ವರುಣನ ಅಬ್ಬರ: ಎಲ್ಲೆಡೆ ಜಲ ದಿಗ್ಭಂಧನ

7
ಧರೆಗುರುಳಿದ 146 ವಿದ್ಯುತ್ ಕಂಬಗಳು: ನೂರಾರು ಮನೆಗಳಿಗೆ ಭಾಗಶಃ ಹಾನಿ

ವರುಣನ ಅಬ್ಬರ: ಎಲ್ಲೆಡೆ ಜಲ ದಿಗ್ಭಂಧನ

Published:
Updated:
Deccan Herald

ಉಡುಪಿ: ಕಳೆದೆರಡು ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೂರಾರು ಮನೆಗಳಿಗೆ ನೀರುನುಗ್ಗಿದ್ದು ಭಾಗಶಃ ಹಾನಿಯಾಗಿದೆ. ಗೃಹೋಪಯೋಗಿ ವಸ್ತುಗಳು ಮಳೆಗೆ ಸಿಕ್ಕು ನಾಶವಾಗಿವೆ.

ನಗರ ವ್ಯಾಪ್ತಿಯ ಬನ್ನಂಜೆಯ ಮೂಡನಿಡಂಬೂರಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಭಾಗದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಸಮೀಪದ ಬ್ರಹ್ಮ ಬೈದರ್ಕಳ ದೇವಾಲಯಕ್ಕೂ ನೀರು ನುಗ್ಗಿದೆ. ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ರಸ್ತೆಗಳೆಲ್ಲ ಕೆರೆಗಳಾಗಿ ಮಾರ್ಪಟ್ಟಿವೆ. ಕರಾವಳಿ ಜಕ್ಷಂನ್‌, ಅಂಬಲಪಾಡಿ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತು ವಾಹನ ಸವಾರರು ತೊಂದರೆ ಅನುಭವಿಸುವಂತಾಯಿತು.

ಮಣಿಪಾಲದ ಎಎಲ್‌ಯುಎನ್‌ ಅವಿಯಟ್ ರಸ್ತೆ ಕೂಡ ನೀರಿನಿಂದ ಆವೃತ್ತವಾಗಿ, ಸಂಚಾರಕ್ಕೆ ಸಮಸ್ಯೆಯಾಯಿತು.

ಕಡಲು ಪ್ರಕ್ಷುಬ್ಧ:

ಭಾರಿ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರೀಕೃತ ಬೋಟ್‌ಗಳು ಬಂದರಿನತ್ತ ವಾಪಾಸಾಗುತ್ತಿವೆ. ಸಮುದ್ರದಲ್ಲಿ ಎದ್ದಿರುವ ಬಾರಿ ಅಲೆಗಳು ಆತಂಕ ಮೂಡಿಸಿದ್ದು, ತೀರಕ್ಕೆ ತೆರಳಲೂ ಸಾಧ್ಯವಾಗುತ್ತಿಲ್ಲ ಎಂದು ಮೀನುಗಾರರು ಆತಂಕ ವ್ಯಕ್ತಪಡಿಸಿದರು.

ಕೆಲವು ಬೋಟ್‌ಗಳ ಎಂಜಿನ್‌ನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದು, ಸಮುದ್ರದ ಮಧ್ಯೆಯೇ ಸಿಲುಕಿಕೊಂಡಿವೆ. ಕರಾವಳಿ ಕಾವಲುಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ದಾವಿಸಿದೆ. ಜತೆಗೆ, ಮೀನುಗಾರರು ಸಮುದ್ರಕ್ಕಿಳಿಯದಂತೆ ವ್ಯಾಪಕ ಪ್ರಚಾರ ಮಾಡಲಾಗಿದೆ. 

ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಜಿಲ್ಲೆಯಲ್ಲಿ 146 ವಿದ್ಯುತ್‌ ಕಂಬಗಳು ಮುರಿದು ಬಿದ್ದಿವೆ. ಹಲವು ಮರಗಳು ಧರೆಗುರುಳಿವೆ. ಮೂರು ಟ್ರಾನ್ಸ್‌ಫಾರಂಗಳು ಸುಟ್ಟುಹೋಗಿವೆ ಎಂದು ಮೆಸ್ಕಾ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆ ಜಿಲ್ಲೆಯಲ್ಲಿ 35.79 ಲಕ್ಷ ಮನೆಹಾನಿ ಅಂದಾಜಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿಯಲ್ಲಿ  155.3 ಮಿ.ಮೀ, ಕಾರ್ಕಳದಲ್ಲಿ 152.1 ಮಿ.ಮೀ, ಕುಂದಾಪುರದಲ್ಲಿ223.9 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 177.1 ಮಿ.ಮೀ ಮಳೆ ಬಿದ್ದಿದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !