ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಹೊಂದಾಣಿಕೆಯಾಗದ ರಕ್ತದ ಗುಂಪು ಮೂತ್ರಪಿಂಡ ಕಸಿ ಯಶಸ್ವಿ

ಮಣಿಪಾಲದ ಕೆಎಂಸಿ ಆಸ್ಪತ್ರೆಯ ವೈದ್ಯರ ಸಾಧನೆ
Last Updated 3 ಫೆಬ್ರುವರಿ 2022, 13:48 IST
ಅಕ್ಷರ ಗಾತ್ರ

ಉಡುಪಿ: ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯವಾಗಿ ಆರು ತಿಂಗಳಿಂದ ಹಿಮೋ ಡಯಾಲಿಸಿಸ್‌ನಲ್ಲಿದ್ದ ಬಾಲಕನಿಗೆ ಹೊಂದಾಣಿಕೆಯಾಗದ (ಎಬಿಒ) ರಕ್ತದ ಗುಂಪು ಮೂತ್ರಪಿಂಡ ಕಸಿಯನ್ನು ಯಶಸ್ವಿಯಾಗಿ ಮಾಡಲಾಯಿತು.

ಶಿವಮೊಗ್ಗದ ‘ಒ’ ಪಾಸಿಟಿವ್ ರಕ್ತದ ಗುಂಪಿನ 14 ವರ್ಷದ ಬಾಲಕನಿಗೆ 3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯವಾಗಿತ್ತು. ಬಾಲಕನ ಅನಾರೋಗ್ಯ ಮತ್ತಷ್ಟು ಹದಗೆಟ್ಟು ದೈಹಿಕ ಬೆಳವಣಿಗೆ ಹಾಗೂ ಚಟುವಟಿಕೆ ಕುಂಠಿತವಾಗಿತ್ತು. ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗಕ್ಕೆ ಬಾಲಕನನ್ನು ದಾಖಲಿಸಿಕೊಂಡು ಪರಿಶೀಲಿಸಿ ಚಿಕಿತ್ಸಾ ಆಯ್ಕೆಗಳ ಬಗ್ಗೆ ಕುಟುಂಬಕ್ಕೆ ಸಲಹೆ ನೀಡಲಾಯಿತು.

ಮೂತ್ರಪಿಂಡ ದಾನಿ ಮತ್ತು ರಕ್ತದ ಹೊಂದಾಣಿಕೆಯ ಗುಂಪಿನಂತೆ ತಂದೆಯ ಮೂತ್ರಪಿಂಡ ಕಸಿ ಮಾಡಲು ನಿರ್ಧರಿಸಲಾಯಿತು. ಆದರೆ, ತಂದೆಗೆ ಮಧುಮೇಹ ಇದ್ದಿದ್ದರಿಂದ ಕಿಡ್ನಿಯನ್ನು ಪಡೆಯಲಾಗಲಿಲ್ಲ. ‘ಬಿ’ ಪಾಸಿಟಿವ್ ರಕ್ತದ ಗುಂ‍‍ಪು ಹೊಂದಿರುವ ತಾಯಿ ಮೂತ್ರಪಿಂಡ ದಾನಕ್ಕೆ ಮುಂದಾದರು. ಅಂತಿಮವಾಗಿ ಎಬಿಒ-ಹೊಂದಾಣಿಕೆಯಿಲ್ಲದ ಕಸಿ ಮಾಡಲು ನಿರ್ಧರಿಸಲಾಯಿತು.

ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಚಾವ್ಲಾ ಹಾಗೂ ತಂಡ ಟ್ರಾನ್ಸ್ಯೂಷನ್‌ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ ಹಾಗೂ ತಂಡದ ಸಹಕಾರದೊಂದಿಗೆ ಜ.4ರಂದು ಎ ಬಿ ಒ -ಹೊಂದಾಣಿಕೆಯಿಲ್ಲದ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡಲಾಯಿತು. ಬಾಲಕನ ಕಿಡ್ನಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಮೂತ್ರಪಿಂಡ ಕಸಿಯ ವೆಚ್ಚವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿಧಿಯಿಂದ ಭರಿಸಲಾಗಿದ್ದು, ಕುಟುಂಬದ ಆರ್ಥಿಕ ಹೊರೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.

ಈಚೆಗೆ ಮಕ್ಕಳಲ್ಲಿ ಮೂತ್ರಪಿಂಡದ ಕಾಯಿಲೆ ಮತ್ತು ವೈಫಲ್ಯ ಹೆಚ್ಚುತ್ತಿದ್ದು, ಆರಂಭಿಕ ಹಂತದಲ್ಲಿ ಕಾಯಿಲೆಯನ್ನು ಗುರುತಿಸಿ ಸಮಯೋಚಿತ ಚಿಕಿತ್ಸೆ ಹಾಗೂ ದೀರ್ಘಾವಧಿಯ ಆರೈಕೆ ಮಾಡುವುದು ಅಗತ್ಯವಿರುತ್ತದೆ. ಮೂತ್ರಪಿಂಡ ವೈಫಲ್ಯ ರೋಗಿಗಳಿಗೆ ಡಯಾಲಿಸಿಸ್ ಮತ್ತು ಮೂತ್ರಪಿಂಡ ಕಸಿಯಿಂದ ಮಾತ್ರ ಜೀವ ಉಳಿಸಬಹುದಾಗಿದೆ ಎಂದು ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ.ಶಂಕರ್ ಪ್ರಸಾದ್ ಹೇಳಿದರು.

ಮಕ್ಕಳಿಗೆ ಡಯಾಲಿಸಿಸ್‌ಗಿಂತ ಮೂತ್ರಪಿಂಡ ಕಸಿ ಉತ್ತಮ ಆಯ್ಕೆಯಾಗಿದ್ದು, ರಕ್ತದ ಗುಂಪಿನ ಹೊಂದಾಣಿಕೆಯಾಗದಿದ್ದರೆ ಮೂತ್ರಪಿಂಡ ದಾನಕ್ಕೆ ಸಮಸ್ಯೆಯಾಗುತ್ತದೆ. ಈ ಸಮಸ್ಯೆಯನ್ನು ಈಚೆಗೆ ಪರಿಣಾಮಕಾರಿಯಾಗಿ ನಿವಾರಿಸಲಾಗುತ್ತಿದೆ. ರಕ್ತದ ಗುಂಪುಗಳು ಹೊಂದಿಕೆಯಾಗದಿದ್ದರೂ ಮೂತ್ರಪಿಂಡ ಕಸಿ ಮಾಡಹುದಾಗಿದೆ ಎಂದು ಮೂತ್ರಪಿಂಡ ವಿಭಾಗದ ತಜ್ಞ ಡಾ. ದರ್ಶನ್ ರಂಗಸ್ವಾಮಿ ಹೇಳಿದರು.

ಮಕ್ಕಳಿಗೆ ಡಯಾಲಿಸಿಸ್, ಮೂತ್ರಪಿಂಡ ಬಯಾಪ್ಸಿ ಮತ್ತು ಕಿಡ್ನಿ ಕಸಿ ಸೌಲಭ್ಯವು ಮಣಿಪಾಲದ ಕಸ್ತೂರಬಾ ಆಸ್ಪತ್ರೆಯಲ್ಲಿ ಲಭ್ಯವಿದ್ದು ಕರಾವಳಿ ಮತ್ತು ಮಧ್ಯ ಕರ್ನಾಟಕದ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆ ನೀಡುತ್ತಿದೆ ಎಂದು ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT