ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ವಿಸ್ತರಣೆಗೆ ಆಕ್ಷೇಪ: ಬೈಪಾಸ್‌ ಸೌಲಭ್ಯಕ್ಕೆ ಆಗ್ರಹ

ಚಾಮರಾಜನಗರ–ಜೇವರ್ಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪಕ್ರಿಯೆ ಆರಂಭ
Last Updated 3 ಮಾರ್ಚ್ 2018, 6:57 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಚಾಮರಾಜನಗರ– ಜೇವರ್ಗಿ ರಾಷ್ಟ್ರೀಯ ಹೆದ್ದಾರಿ 150–ಎ (ಪ್ರಸ್ತುತ ಎಸ್‌ಎಚ್‌–65) ಹಾದು ಹೋಗುವ ಗ್ರಾಮಗಳ ವ್ಯಾಪ್ತಿಯಲ್ಲಿ ‘ಬೈಪಾಸ್‌ ರಸ್ತೆ’ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಳ್ಳಿಗಳಲ್ಲಿ ರಸ್ತೆ ವಿಸ್ತರಣೆ ಮಾಡಿದರೆ ನಿವಾಸಿಗಳಿಗೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಗ್ರಾಮಗಳ ಒಳಭಾಗದಲ್ಲಿ ರಸ್ತೆ ವಿಸ್ತರಣೆ ಮಾಡುವ ಬದಲು ಬೈಪಾಸ್‌ ರಸ್ತೆ ನಿರ್ಮಿಸಬೇಕು. ಇದರಿಂದ ಹಳ್ಳಿಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಆಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಹೆದ್ದಾರಿ ನಿರ್ಮಾಣಕ್ಕಾಗಿ ಈಗಾಗಲೇ ರಸ್ತೆ ಅಳತೆ ಮಾಡಲಾಗಿದೆ. ಇದಕ್ಕೆ ಸಂಬಂಧಪಟ್ಟ ಅಂಕಿ–ಅಂಶಗಳನ್ನು ರಸ್ತೆ ಬದಿಯಲ್ಲಿ ಬರೆಯಲಾಗಿದೆ. ಹೆದ್ದಾರಿ ವಿಸ್ತರಣೆಗಾಗಿ ತೆರವುಗೊಳ್ಳಲಿರುವ ಆಸ್ತಿಯ ಸರ್ವೆ ನಂ. ಹಾಗೂ ಇತರ ವಿವರವನ್ನು ದಿನಪತ್ರಿಕೆಗಳಲ್ಲಿ ಪ್ರಕಟಿಸಿ ಆಕ್ಷೇಪಣೆ ಸಲ್ಲಿಸಲು ಅಧಿಕಾರಿಗಳು ಮನವಿ ಮಾಡಿದ್ದರು. ಕೆಲವರು ಆಕ್ಷೇಪಣೆ ಸಲ್ಲಿಸಿದ್ದು, ಕಳೆದ ವಾರ ಆಕ್ಷೇಪಣೆ ಸಲ್ಲಿಸುವ ಅವಧಿ ಮುಕ್ತಾಯಗೊಂಡಿದೆ.

‘ಈ ಭಾಗದಲ್ಲಿ ಹೆಚ್ಚಾಗಿ ಕೂಲಿ ಕಾರ್ಮಿಕರು, ಬಡವರು ಹೆಚ್ಚಾಗಿ ಇರುವ ಕಾರಣ ಹೆದ್ದಾರಿಯಲ್ಲಿನ ದೊಡ್ಡ ಗ್ರಾಮಗಳಾದ ತಳಕು, ಬಿ.ಜಿ.ಕೆರೆ, ಹಾನಗಲ್‌ನಲ್ಲಿ ಬೈಪಾಸ್‌ ನಿರ್ಮಾಣ ಮಾಡುವುದು ಉತ್ತಮ. ಗ್ರಾಮಗಳೊಳಗೇ ರಸ್ತೆ ವಿಸ್ತರಣೆ ಮಾಡಿದರೆ ನೂರಾರು
ಕುಟುಂಬಗಳು ಬೀದಿಗೆ ಬರಲಿದೆ. ಈ ಬಗ್ಗೆ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ’ ಎಂದು ವಕೀಲ ಎಸ್‌.ಎಸ್‌.ಸಮೀವುಲ್ಲಾ, ಅರುಣ್‌ಕುಮಾರ್ ಹೇಳಿದರು.

ಈ ಬಗ್ಗೆ ಮಾಹಿತಿ ನೀಡಿದ ಬಳ್ಳಾರಿ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿ ಸಿಬ್ಬಂದಿ, ‘ಒತ್ತುವರಿ ತೆರವು ಸಂಬಂಧಪಟ್ಟಂತೆ ಮೂರು ನೋಟಿಸ್ ಜಾರಿ ಮಾಡಲಾಗಿದೆ. 300ಕ್ಕೂ ಹೆಚ್ಚು ಆಕ್ಷೇಪಣೆಗಳು ಬಂದಿವೆ. ಈ ಬಗ್ಗೆ ಪರಿಶೀಲನೆ ನಡೆಸುವ ಹಾಗೂ ಮಾಹಿತಿ ಪಡೆಯುವ ಕಾರ್ಯ ಮಾಡಲಾಗುವುದು. ಈಗಾಗಲೇ ಒತ್ತುವರಿ ತೆರವು ಆಗಲಿರುವ ಜಮೀನು, ಮನೆಗಳ
ತೆರವು, ಸೇತುವೆಗಳ ನಿರ್ಮಾಣದ ಮಾಹಿತಿ ಸಿದ್ಧಪಡಿಸಲಾಗಿದೆ’ ಎಂದು ಹೇಳಿದರು.

ಹೆದ್ದಾರಿ ಒಟ್ಟು 60 ಮೀಟರ್ ವಿಸ್ತರಣೆಯಾಗಲಿದೆ. ರಸ್ತೆ ಮಧ್ಯಭಾಗದಿಂದ ಎರಡೂ ಬದಿ 30 ಮೀಟರ್‌ನಷ್ಟು ವಿಸ್ತರಣೆಯಾಗಲಿದೆ. ಕೆಲವೆಡೆ ಮಾತ್ರ ರಸ್ತೆ ನೇರ ಮಾಡಲು ಅಳತೆ ಪ್ರಮಾಣ ಮಧ್ಯಭಾಗದಿಂದ ವ್ಯತ್ಯಾಸವಾಗಿದೆ. ‘ಫೀಡ್‌ ಬ್ಯಾಂಕ್‌ ಇಂಡಿಯಾ’ ಕಂಪನಿ ಸರ್ವೆ ಕಾರ್ಯದ ಹೊಣೆ ಹೊತ್ತಿದೆ. ಸರ್ವೆ ವರದಿ ಬಂದ ನಂತರ ‘3ಡಿ’ ನೋಟಿಸ್‌ ಜಾರಿ ಮಾಡಲಾಗುವುದು. ಈ ಎಲ್ಲಾ ಕಾರ್ಯ ಮುಗಿಯಲು ಒಂದು ವರ್ಷ ಬೇಕಾಗಬಹುದು ಎಂದು ಮಾಹಿತಿ ನೀಡಿದರು.
***
‘ಬೈಪಾಸ್‌ ನಿರ್ಮಿಸಿ’

ಬಿ.ಜಿ. ಕೆರೆ ಗ್ರಾಮಸ್ಥರು ಬೈಪಾಸ್‌ ರಸ್ತೆ ನಿರ್ಮಿಸುವಂತೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಮಾ. 5ರಂದು ಬೆಳಿಗ್ಗೆ 11ಕ್ಕೆ ರಾಂಪುರ ಸಮುದಾಯ ಭವನದಲ್ಲಿ ಹೆದ್ದಾರಿ ಪ್ರಾಧಿಕಾರ ಸಭೆ ಆಯೋಜಿಸಿದೆ. ಸಂತ್ರಸ್ತರು ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ಅಹವಾಲು ಸಲ್ಲಿಸಬೇಕು ಎಂದು ಪ್ರಾಧಿಕಾರ ನೋಟೀಸ್‌ ಜಾರಿ ಮಾಡಿದೆ.
***
ಮೂರು ಕಡೆ ಬೈಪಾಸ್‌

ಹೆದ್ದಾರಿ ಹಾದು ಹೋಗುವ ಪೈಕಿ ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ರಾಂಪುರ, ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಮಾತ್ರ ಸಧ್ಯಕ್ಕೆ ಬೈಪಾಸ್‌ ಮಂಜೂರಾಗಿದೆ. ರಸ್ತೆ ನೇರ ಮಾಡಲು ಕೆಲವೆಡೆ ಗ್ರಾಮ ಠಾಣದಲ್ಲಿ ರಸ್ತೆ ಮಾರ್ಗ ತುಸು ಬದಲಾಗಬಹುದು ಅಷ್ಟೇ ಎಂದು ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT