಾನುವಾರ ಶಾಸಕ ಸುಕುಮಾರ ಶೆಟ್ಟಿ ಭೇಟಿನೀಡಿ ಪರಿಶೀಲನೆ ನಡೆಸಿದರು.

ಹೊಸ ಕಟ್ಟಡ ನಿರ್ಮಿಸುವವವರೆಗೂ ಹತ್ತಿರದಲ್ಲಿರುವ ಶಾಲೆಯಲ್ಲಿ ಮಕ್ಕಳಿಗೆ ಕಲಿಕೆಗೆ ಅವಕಾಶ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ, ಸದಸ್ಯ ಶ್ರೀಧರ, ಪಿಡಿಒ ರಿಯಾಜ್ ಅಹಮದ್, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನಾಗರಾಜ ಇದ್ದರು.

ಮನೆಗಳಿಗೆ ಹಾನಿ:

ಬ್ರಹ್ಮಾವರ ತಾಲ್ಲೂಕಿನ ಮಣೂರು, ಕಳ್ತೂರು, ಕಾರ್ಕಡ, ಚಾಂತಾರು, ಉಡುಪಿ ತಾಲ್ಲೂಕಿನ ಅಲೆವೂರು, ಕೊರಂಗ್ರಪಾಡಿ, ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು, ಸಾಣೂರು, ಬೈಂದೂರು ತಾಲ್ಲೂಕಿನ ಉಪ್ಪುಂದ, ಕಿರಿಮಂಜೇಶ್ವರ, ಬಡಾಕೆರೆ, ನಾವುಂದ, ಹೆರೂರು, ಕುಂದಾಪುರ ತಾಲ್ಲೂಕಿನ ಹೇರಾಡಿ, 74 ಉಳ್ತೂರು, ಹೆಂಗವಳ್ಳಿ ಗ್ರಾಮಗಳಲ್ಲಿ ಮನೆಗಳು ಹಾಗೂ ಜಾನುವಾರು ಕೊಟ್ಟಿಗೆಗಳಿಗೆ ಹಾನಿಯಾಗಿದೆ.

ಕಳೆದ 24 ತಾಸಿನಲ್ಲಿ ಉಡುಪಿ ತಾಲ್ಲೂಕಿನಲ್ಲಿ 80.1 ಮಿ.ಮೀ, ಬ್ರಹ್ಮಾವರದಲ್ಲಿ90.7, ಕಾಪುವಿನಲ್ಲಿ 102.1, ಕುಂದಾಪುರದಲ್ಲಿ 63.7, ಬೈಂದೂರಿನಲ್ಲಿ 73.6, ಕಾರ್ಕಳದಲ್ಲಿ 83.1 ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ 75.9 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT