ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗದ ಮೀಮಾಂಸೆಗೆ ನಾಂದಿ ಹಾಡಿದ ಬಸವಣ್ಣ

ಸಂಸ್ಕೃತಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ
Last Updated 6 ಮೇ 2022, 15:33 IST
ಅಕ್ಷರ ಗಾತ್ರ

ಉಡುಪಿ: ಹನ್ನೆರಡನೇ ಶತಮಾನದ ಶರಣ ಚಳವಳಿಯ ‘ನವ ರಾಜಕಾರಣ’ ಕರ್ನಾಟಕದಲ್ಲಿ ಅಪೂರ್ವವಾದ ವಚನ ಸಾಹಿತ್ಯಕ್ಕೆ ನಾಂದಿಯಾಗಿ ‘ನವ ಕಾವ್ಯ ಮೀಮಾಂಸೆ’ಯ ಹುಟ್ಟಿಗೆ ಕಾರಣವಾಯಿತು ಎಂದು ಸಂಸ್ಕೃತಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ವಚನಗಳನ್ನು ಓದು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಶರಣ ಚಳವಳಿಯ ಸಂದರ್ಭ ವಿವಿಧ ವೃತ್ತಿ ಮತ್ತು ಸಾಮಾಜಿಕ ಸ್ತರಗಳಿಗೆ ಸೇರಿದ ಪುರುಷರು ಹಾಗೂ ಮಹಿಳೆಯರು ಕಾವ್ಯಗಳನ್ನು ರಚಿಸುವ ಮೂಲಕ ಆ ಯುಗದ ಕಾವ್ಯಮೀಮಾಂಸೆಯನ್ನೇ ಬದಲಾಯಿಸಿದರು ಎಂದರು.

ಜಾತಿ ಮತ್ತು ವರ್ಗಗಳು ಅತಿಯಾಗಿದ್ದ ಹಿಂಸಾತ್ಮಕ ಯುಗದಲ್ಲಿ ‘ದಯೆ’ಯ ಬಗ್ಗೆ ಮಾತನಾಡುವ ಅಗತ್ಯವಿತ್ತು. ಶ್ರೇಣೀಕೃತ ಜಾತಿ-ಸಂರಚನೆಯನ್ನು ಮುರಿಯುವ ಆಧ್ಯಾತ್ಮಿಕ ಅನುಭವವನ್ನು ವರ್ಗಗಳಿಗೆ ಸೀಮಿತವಾಗಿಸದೆ ಎಲ್ಲರಿಗೂ ಲಭ್ಯವಾಗುವಂತೆ ಬಸವಣ್ಣ, ಅಕ್ಕ ಮಹಾದೇವಿ, ಅಲ್ಲಮಪ್ರಭು, ದೇವರ ದಾಸಿಮಯ್ಯ ಹೀಗೆ ಹಲವರು ಬರೆದು ಬದುಕಿದರು ಎಂದರು.

ವಚನಗಳು ದುಡಿಯುವ ವರ್ಗದ ಅಧಿಕೃತ ಧ್ವನಿಯೂ ಆಗಿತ್ತು. ಜಾತಿ, ಲಿಂಗ, ಆಚಾರ, ಸಾಂಪ್ರದಾಯಿಕ ತಾರತಮ್ಯಗಳ ನಿರಾಕರಣೆ ಹಾಗೂ ದುಡಿಮೆಯನ್ನು ಪೂಜೆಯಾಗಿ ಸ್ವೀಕರಿಸುವುದು ಕಾವ್ಯದ ಭಾಷೆಯನ್ನೇ ಬದಲಾಯಿಸಿತು ಎಂದು ಹೇಳಿದರು

ಬಸವಣ್ಣನವರು ‘ಆನು ಒಲಿದಂತೆ ಹಾಡುವೆನು’ ಎಂದು ಘೋಷಿಸಿ ಯುಗದ ಮೀಮಾಂಸೆಗೆ ನಾಂದಿ ಹಾಡಿದರು. ಶ್ರೇಷ್ಠ ಕವಯಿತ್ರಿ ಅಕ್ಕ ಮಹಾದೇವಿ ಲಿಂಗ ತಾರತಮ್ಯದ ಕುರಿತು ಖಚಿತವಾದ ಮಾತುಗಳನ್ನು ದಾಖಲಿಸಿದ್ದಾರೆ. ಶೃಂಗಾರದ ಉಪಮೆಗಳ ಮೂಲಕ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅಕ್ಕ ಚಿತ್ರಿಸಿದ್ದಾರೆ.

ಅಲ್ಲಮಪ್ರಭು ಆ ಕಾಲದ ಎಲ್ಲ ತಾತ್ವಿಕ ಪರಂಪರೆಗಳೊಂದಿಗೆ ವಾಗ್ವಾದದಲ್ಲಿ ತೊಡಗಿಸಿಕೊಂಡವರು ಎಂದು ಪ್ರೊ.ಚೆನ್ನಿ ಹೇಳಿದರು. ದೇವರ ದಾಸಿಮಯ್ಯ, ಮಡಿವಾಳ ಮಾಚಯ್ಯ ಸೇರಿದಂತೆ ವಿವಿಧ ವಚನಕಾರರ ಹಲವಾರು ವಚನಗಳನ್ನು ಅವರು ಉಲ್ಲೇಖಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಶರಣ ಆಂದೋಲನವು ಸಾಮಾಜಿಕವಾಗಿ ಮತ್ತು ತಾತ್ವಿಕವಾಗಿ ಅತ್ಯಂತ ಪ್ರಕ್ಷುಬ್ಧ ಹಂತವಾಗಿದೆ. ವಚನಗಳಲ್ಲಿ ಅತ್ಯುತ್ತಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತದೆ ಎಂದರು.

ಶ್ರಾವ್ಯ ಬಾಸ್ರಿ ‘ದಯವಿಲ್ಲದ ಧರ್ಮವಾವುದಯ್ಯ?’ ಸೇರಿದಂತೆ ಹಲವು ವಚನಗಳನ್ನು ಹಾಡಿದರು. ಸುಹಾನಿ ರಾಜ್‌ಪೂತ್ ಕಾರ್ಯಕ್ರಮ ನಿರೂಪಿಸಿದರು ಮತ್ತು ವೆಲಿಕಾ ಶಾಂಗ್‌ಪ್ಲ್ಯಾಂಗ್ ಧನ್ಯವಾದ ಅರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT