ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮೂವರು ಸಾಧಕರಿಗೆ ರಾಜ್ಯೋತ್ಸವ ಗರಿ

ನ್ಯಾಯಾಂಗ, ಸಮಾಜಸೇವೆ, ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಾಧನೆಗೆ ಪ್ರಶಸ್ತಿ
Last Updated 28 ಅಕ್ಟೋಬರ್ 2020, 14:46 IST
ಅಕ್ಷರ ಗಾತ್ರ

ಉಡುಪಿ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ರಾಜ್ಯ ಸರ್ಕಾರ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದ್ದು, ಉಡುಪಿ ಜಿಲ್ಲೆಯ ಮೂವರು ಸಾಧಕರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನ್ಯಾಯಾಂಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಗೆ ಕಾರ್ಕಳ ತಾಲ್ಲೂಕಿನ ಎಂ.ಕೆ.ವಿಜಯ್‌ ಕುಮಾರ್‌, ಸಮಾಜ ಸೇವಕರಾದ ಬೈಂದೂರು ತಾಲ್ಲೂಕಿನ ಶಿರೂರಿನ ಮಣೆಗಾರ್ ಮೀರಾನ್ ಸಾಹೇಬ್‌ ಹಾಗೂ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗೆ ಪ್ರೊ.ಉಡುಪಿ ಶ್ರೀನಿವಾಸ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಎಂ.ಕೆ.ವಿಜಯ್‌ ಕುಮಾರ್‌:

1968ರಲ್ಲಿ ವಕೀಲ ವೃತ್ತಿ ಆರಂಭಿಸಿ 5 ದಶಕಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಂ.ಕೆ.ವಿಜಯ್‌ಕುಮಾರ್, ಶಿಕ್ಷಣ, ಧಾರ್ಮಿಕ, ರಾಜಕೀಯ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಬ್ದುಲ್‌ ನಜೀರ್ ಸೇರಿದಂತೆ 52 ವಕೀಲರು ವಿಜಯ್‌ ಕುಮಾರ್ ಅವರ ಬಳಿ ಪ್ರಾಕ್ಟಿಷನರ್ ಆಗಿ ಕೆಲಸ ಮಾಡಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಹಾಗೂ 10 ವರ್ಷ ಕಾರ್ಕಳ ವಕೀಲರ ಸಂಘದ ಅಧ್ಯಕ್ಷರಾಗಿದ್ದರು ವಿಜಯ್‌ಕುಮಾರ್.

ಕಾರ್ಕಳದಲ್ಲಿ 30 ವರ್ಷ ಸ್ಕೌಟ್ಸ್ ಅಂಡ್‌ ಗೈಡ್ಸ್‌ ಸಂಸ್ಥೆಯನ್ನು ಮುನ್ನಡೆಸಿದ್ದು, ಎಸ್‌ಎನ್‌ವಿ ವಿದ್ಯಾಸಂಸ್ಥೆಗಳ ಸಂಚಾಲಕರಾಗಿ 3 ದಶಕಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಕಳದಲ್ಲಿ ಹಿಂದಿನ ಮಹಾಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು.

ಮಣೆಗಾರ್ ಮೀರಾನ್ ಸಾಹೇಬ:

ಸಮಾಜ ಸೇವಕ ಮಣೆಗಾರ್ ಮೀರಾನ್ ಸಾಹೇಬ್ 40 ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಉದ್ಯಮ ನಡೆಸುತ್ತಿದ್ದು, ಹುಟ್ಟೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್‌, ಶಿರೂರು ಅಸೋಸಿಯೇಶನ್ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ನೂರಾರು ಬಡ ಕುಟುಂಬಗಳಿಗೆ ನೆರವಾಗಿದ್ದಾರೆ.

ಯುವಕರಿಗೆ ಸ್ವ ಉದ್ಯೋಗ ಕಲ್ಪಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಡುವುದು, ಶಿರೂರು ಗ್ರಾಮ ಪಂಚಾಯಿತಿಗೆ ಕಸ ಸಾಗಿಸುವ ವಾಹನ ಕೊಡುಗೆ, ಆಂಬುಲೆನ್ಸ್ ಕೊಡುಗೆ, ಬಡ ಕುಟುಂಬಗಳಿಗೆ ಮನೆ ನಿರ್ಮಾಣ, ಅಶಕ್ತರ ಮನೆಗಳ ದುರಸ್ತಿ, ಶಾಲೆಗಳ ಅಭಿವೃದ್ಧಿ, ಕಲಿಕಾ ಸಾಮಾಗ್ರಿಗಳ ನೆರವು, ಕೋವಿಡ್‌ ಸಂದರ್ಭ ಆಹಾರದ ಕಿಟ್‌ಗಳ ವಿತರಣೆ, ಆರೋಗ್ಯ ಕೇಂದ್ರಕ್ಕೆ ಕಿಯೊಸ್ಕ್ ಯಂತ್ರ ಕೊಡುಗೆ ನೀಡಿದ್ದಾರೆ.

ಪ್ರೊ.ಉಡುಪಿ ಶ್ರೀನಿವಾಸ್‌:

ಮೂಲತಃ ಉಡುಪಿಯವರಾದ ಪ್ರೊ.ಉಡುಪಿ ಶ್ರೀನಿವಾಸ್‌ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್ ವಿಭಾಗದಲ್ಲಿ 30 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಐಐಎಸ್ಸಿಯಲ್ಲಿ ಪಿಎಚ್‌.ಡಿ, ಐಐಟಿ ಮದ್ರಾಸ್‌ನಲ್ಲಿ ಬಿ.ಟೆಕ್‌, ಎಂ.ಟೆಕ್‌ ಮಾಡಿದ್ದಾರೆ.

ಬ್ರೇಕ್ ಸಿಸ್ಟಂ ಆಫ್ ವೆಹಿಕಲ್ ಎಂಬ ಬಗ್ಗೆ ಸಂಶೋಧನೆ ಮಾಡಿದ್ದು, ಪೇಟೆಂಟ್ ಕೂಡ ಪಡೆದಿದ್ದಾರೆ. ಪರ್ಯಾಯ ಇಂಧನ, ಸುಸ್ಥಿರ ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ವಿಚಾರಗಳಲ್ಲಿ ಅಧ್ಯಯನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT