ಬುಧವಾರ, ಏಪ್ರಿಲ್ 1, 2020
19 °C
ಶಿರ್ವದ ಗ್ರಾಮ ಪಂಚಾಯಿತಿ ಸದಸ್ಯರ ಪರಿಸರ ಪ್ರೇಮ

ಇಲ್ಲಿ ಪ್ಲಾಸ್ಟಿಕ್ ಕೊಟ್ಟರೆ ಅಕ್ಕಿ ಸಿಗುತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಶಿರ್ವದ ಬಂಟಕಲ್ಲಿನಲ್ಲಿ ಒಂದು ಕೆ.ಜಿ. ಪ್ಲಾಸ್ಟಿಕ್ ಕೊಟ್ಟರೆ, ಒಂದು ಕೆ.ಜಿ. ಅಕ್ಕಿ ಉಚಿತವಾಗಿ ಸಿಗಲಿದೆ. ಶಿರ್ವ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್.ಪಾಟ್ಕರ್ ಅವರ ವಿಭಿನ್ನ ಪ್ರಯತ್ನವಿದು.

ರಸ್ತೆ, ಚರಂಡಿ, ಖಾಲಿ ನಿವೇಶನ ಹೀಗೆ ಎಲ್ಲೆಂದರಲ್ಲಿ ರಾಶಿಯಾಗಿ ಬಿದ್ದಿರುವ ಪ್ಲಾಸ್ಟಿಕ್‌ ಅನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಹಾಗೂ ಜನರಲ್ಲಿ ಪರಿಸರ ಕಾಳಜಿ ಮೂಡಿಸಲು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಅಕ್ಕಿಯನ್ನು ಕೊಡಲಾಗುತ್ತಿದೆ ಎನ್ನುತ್ತಾರೆ ಪಾಟ್ಕರ್.

ಸಾರ್ವಜನಿಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವ ಬದಲು, ಮನೆಯಲ್ಲಿಯೇ ಸಂಗ್ರಹಿಸಿ ಕನಿಷ್ಠ 1 ಕೆ.ಜಿಯಾದ ಬಳಿಕ ಬಂಟಕಲ್ಲಿನಲ್ಲಿರುವ ಕಚೇರಿಗೆ ತಲುಪಿಸಿದರೆ, ಪ್ಲಾಸ್ಟಿಕ್‌ನ ತೂಕದಷ್ಟೆ ಅಕ್ಕಿ ಪಡೆಯಬಹುದು. 10 ಕೆ.ಜಿಗೂ ಹೆಚ್ಚು ಪ್ಲಾಸ್ಟಿಕ್ ಇದ್ದರೆ, ಮನೆಗೆ ಬಂದು ತೆಗೆದುಕೊಂಡು ಹೋಗುತ್ತೇವೆ ಎನ್ನುತ್ತಾರೆ ಅವರು.

ತೆಲಂಗಾಣ ರಾಜ್ಯದಲ್ಲಿ ಜಿಲ್ಲಾಧಿಕಾರಿಯೊಬ್ಬರು ಪ್ಲಾಸ್ಟಿಕ್‌ಗೆ ಬದಲಾಗಿ ಅಕ್ಕಿಕೊಡುವ ಸುದ್ದಿ ಓದಿ ಪ್ರೇರಿತಗೊಂಡು ಶಿರ್ವದಲ್ಲಿಯೂ ಅನುಷ್ಠಾನಕ್ಕೆ ಮುಂದಾದೆ. ಪ್ರಾಯೋಗಿಕವಾಗಿ ಜ.15ರಿಂದ 30ರವರೆಗೂ ಸ್ಥಳೀಯರಿಂದ 45 ಕೆ.ಜಿ. ಪ್ಲಾಸ್ಟಿಕ್ ಸಂಗ್ರಹಿಸಿ 45 ಕೆ.ಜಿ. ಅಕ್ಕಿ ವಿತರಿಸಲಾಗಿತ್ತು. ಜನರಿಂದ ಪ್ರೋತ್ಸಾಹವೂ ಸಿಕ್ಕಿತ್ತು. ಈಗ ದಾನಿಯೊಬ್ಬರು ಒಂದು ಕ್ವಿಂಟಲ್ ಅಕ್ಕಿ ಕೊಟ್ಟು, ಯೋಜನೆ ಮುಂದುವರಿಸುವಂತೆ ತಿಳಿಸಿದ್ದಾರೆ ಎಂದು ಪಾಟ್ಕರ್ ಹೇಳಿದರು.

ಲಯನ್ಸ್ ಕ್ಲಬ್‌ ಅಧ್ಯಕ್ಷನಾಗಿಯೂ ಸಮಾಜಕ್ಕೆ ಕೈಲಾದ ಸೇವೆ ಮಾಡುತ್ತಿದ್ದೇನೆ. ಸಾರ್ವಜನಿಕರಿಂದ ಸಿಗುತ್ತಿರುವ ಪ್ರೋತ್ಸಾಹ ನೋಡಿದರೆ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಅಕ್ಕಿಕೊಡುವ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವ ವಿಶ್ವಾಸ ಬಂದಿದೆ ಎಂದರು.

ಅಕ್ಕಿ ಕೊಡುವುದು ಮಾತ್ರವಲ್ಲ; ಜನರಲ್ಲಿ ಪರಿಸರದ ಬಗ್ಗೆ, ಪ್ಲಾಸ್ಟಿಕ್‌ ಬಳಕೆಯಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್‌ ಕೊಟ್ಟವರಿಗೆ ಪರಿಸರ ಕಾಳಜಿಯ ಬರಹವುಳ್ಳ ಬಟ್ಟೆಯ ಬ್ಯಾಗ್‌ನಲ್ಲಿ ಅಕ್ಕಿಯನ್ನು ವಿತರಿಸಲಾಗುತ್ತಿದೆ. ಈ ಮೂಲಕ ಸಮಾಜಕ್ಕೆ ಕೈಲಾದ ಸೇವೆ ಮಾಡುತ್ತಿದ್ದೇನೆ ಎನ್ನುತ್ತಾರೆ ಪಾಟ್ಕರ್.

ಹೆಚ್ಚಿನ ಮಾಹಿತಿಗೆ ಆಸಕ್ತರು ಮೊಬೈಲ್‌: 9880724512 ಸಂಪರ್ಕಿಸಬಹುದು. ದಾನಿಗಳೂ ಈ ಕಾರ್ಯಕ್ಕೆ ಕೈಜೋಡಿಸಬಹುದು ಎಂದು ಮನವಿ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು