ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರಂತ ನಾಯಕ ಕರ್ಣನೇ ಪ್ರೇರಣೆ

ರಂಗಭೂಮಿ ಉಡುಪಿಯಿಂದ ‘ಕರುನಾಡ ಕರುಣಾಳು’ ಬಿರುದು ಸ್ವೀಕರಿಸಿದ ಉದ್ಯಮಿ ಜಿ.ಶಂಕರ್‌
Last Updated 4 ಫೆಬ್ರುವರಿ 2023, 15:23 IST
ಅಕ್ಷರ ಗಾತ್ರ

ಉಡುಪಿ: ಪೌರಾಣಿಕವಾಗಿ ಕರ್ಣ ದುರಂತ ನಾಯಕ ಎಂದು ಕರೆಸಿಕೊಂಡರೂ ವೈಯಕ್ತಿಕ ಜೀವನದಲ್ಲಿ ದುರಂತ ಕರ್ಣನೇ ಸದಾ ಆದರ್ಶ ಹಾಗೂ ಪ್ರೇರಣೆ ಎಂದು ಉದ್ಯಮಿ ಜಿ.ಶಂಕರ್‌ ಹೇಳಿದರು.

ಶನಿವಾರ ಎಂಜಿಎಂ ಕಾಲೇಜಿನ ಮುದ್ದಣ್ಣ ಮಂಟಪದಲ್ಲಿ ರಂಗಭೂಮಿ ಉಡುಪಿ ಸಂಸ್ಥೆಯಿಂದ ಕೊಡಮಾಡಲಾದ ‘ಕರುನಾಡ ಕರುಣಾಳು’ ಬಿರುದು ಸಹಿತ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಕರ್ಣ ಕಣ್ಮುಂದೆ ಬಂದಾಗಲೆಲ್ಲ ಬದುಕಿನಲ್ಲಿ ಪಟ್ಟ ಪಡಿಪಾಟಲುಗಳು ನೆನಪಾಗುತ್ತವೆ ಎಂದರು.

ರಂಗಭೂಮಿ ಉಡುಪಿ ಸಂಸ್ಥೆಗೆ ಹಾಗೂ ಸುಸಜ್ಜಿತ ಜಿಲ್ಲಾ ರಂಗಭೂಮಿ ಮಂದಿರ ನಿರ್ಮಾಣಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದರು.

ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ಮಾತನಾಡಿ, ಹಣವಿದ್ದವರು ಸಮಾಜ ಸೇವೆ ಮಾಡಲು ಹಿಂಜರಿಯುವ ಕಾಲಘಟ್ಟದಲ್ಲಿ ಜಿ.ಶಂಕರ್‌ ದುಡಿದ ಹಣದಲ್ಲಿ ಒಂದು ಪಾಲನ್ನು ಸಮಾಜಕ್ಕೆ ವಿನಿಯೋಗಿಸುತ್ತಿರುವುದು ಮಾದರಿ ಎಂದರು.

ರಕ್ತದಾನ, ಶಿಕ್ಷಣ, ಕ್ರೀಡೆ, ಆರೋಗ್ಯ, ಧಾರ್ಮಿಕ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿರುವ ಜಿ.ಶಂಕರ್ ಅವರಂತಹ ವ್ಯಕ್ತಿಗೆ ರಂಗಭೂಮಿ ಉಡುಪಿ ‘ಕರುನಾಡ ಕರುಣಾಳು’ ಬಿರುದು ನೀಡುತ್ತಿರುವುದು ಸೂಕ್ತವಾಗಿದೆ ಎಂದರು.

ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ರಂಗ ಮಂದಿರಕ್ಕೆ ಆನಂದ ಗಾಣಿಗರ ಹೆಸರನ್ನಿಡುವ ಶಾಸಕ ರಘುಪತಿ ಭಟ್ ಅವರ ನಿರ್ಧಾರ ಶ್ಲಾಘನೀಯ. ರಂಗಮಂದಿರ ನಿರ್ಮಾಣಕ್ಕೆ ಮಾಹೆ ಕೂಡ ಅಗತ್ಯ ನೆರವು ನೀಡಲಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಮುಂದಿನ ಪೀಳಿಗೆಯ ರಂಗಭೂಮಿಗೆ ಕಲಾವಿದರನ್ನು ತಯಾರು ಮಾಡುವ ನಿಟ್ಟಿನಲ್ಲಿ ನಿರಂತರವಾಗಿ ರಂಗ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿ ಕಲೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುತ್ತಿದ್ದರೂ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆಯಲ್ಲಿ ಅವಕಾಶ ಸಿಗದಿರುವುದು ಬೇಸರದ ವಿಚಾರ.

ನಾಟಕ, ಯಕ್ಷಗಾನ, ಉತ್ಸವ ಹಾಗೂ ಸಮಾರಂಭಗಳಲ್ಲಿ ಕರಾವಳಿಯ ಪ್ರತಿಭೆಗಳನ್ನು ಬೆಳೆಸುವ ಜವಾಬ್ದಾರಿ ಕರಾವಳಿಗರದ್ದು. ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತ ಕೂಡ ಸ್ಥಳೀಯ ಕಲಾವಿದರನ್ನು ಗುರುತಿಸಿ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.

ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡುವುದು ಕರ್ತವ್ಯವೇ ಹೊರತು ಸೇವೆಯಲ್ಲ. ಆದರೆ ಖಾಸಗಿ ವ್ಯಕ್ತಿಗಳು ದುಡಿದ ಹಣ ವ್ಯಯಿಸಿ ಸಮಾಜಮುಖಿ ಕೆಲಸ ಮಾಡುವುದು ನಿಜವಾದ ಸೇವೆಯಾಗುತ್ತದೆ. ಉದ್ಯಮಿ ಜಿ.ಶಂಕರ್‌ ಸಮಾಜಮುಖಿ ಸೇವೆಗಳು ಉಳ್ಳವರಿಗೆ ಮಾದರಿ ಎಂದರು.

ವೈಯಕ್ತಿಕವಾಗಿ ಪ್ರಶಸ್ತಿ ಸ್ವೀಕರಿಸುವುದು ಬಹಳ ಮುಜುಗರದ ವಿಚಾರ, ಆದರೆ, ಪ್ರಶಸ್ತಿ ಪ್ರದಾನ ಮಾಡುವುದು ಬಹಳ ಖುಷಿ ಕೊಡುತ್ತದೆ. ಆದರೆ, ರಂಗಭೂಮಿ ಉಡುಪಿ ಸಂಸ್ಥೆಯು ಸನ್ಮಾನಿತರ ಬಹುಮುಖ ವ್ಯಕ್ತಿತ್ವವನ್ನು ಕಟ್ಟಿಕೊಟ್ಟು ಕೊಡಮಾಡಲಾದ ಪುರಸ್ಕಾರ ಸಂತಸ ತಂದಿದೆ ಎಂದರು.

ಉದ್ಯಮಿ ಆನಂದ್ ಸಿ.ಕುಂದರ್ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದುವ, ಕುಂದುಕೊರತೆಗಳನ್ನು ಸರಿಪಡಿಸುವ ಶಕ್ತಿ ರಂಗಭೂಮಿಗೆ ಇದೆ. ದಶಕಗಳಿಂದಲೂ ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರಂಗಭೂಮಿ ಉಡುಪಿ ಸಂಸ್ಥೆಯ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ರಂಗಭೂಮಿ ಉಡುಪಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ಸಮಾಜದ ಮುಖಂಡ ರಾಜೇಂದ್ರ ಸುವರ್ಣ, ಎನ್‌.ಆರ್‌.ಬಲ್ಲಾಳ್ ಉಪಸ್ಥಿತರಿದ್ದರು. ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ವಂದಿಸಿದರು.

ವೇದಿಕೆ ಕಾರ್ಯಕ್ರಮದಲ ಬಳಿಕ ಡಾ.ಜೀವನರಾಂ ಸುಳ್ಯ ನಿರ್ದೇಶನದ, ಶಶಿರಾಜ್ ಕಾವೂರು ರಚನೆಯ ಯಕ್ಷ ರಂಗಾಯಣದ ಪರಶುರಾಮ ನಾಟಕ ಪ್ರದರ್ಶನವಾಯಿತು.

ರಂಗ ಮಂದಿರಕ್ಕೆ ಆನಂದ ಗಾಣಿಗರ ಹೆಸರು

ಆದಿ ಉಡುಪಿಯಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ರಂಗ ಮಂದಿರಕ್ಕೆ ವಿ.ಎಸ್.ಆಚಾರ್ಯರ ಆಶಯದಂತೆ ಆನಂದ ಗಾಣಿಗರ ಹೆಸರನ್ನು ಇಡಲಾಗುವುದು. ರಂಗಕರ್ಮಿಗಳ, ಕಲಾವಿದರ ಹಾಗೂ ತಜ್ಞರ ಸಲಹೆ ಸೂಚನೆಗಳನ್ನು ಪರಿಗಣಿಸಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಜಿಲ್ಲಾ ರಂಗಮಂದಿರವನ್ನು ₹ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಜಿಲ್ಲೆಯಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾಗಬೇಕು ಎಂಬ ರಂಗ ಕರ್ಮಿಗಳ ಬಹುದಿನಗಳ ಕನಸು ಶೀಘ್ರವೇ ನನಸಾಗಲಿದೆ ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT