ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮತ್ತೆ ವರುಣನ ಅಬ್ಬರ: ಹಲವೆಡೆ ಕೃತಕ ನೆರೆ

ಭತ್ತದ ಗದ್ದೆ, ಅಡಿಕೆ ತೋಟ ಜಲಾವೃತ: ಹಾನಿ
Last Updated 4 ಜುಲೈ 2022, 13:46 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಸೋಮವಾರ ಧಾರಾಕಾರ ಮಳೆ ಸುರಿಯಿತು. ಭಾನುವಾರ ತಡ ರಾತ್ರಿಯಿಂದಲೇ ಆರಂಭವಾದ ಮಳೆ ಎಡೆಬಿಡದೆ ಸುರಿದ ಪರಿಣಾಮ ರಸ್ತೆಗಳು ಜಲಾವೃತಗೊಂಡು ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ಬೆಳಿಗ್ಗೆ ಶಾಲಾ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ, ಕಚೇರಿಗಳಿಗೆ ತೆರಳುವ ನೌಕರರಿಗೆ ಹಾಗೂ ನಿತ್ಯದ ಕಾರ್ಯಗಳಿಗೆ ನಗರಕ್ಕೆ ಬರುವ ಸಾರ್ವಜನಿಕರಿಗೆ ಮಳೆ ಅಡ್ಡಿಯಾಯಿತು.

ಉಡುಪಿಯ ಕರಾವಳಿ ಜಂಕ್ಷನ್‌, ರಾಷ್ಟ್ರೀಯ ಹೆದ್ದಾರಿ 66ರ ಸೇವಾ ರಸ್ತೆಗಳು ನೀರಿನಲ್ಲಿ ಮುಳುಗಿ ಸಂಚಾರಕ್ಕೆ ಸಮಸ್ಯೆಯಾಯಿತು. ಉಡುಪಿಯ ಶಾರದಾ ನಗರ, ಬೈಲಕೆರೆ, ಮಠದ ಬೆಟ್ಟು, ಮೂಡ ನಿಡಂಬೂರು ಸೇರಿದಂತೆ ಹಲವು ತಗ್ಗು ಪ್ರದೇಶಗಳಿಗೆ ಮಳೆಯ ನೀರು ನುಗ್ಗಿ ಕೃತಕ ನೆರೆ ಸೃಷ್ಟಿಯಾಗಿತ್ತು.

ಬೈಲೂರು ಕುಕ್ಕಿಕಟ್ಟೆಯಲ್ಲಿ ಚರಂಡಿಯ ಹೂಳು ತೆಗೆಯದ ಪರಿಣಾಮ ರಸ್ತೆ ಮೇಲೆ ಮಳೆ‌ನೀರು ನಿಂತಿತ್ತು. ಕುಕ್ಕಿಕಟ್ಟೆ ರೈಲ್ವೆ ಸೇತುವೆಯೂ ಜಲಾವೃತಗೊಂಡಿತ್ತು.

‌ಭಾರಿ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು ಮಲ್ಪೆಯ ಸಮುದ್ರದಲ್ಲಿ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿವೆ. ಗಾಳಿಯ ವೇಗವೂ ಹೆಚ್ಚಾಗಿದೆ. ಕಾಪು, ಪಡುಬಿದ್ರಿ, ಪಡುಕೆರೆ ಸೇರಿದಂತೆ ಹಲವೆಡೆ ಕಡಲ್ಕೊರೆತ ಶುರುವಾಗಿದೆ.

ಭಾರಿ ಮಳೆಗೆ ಹೆಬ್ರಿ ತಾಲ್ಲೂಕಿನ ಅಂಡಾರು ವರಂಗದಲ್ಲಿ ಅಡಿಕೆ ತೋಟಗಳಿಗೆ ನೀರು ನುಗ್ಗಿದ್ದು, ಭತ್ತದ ಕೃಷಿ ನಾಶವಾಗಿದೆ. ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 9.2 ಸೆಂ.ಮೀ, ಬ್ರಹ್ಮಾವರ 9.5, ಕಾಪು 4.7, ಕುಂದಾಪುರ 6.7, ಬೈಂದೂರು 8.4, ಕಾರ್ಕಳ 10.4, ಹೆಬ್ರಿಯಲ್ಲಿ 10.3 ಸೆಂ.ಮೀ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 8.6 ಸೆಂಮೀ ಮಳೆ ಬಿದ್ದಿದೆ.

ಧರೆಗುರುಳಿದ ವಿದ್ಯುತ್ ಕಂಬಗಳು:

ಭಾರಿ ಮಳೆಗೆ ಜಿಲ್ಲೆಯಲ್ಲಿ 51 ವಿದ್ಯುತ್ ಕಂಬಗಳು ಧರೆಗುರುಳಿವೆ. 1.55 ಕಿ.ಮೀ ಉದ್ದದ ವಿದ್ಯುತ್ ಪೂರೈಕೆ ಲೈನ್‌ ಹಾಳಾಗಿದೆ. ಮೂರು ವಿದ್ಯುತ್ ಪರಿವರ್ತಕಗಳು ಸುಟ್ಟುಹೋಗಿದ್ದು, ₹ 11.22 ಲಕ್ಷ ಹಾನಿಯಾಗಿದೆ.

ಜುಲೈ 1ರಿಂದ ಜಿಲ್ಲೆಯಲ್ಲಿ 134 ವಿದ್ಯುತ್ ಕಂಬಗಳು, 12 ಟ್ರಾನ್ಸ್‌ಫರಂಗಳು, 4.10 ಕಿಮೀ ಉದ್ದದ ವಿದ್ಯುತ್ ಲೈನ್‌ಗೆ ಹಾನಿಯಾಗಿದ್ದು ₹ 36 ಲಕ್ಷ ಹಾನಿ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT