ಸೋಮವಾರ, ಡಿಸೆಂಬರ್ 9, 2019
20 °C
ನ.25ರಂದು ತೀರ್ಪು ಪ್ರಕಟಿಸಲಿರುವ ಜಿಲ್ಲಾ ವಿಶೇಷ ನ್ಯಾಯಾಲಯ

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಆರೋಪ ಸಾಬೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿದ್ದು, ನ.25ರಂದು ಜಿಲ್ಲಾ ವಿಶೇಷ ನ್ಯಾಯಾಲಯ ದೋಷಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಸಿ.ಎಂ.ಜೋಷಿ, ಅತ್ಯಾಚಾರ ಆರೋಪ ಸಾಬೀತಾಗಿದ್ದು, ಸೋಮವಾರ ತೀರ್ಪು ಪ್ರಕಟಿಸುವುದಾಗಿ ಘೋಷಿಸಿದರು. ರಾಜಸ್ತಾನ ಮೂಲದ ಪದಮ್‌ ಸಿಂಗ್ ಸೇನಿ ಹಾಗೂ ಮುಖೇಶ್ ಸೇನಿ ಶಿಕ್ಷೆಗೆ ಗುರಿಯಾದವರು.

ಪ್ರಕರಣದ ವಿವರ: ಜುಲೈ 8, 2016ರಂದು ಮಧ್ಯರಾತ್ರಿ 1.15ಕ್ಕೆ ಬಾಲಕಿಯ ಮನೆಗೆ ನುಗ್ಗಿದ ಆರೋಪಿಗಳು ಆಕೆಯನ್ನು ಆ‌ಮ್ನಿ ವಾಹನದಲ್ಲಿ ಅಪಹರಿಸಿದ್ದರು. ಈ ಸಂದರ್ಭ ಬಾಲಕಿಯ ತಂದೆ ಮನೆಯಲ್ಲಿರಲಿಲ್ಲ. ತಾಯಿ ಬೇರೊಂದು ಕೋಣೆಯಲ್ಲಿ ಮಲಗಿದ್ದರು.

ಬಾಲಕಿ ಕಿರುಚದಂತೆ ಬಾಯಿಗೆ ಬಟ್ಟೆ ತುರುಕಿ ಆಕೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಲಾಗಿತ್ತು. ಕೃತ್ಯವನ್ನು ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿ ಬಾಲಕಿಯನ್ನು ಮನೆಗೆ ಕಳುಹಿಸಲಾಗಿತ್ತು. 

ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಪೋಷಕರು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅತ್ಯಾಚಾರ ನಡೆದಿರುವುದು ಬಯಲಾಗಿದೆ. ಸುದ್ದಿತಿಳಿದ ಪೊಲೀಸರು ಜುಲೈ 10ರಂದು ಕುತ್ಪಾಡಿಯಲ್ಲಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

ಸಿಪಿಐ ಶ್ರೀಕಾಂತ್ ಹಾಗೂ ಜೈಶಂಕರ್ ಪ್ರಕರಣದ ತನಿಖೆ ನಡೆಸಿ ಸೆ.29ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಆರೋಪಿಗಳು ಮೂರು ಬಾರಿ ಜಾಮೀನಿಗೆ ಅರ್ಜಿ ದಾಖಲಿಸಿದ್ದರೂ ನಿರಾಕರಿಸಲಾಗಿತ್ತು.

ವಿಚಾರಣೆ ವೇಳೆ 34 ಸಾಕ್ಷ್ಯಗಳ ಪೈಕಿ ಅಭಿಯೋಜನೆಯ ಪರವಾಗಿ 21 ಸಾಕ್ಷಿಗಳು ಹಾಜರಾಗಿ ಸಾಕ್ಷ್ಯನುಡಿದಿದ್ದರು. ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ದೋಷಿಗಳು ಎಂದು ನಿರ್ಧರಿಸಿದೆ ಎಂದು ಸರ್ಕಾರಿ ವಿಶೇಷ ಅಭಿಯೋಜಕರಾದ ವಿಜಯವಾಸು ಪೂಜಾರಿ ಮಾಹಿತಿ ನೀಡಿದರು.

ಆರೋಪಿಗಳ ವಿರುದ್ಧ ಅಪಹರಣ (ಸೆಕ್ಷನ್‌ 366 ಎ) , ಸಾಮೂಹಿಕ ಅತ್ಯಾಚಾರ (376 ಡಿ), ಸಾಕ್ಷ್ಯನಾಶ (201), ಜೀವ ಬೆದರಿಕೆ (506) ಹಾಗೂ ಪೋಕ್ಸೋ ಸೆಕ್ಷನ್‌ ಅಡಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)