ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ನೀರು ಸಂಗ್ರಹ ಇಂದಿನ ಅನಿವಾರ್ಯ: ಜಿಲ್ಲಾಧಿಕಾರಿ

ಮಳೆ ನೀರು ಸಂಗ್ರಹ ಮತ್ತು ನೀರಿನ ಸಂರಕ್ಷಣೆ ಕಾರ್ಯಾಗಾರದಲ್ಲಿ ಡಿಸಿ ಜಿ.ಜಗದೀಶ್‌
Last Updated 12 ನವೆಂಬರ್ 2019, 12:39 IST
ಅಕ್ಷರ ಗಾತ್ರ

ಉಡುಪಿ: ಯುವಕರು ವರ್ಷಕ್ಕೆ ಕನಿಷ್ಠ 5 ಗಿಡಗಳನ್ನಾದರು ನೆಟ್ಟು ಪೋಷಿಸಬೇಕು. ಈ ಮೂಲಕ ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯರಿಂದ ಹಾಳಾಗಿರುವ ಪರಿಸರವನ್ನು ಉಳಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸಲಹೆ ನೀಡಿದರು.

ಸೋಮವಾರ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಮಳೆ ನೀರು ಸಂಗ್ರಹ ಮತ್ತು ನೀರಿನ ಸಂರಕ್ಷಣೆ, ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು, ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ ಎಂಬ ವಿಷಯಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಕಳೆದ ವರ್ಷ ಉಡುಪಿಯಲ್ಲಿ ಕುಡಿಯುವ ನೀರಿಗೆ ಬರ ಎದುರಾಗಿ, ಜನರು ಸಮಸ್ಯೆ ಎದುರಿಸಬೇಕಾಯಿತು. ಟ್ಯಾಂಕರ್ ಮೂಲಕ ಕುಡಿಯುವ ನೀರು ನೀಡಲು ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಯಿತು. ಮಳೆ ನೀರನ್ನು ಸಮರ್ಪಕವಾಗಿ ಸಂರಕ್ಷಿಸಿದ್ದರೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಎಂದರು.

ಕೆರೆ, ಕುಂಟೆ, ಮದಗಗಳ ಹೂಳನ್ನು ತೆಗೆದು, ಮಳೆ ನೀರು ಶೇಖರಿಸಿಕೊಂಡಿದ್ದರೆ ಬೇಸಿಗೆಯಲ್ಲಿ ನೀರಿನ ಬವಣೆ ನೀಗಬಹುದಿತ್ತು. ಮನೆಗಳಲ್ಲಿ ಮಳೆ ನೀರಿನ ಸಂಗ್ರಹ ವಿಧಾನ ಅಳವಡಿಸಿಕೊಂಡಿದ್ದರೆ ಅಂತರ್ಜಲ ಮಟ್ಟ ಹೆಚ್ಚಾಗಿ, ನೀರಿನ ಬವಣೆ ಕಡಿಮೆಯಾಗುತ್ತಿತ್ತು.ಪ್ರತಿಯೊಬ್ಬರು ಮನೆಯಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಮಾಡಿದರೆ, ತ್ಯಾಜ್ಯದಿಂದ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಕೈ ತೋಟ, ಮನೆಯ ಮುಂದಿನ ಗಿಡಗಳಿಗೆ ಬಳಸಬಹುದು. ರಾಸಾಯನಿಕ ಮುಕ್ತ ತರಕಾರಿ, ಹಣ್ಣುಹಂಪಲುಗಳನ್ನು ಪಡೆಯಬಹದು ಎಂದು ಹೇಳಿದರು.

ನಮ್ಮ ಮನೆಯ ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ವಿಧಾನ ಅಳವಡಿಸಿಕೊಳ್ಳಲಾಗಿದೆ. ಆಸಕ್ತ ಸಾರ್ವಜನಿಕರು ವೀಕ್ಷಿಸಬಹುದು.ಕೆರೆ ಒತ್ತುವರಿ ಮಾಡಿದ ಪ್ರಕರಣಗಳು ಕಂಡು ಬಂದರೆ ತಕ್ಷಣವೇ ಜಿಲ್ಲಾಡಳಿತದ ಗಮನಕ್ಕೆ ತರಬೇಕು. ಈ ಮೂಲಕ ಸರ್ಕಾರದ ಆಸ್ತಿ ರಕ್ಷಣೆಗೆ ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿಅತ್ಯುತ್ತಮ ಯುವಕ ಮಂಡಳ ಪ್ರಶಸ್ತಿಗೆ ಆಯ್ಕೆಯಾದ ಕಾಪು ತಾಲ್ಲೂಕು ಹೆಜಮಾಡಿಯ ‘ಯುವಕ/ಯುವತಿ ವೃಂದಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು.ಮಿಲಾಗ್ರಿಸ್ ಸಮೂಹ ಸಂಸ್ಥೆಗಳ ಸಂಚಾಲಕ ಡಾ.ಲಾರೆನ್ಸ್ ಸಿ.ಡಿಸೋಜ ಅಧ್ಯಕ್ಷತೆ ವಹಿಸಿದ್ದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ರಾಜ್, ‘ಕೃಷಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಮತ್ತು ಶೂನ್ಯ ಬಂಡವಾಳದಲ್ಲಿ ನೈಸರ್ಗಿಕ ಕೃಷಿ’ ಬಗ್ಗೆ ತಿಳಿಸಿದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜೋಸೆಫ್ ರೊಬೆಲ್ಲೊ ‘ಮಳೆ ನೀರಿನ ಸಂಗ್ರಹ ಮತ್ತು ನೀರಿನ ಸಂರಕ್ಷಣೆ’ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ‘ಮಳೆನೀರಿನೊಂದಿಗೆ ಅನುಸಂಧಾನ’ ಪೋಸ್ಟರ್ ಬಿಡುಗಡೆಮಾಡಲಾಯಿತು.

ಮಿಲಾಗ್ರಿಸ್ ಕಾಲೇಜಿನ ಪದವಿ ಮತ್ತು ಪದವಿ ಪೂರ್ವ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವಾ, ಸವಿತಾ ಕುಮಾರಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ವಿಲ್ಪ್ರೇಡ್ ಡಿಸೋಜ ಪ್ರಾಸ್ತವಿಕವಾಗಿ ಮಾತನಾಡಿದರು. ಜೋಸೆಫ್ ರೊಬೆಲ್ಲೊ ವಂದಿಸಿದರು. ಮಿಲಾಗ್ರಿಸ್ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ರವಿನಂದನ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT