ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 50ರಷ್ಟು ಬೆಡ್‌ ಮೀಸಲಿಡದಿದ್ದರೆ ನೋಂದಣಿ ರದ್ದು

ಯಾರಿಗೂ ಚಿಕಿತ್ಸೆ ನಿರಾಕರಿಸುವಂತಿಲ್ಲ: ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಡಿಸಿ ಎಚ್ಚರಿಕೆ
Last Updated 28 ಜುಲೈ 2020, 16:16 IST
ಅಕ್ಷರ ಗಾತ್ರ

ಉಡುಪಿ: ಆಯುಷ್ಮಾನ್ ಭಾರತ್ ಯೋಜನೆಯಡಿ ನೋಂದಾಯಿಸಿಕೊಂಡಿರುವಖಾಸಗಿ ಆಸ್ಪತ್ರೆಗಳು ಕೋವಿಡ್–19 ಸೋಂಕಿತರಿಗೆ ಚಿಕಿತ್ಸೆ ನೀಡಲುಶೇ 50ರಷ್ಟು ಬೆಡ್‌ಗಳನ್ನು ಕಡ್ಡಾಯ ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು,ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಕೊರತೆ ಎದುರಾಗಬಾರದು. ನಿಯಮ ಪಾಲಿಸದ ಆಸ್ಪತ್ರೆಗಳ ನೋಂದಣಿಯನ್ನು ಕೆಪಿಎಂಇ ಕಾಯ್ದೆಯಡಿ ರದ್ದುಪಡಿಸಲಾಗುವುದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಯಡಿ 20 ಆಸ್ಪತ್ರೆಗಳು ನೋಂದಾಯಿಸಿಕೊಂಡಿದ್ದು, ಉಳಿದ ಖಾಸಗಿ ಆಸ್ಪತ್ರೆಗಳು ಕೂಡ ಎಬಿಆರ್‌ಕೆ ಅಡಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಆಸ್ಪತ್ರೆಗಳಲ್ಲಿ ಇಂದಿನಿಂದಲೇ ಬೆಡ್‌ಗಳ ವ್ಯವಸ್ಥೆಯಾಗಬೇಕು ಎಂದರು.

ಜಿಲ್ಲಾಡಳಿತ ಕಳುಹಿಸುವ ಕೋವಿಡ್ ರೋಗಿಗಳಿಗೆ ಬೆಡ್‌ಗಳು ಇಲ್ಲ ಎಂಬ ಕಾರಣ ನೀಡಿ ಚಿಕಿತ್ಸೆ ನಿರಾಕರಿಸಿದರೆ ನೋಂದಣಿ ರದ್ದು ಜತೆಗೆ, ಎಪಿಡಮಿಕ್ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೋವಿಡ್ ಚಿಕಿತ್ಸೆಗೆ ನೋಂದಾಯಿತ ಆಸ್ಪತ್ರೆಗಳು ಸೋಂಕಿತರಿಗೆ ಮಾತ್ರವಲ್ಲದೆ ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗೂ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು. ಎಲ್ಲ ಆಸ್ಪತ್ರೆಗಳು ಲಭ್ಯವಿರುವ ಬೆಡ್‌ಗಳ ಹಾಗೂ ಸೌಲಭ್ಯಗಳ ಮಾಹಿತಿಯನ್ನು ಬೆಡ್ ಮ್ಯಾನೆಜ್‌ಮೆಂಟ್‌ನಲ್ಲಿ ದಾಖಲಿಸಬೇಕು. ನಿರ್ಲಕ್ಷ್ಯ ತೋರಿದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್ ಮಾತನಾಡಿ, ಆಸ್ಪತ್ರೆಗಳಲ್ಲಿರುವ ಒಟ್ಟು ಬೆಡ್‌ಗಳ ಸಂಖ್ಯೆ, ಬಳಕೆ ಹಾಗೂ ಲಭ್ಯವಿರುವ ಮಾಹಿತಿ, ವೆಂಟಿಲೇಟರ್, ಐಸಿಯುಗಳ ವಿವರ ಸಲ್ಲಿಸುವಂತೆ ಸೂಚಿಸಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಡಿಎಚ್ಒ‌ ಡಾ. ಸುದೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ. ಮಧುಸೂಧನ್ ನಾಯಕ್‌, ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT