ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮೂರನೇ ಅಲೆ: ಎಚ್ಚರಿಕೆ ಇರಲಿ

ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ
Last Updated 26 ಜನವರಿ 2022, 14:42 IST
ಅಕ್ಷರ ಗಾತ್ರ

ಉಡುಪಿ: ಇಲ್ಲಿನ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾಮಟ್ಟದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಧ್ವಜಾರೋಹಣ ನೆರವೇರಿಸಿದರು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.

ಪ್ರಸ್ತುತ ಕೋವಿಡ್‌ ಮೂರನೇ ಅಲೆ ಉತ್ತುಂಗದಲ್ಲಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಕಳೆದ 7 ದಿನಗಳಲ್ಲಿ ಜಿಲ್ಲೆಯಲ್ಲಿ ಶೇ 18ರಷ್ಟು ಕೋವಿಡ್ ಪಾಸಿಟಿವಿಟಿ ದರ ದಾಖಲಾಇದ್ದು, 6,989 ಸಕ್ರಿಯ ಪ್ರಕರಣಗಳು ವರದಿಯಾಗಿವೆ. 174 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

18 ವರ್ಷ ಮೇಲ್ಪಟ್ಟ 9,83,051 (ಶೇ 98.40) ಮಂದಿಗೆ ಮೊದಲ ಡೋಸ್‌, 8,65,243 ಮಂದಿಗೆ ಎರಡನೇ ಡೋಸ್‌ ಕೋವಿಡ್ ಲಸಿಕೆ ಹಾಕಲಾಗಿದೆ. 15ರಿಂದ18ವರ್ಷದೊಳಗಿನ 46657 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ 852560 ಕಾರ್ಡ್‌ ವಿತರಿಸಲಾಗಿದ್ದು, ರಾಜ್ಯದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಎಂದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲೆಯಲ್ಲಿ 48 ಮಕ್ಕಳ ಐಸಿಯುನೊಂದಿಗೆ ಜಿಲ್ಲಾ ಆಸ್ಪತ್ರೆ, ಕುಂದಾಪುರ ಹಾಗೂ ಕಾರ್ಕಳ ತಾಲ್ಲೂಕು ಆಸ್ಪತ್ರೆಯನ್ನು ನವೀಕರಿಸಲು ಯೋಜನೆ ರೂಪಿಸಿದ್ದು, ಸರ್ಕಾರ ಹಾಗೂ ದಾನಿಗಳ ಆರ್ಥಿಕ ನೆರವಿನಿಂದ ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಜಿಲ್ಲೆಯ 15775 ವಿದ್ಯಾರ್ಥಿಗಳಿಗೆ 3.80 ಕೋಟಿ ಶಿಷ್ಯ ವೇತನ, ಪ್ರಧಾನಮಂತ್ರಿ ಕೃಷಿ ಸಿಂಚಯ ಯೋಜನೆಯಡಿ ಬ್ರಹ್ಮಾವರ, ಕುಂದಾಪುರ, ಕಾರ್ಕಳ ತಾಲ್ಲೂಕಿನ 12553 ಹೆಕ್ಟೇರ್‌ನಲ್ಲಿ 42 ಕಿರು ಜಲಾನಯನಗಳನ್ನು 5 ವರ್ಷಗಳಲ್ಲಿ ನಿರ್ಮಾಣ ಮಾಡಲಾಗುವುದು. ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಡಿ 153801 ರೈತರಿಗೆ 215.22 ಕೋಟಿ ಪ್ರೋತ್ಸಾಹ ಧನ, 131915 ಮಂದಿಗೆ 75.01 ಕೋಟಿ ಸಹಾಯಧನ ವಿತರಿಸಲಾಗಿದೆ ಎಂದರು.

ಜಲಜೀವನ್ ಮಿಷನ್ ಅಡಿ 535 ಕಾಮಗಾರಿಗಳ ಅನುಮೋದನೆಯಾಗಿದ್ದು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಟೆಂಡರ್ ಹಂತದಲ್ಲಿದೆ. ಕಾರ್ಕಳ ಹೆಬ್ರಿ, ಕಾಪು ವ್ಯಾಪ್ತಿಯಲ್ಲಿ 1.215 ಕೋಟಿ ಮೊತ್ತದ ಬಹುಗ್ರಾಮ ಕುಡಿಯುವ ನೀರಿನ ಯೋಜನಾ ವರದಿಯನ್ನು ಸರ್ಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ನರೇಗಾ ಅಡಿ 7 ಲಕ್ಷ ಮಾನವ ದಿನಗಳಗುರಿಗೆ ಪ್ರತಿಯಾಗಿ 7.46 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದ್ದು, 31.90 ಕೋಟಿ ವಿನಿಯೋಗಿಸಿ 9803 ಆಸ್ತಿ ಸೃಜಿಸಲಾಗಿದೆ.ಉಡುಪಿ ನಗರಸಭಾ ವ್ಯಾಪ್ತಿಗೆ 24 ತಾಸುಕುಡಿಯುವ ನೀರು ಪೂರೈಸುವ ಉದ್ದೇಶದಿಂದ 338.63 ಕೋಟಿ ವೆಚ್ಚದಲ್ಲಿ ವಾರಾಹಿ ನದಿ ಮೂಲಕ ನೀರು ಸರಬರಾಜು ಮಾಡುವ ಯೋಜನೆ ಕಾರ್ಯಗತವಾಗುತ್ತಿದೆ ಎಂದು ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಪೊಲೀಸ್, ಕರಾವಳಿ ಕಾವಲು ಪಡೆ, ಅಗ್ನಿಶಾಮಕ, ಗೃಹ ರಕ್ಷಕ, ಅಬಕಾರಿ ,ಅರಣ್ಯ ಮತ್ತು ಕಾಲೇಜು ಎನ್‌ಸಿಸಿ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಾಧಕರಾದ ಅಂಗವಿಕಲ ಮಕ್ಕಳಾದ ಶ್ರೀಕೃಷ್ಣ ಮತ್ತು ಅರ್ಚನಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಾಧಕ ಕೃಷಿಕರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಲಾಯಿತು.

ಕಾರ್ಮಿಕ ಇಲಾಖೆಯ ಆಶಾದೀಪ ಯೋಜನೆಯಡಿ ಚೆಕ್ ವಿತರಿಸಲಾಯಿತು. ಉಡುಪಿ ಶಾಸಕ ಕೆ.ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್‌ ಭಟ್, ಎಸ್‌ಪಿ ಎನ್‌.ವಿಷ್ಣುವರ್ಧನ್, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶುಕುಮಾರ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಇದ್ದರು.

ಕೋವಿಡ್ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಯೂಟ್ಯೂಬ್ ಮತ್ತು ಸ್ಥಳೀಯ ವಾಹಿನಿಯಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ ವಂದಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT