ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6 ಬಡ ಮಕ್ಕಳ ಚಿಕಿತ್ಸೆಗೆ ನೆರವು

ಅಷ್ಟಮಿಗೆ ವಿಭಿನ್ನ ವೇಷ ಹಾಕಲಿದ್ದಾರೆ ರವಿ ಕಟಪಾಡಿ
Last Updated 17 ಆಗಸ್ಟ್ 2022, 16:08 IST
ಅಕ್ಷರ ಗಾತ್ರ

ಉಡುಪಿ: 7 ವರ್ಷಗಳಿಂದ ಕೃಷ್ಣ ಜನ್ಮಾಷ್ಟಮಿಗೆ ವೇಷ ಹಾಕಿ ಸಾರ್ವಜನಿಕರಿಂದ ಸಂಗ್ರಹವಾಗುವ ದೇಣಿಗೆಯಲ್ಲಿ ಬಡ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸುತ್ತಿರುವ ವೇಷ ಕಲಾವಿದ ರವಿ ಕಟಪಾಡಿ ಈ ವರ್ಷವೂ ಅಷ್ಟಮಿಗೆ ವೇಷ ಹಾಕುತ್ತಿದ್ದು 6 ಬಡ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ನಿರ್ಧರಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರವಿ ‘7 ವರ್ಷಗಳಲ್ಲಿ ವೇಷ ಹಾಕಿ ₹ 90 ಲಕ್ಷದಷ್ಟು ಹಣ ಸಂಗ್ರಹಿಸಿ 66 ಬಡ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗಿದೆ. ಈ ವರ್ಷ ₹ 10 ಲಕ್ಷ ಸಂಗ್ರಹಿಸುವ ಮೂಲಕ ₹ 1 ಕೋಟಿಯ ಗುರಿ ಮುಟ್ಟುವ ವಿಶ್ವಾಸವಿದೆ. ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಂಘ ಸಂಸ್ಥೆಗಳು ಶಕ್ತಿಮೀರಿ ಆರ್ಥಿಕ ನೆರವು ನೀಡಬೇಕು ಎಂದರು.

ಆ.19 ಹಾಗೂ 20ರಂದು ವೇಷ ಧರಿಸಿ ಉಡುಪಿ, ಮಲ್ಪೆ, ಕಟಪಾಡಿ, ಉದ್ಯಾವರ ಸೇರಿದಂತೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಲಿದ್ದೇನೆ. ಹೈದರಾಬಾದ್, ಮಂಗಳೂರು, ಮಡಿಕೇರಿಯ ಕಲಾವಿದರು ವೇಷ ಸಿದ್ಧಪಡಿಸುವ ಕಾರ್ಯದಲ್ಲಿ ನಿರತರಾಗಿದ್ದು ಶೇ 80ರಷ್ಟು ಪೂರ್ಣಗೊಂಡಿದೆ ಎಂದು ರವಿ ತಿಳಿಸಿದರು.

ಸಾರ್ವಜನಿಕರಿಂದ ಸಂಗ್ರಹವಾದ ಹಣವನ್ನು ಬಬ್ಬುಸ್ವಾಮಿ ಹಾಗೂ ಕೊರಗಜ್ಜ ದೈವಸ್ಥಾನದಲ್ಲಿ ಅನಾರೋಗ್ಯ ಪೀಡಿತ ಮಕ್ಕಳ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುವುದು. ಧನ ಸಹಾಯ ಮಾಡಲು ಇಚ್ಛಿಸುವವರು ಬ್ಯಾಂಕ್ ಆಫ್ ಬರೋಡ ಪಾಂಗಳ ಶಾಖೆ, 84350100001040 ಉಳಿತಾಯ ಖಾತೆಗೆ ಹಾಕಬೇಕು (ಐಎಫ್‌ಎಸ್‌ಸಿ ಕೋಡ್–BARBOVJPANG- ಎಂಐಸಿಆರ್ ಕೋಡ್‌–676012026) ಎಂದು ಮನವಿ ಮಾಡಿದರು.

ಸಾರ್ವಜನಿಕರು ಯುಪಿಐ ಐಡಿ ಮೂಲಕವೂ (ravikatapi190@oksbi) ದೇಣಿಗೆ ನೀಡಬಹುದು. ಈ ಬಾರಿ ವೇಷವನ್ನು ಮುಂಚಿತವಾಗಿ ಬಹಿರಂಗ ಮಾಡುವುದಿಲ್ಲ. ಸಾರ್ವಜನಿಕರಿಗೆ ಅಚ್ಚರಿ ನೀಡಲಿದ್ದೇನೆ ಎಂದು ರವಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರವಿ ಕಟಪಾಡಿ ಫ್ರೆಂಡ್ಸ್ ತಂಡದ ಮಹೇಶ್ ಶೆಣೈ, ಅರುಣ್, ಚರಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT