ಬುಧವಾರ, ಜುಲೈ 28, 2021
28 °C

ಉಡುಪಿಯಿಂದಲೇ ರಾಜಕೀಯ ದೃವೀಕರಣವಾಗಲಿ: ರಕ್ಷಾ ರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ‘ನಾವು ಹೋರಾಟ ಮಾಡಬೇಕಿರುವುದು ಪಕ್ಷದೊಳಗೆ ಅಧಿಕಾರ ಹಿಡಿಯುವುದಕ್ಕಲ್ಲ; ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟ ಮಾಡಬೇಕಿದೆ’ ಎಂದು ಯುವ ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ರಕ್ಷಾ ರಾಮಯ್ಯ ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಬುಧವಾರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ಬಿಜೆಪಿ ಸುಳ್ಳುಗಳನ್ನು ಹೇಳಿಕೊಂಡು ಅಧಿಕಾರ ಚುಕ್ಕಾಣಿ ಹಿಡಿಯಿತು. ಅಧಿಕಾರಕ್ಕೆ ಬಂದ ನಂತರವೂ ಸುಳ್ಳು ಹೇಳುವುದನ್ನು ಬಿಟ್ಟಿಲ್ಲ. ವಿದೇಶಗಳಿಂದ ಕಪ್ಪು ಹಣ ದೇಶಕ್ಕೆ ಬರಲಿಲ್ಲ. 2 ಕೋಟಿ ಉದ್ಯೋಗ ಸಿಗಲಿಲ್ಲ ಎಂದು ಲೇವಡಿ ಮಾಡಿದರು.

ಕೋವಿಡ್‌ನಿಂದಾಗಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ಅಪರಾಧ ಕೃತ್ಯಗಳ ಸಂಖ್ಯೆಯೂ ಹೆಚ್ಚುತ್ತಿದೆ. ಯುವಕರಿಗೆ ಉದ್ಯೋಗ ಸೃಷ್ಟಿಸುವುದರ ಬದಲಾಗಿ ಬಿಜೆಪಿ ಸರ್ಕಾರ ಕೋಮುವಾದದ ವಿಷ ಬೀಜವನ್ನು ಬಿತ್ತುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ರಾಜ್ಯಕ್ಕೆ ಕೇಂದ್ರದಿಂಧ ಅನ್ಯಾಯವಾದರೂ ಪ್ರಶ್ನಿಸುತ್ತಿಲ್ಲ. ಬಿಜೆಪಿ ಆಡಳಿತದಿಂದ ಜನರು ರೋಸಿಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬದಲಾವಣೆಯ ಗಾಳಿ ಬೀಸಲಿದ್ದು, ಕರಾವಳಿಯಿಂದಲೇ ಬದಲಾವಣೆ ಗಾಳಿ ಬೀಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ದೀಪಕ್ ಕೋಟ್ಯಾನ್ ಮಾತನಾಡಿ, ಕಳೆದ ಚುನಾವಣೆಯಲ್ಲಿ ಸುಳ್ಳುಗಳನ್ನು ಹೇಳಿದ ಬಿಜೆಪಿ ಯುವಕರನ್ನು ಪಕ್ಷಕ್ಕೆ ಸೆಳೆದು ಅಧಿಕಾರ ಹಿಡಿದಿದೆ. ಯುವಕರಿಗೆ ಬಿಜೆಪಿಯ ಸುಳ್ಳಿನ ಅರಿವಾಗುತ್ತಿದ್ದು, ಪಕ್ಷಬಿಟ್ಟು ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರ ಹಿಡಿಯಬೇಕಾದರೆ ಯುವ ಮತದಾರರ ಬೆಂಬಲ ಅಗತ್ಯ. ಮುಂದಿನ ಚುನಾವಣೆಯಲ್ಲಿ ಯುವಕರ ಬೆಂಬಲ ಕಾಂಗ್ರೆಸ್‌ಗೆ ಸಿಗಲಿದೆ ಎಂದು ದೀಪಕ್ ಕೋಟ್ಯಾನ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕೋಟ ಅವಳಿ ಕೊಲೆ ಪ್ರಕರಣ, ಯಡಮೊಗೆ ಕೊಲೆ ಪ್ರಕರಣದಲ್ಲಿ ಬಿಜೆಪಿಯವರ ಕೈವಾಡವಿರುವುದು ಸ್ಪಷ್ಟವಾಗಿದ್ದು, ಮೃತರ ಕುಟುಂಬ ಸದಸ್ಯರಿಗೆ ನ್ಯಾಯ ಹಾಗೂ ಪರಿಹಾರ ಕೊಡಿಸಲು ಕಾಂಗ್ರೆಸ್‌ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ನಾಯಕರಾದ ಅನಿಲ್‌ ಕುಮಾರ್ ಯಾದವ್‌, ವಿದ್ಯಾ ಬಾಲಕೃಷ್ಣನ್‌, ಸುರಭಿ ದ್ವಿವೇದಿ, ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ವಿಶ್ವಾಸ್ ಅಮೀನ್‌ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು