ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥ ನೀರಿ‌ನಿಂದ ಹಸಿರು

Last Updated 23 ಮಾರ್ಚ್ 2018, 11:37 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ‘ಮನಸ್ಸಿದ್ದರೆ ಮಾರ್ಗ‘ ಎಂಬುದಕ್ಕೆ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಗೃಹಿಣಿ ಬಿ.ವಿ.ಸುಗುಣ ಉತ್ತಮ ನಿದರ್ಶನವಾಗಿದ್ದಾರೆ. ಮನೆಯ ವ್ಯರ್ಥ ನೀರು ಬಳಸಿ ಹಲವು ಜಾತಿಯ ಗಿಡ, ಮರಗಳನ್ನು ಬೆಳೆಸುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಸುಗುಣ ಅವರಿಗೆ ಕೆಲವು ವರ್ಷಗಳ ಹಿಂದೆ ಮನೆಯ ಹಿತ್ತಲಲ್ಲಿ ಗಿಡ, ಮರ ಬೆಳೆಸುವ ಯೋಚನೆ ಬಂದಿತು. ಗಿಡ ಬೆಳೆಸಬೇಕಾದರೆ ನೀರು ಬೇಕೇ ಬೇಕು. ಮನೆ ಬಳಕೆಗೆ ಬೇಕಾದ ನೀರಿಗೇ ಕಷ್ಟ ಇರಬೇಕಾದರೆ, ಗಿಡ ಬೆಳೆಸುವುದು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡತೊಡಗಿತು. ಬಹಳಷ್ಟು ಆಲೋಚನೆ ಮಾಡಿದ ಬಳಿಕ ಮನೆ ಮಂದಿ ಬಳಸುವ ಪ್ರತಿ ನೀರಿನ ಹನಿಯನ್ನೂ ವ್ಯರ್ಥವಾಗದಂತೆ ಬಳಸಿಕೊಳ್ಳುವ ನಿರ್ಧಾರಕ್ಕೆ ಬಂದರು.

ಮನೆಯ ಸದಸ್ಯರು ಹೊರಗಿನಿಂದ ಬಂದಾಗ ಗಿಡದ ಬುಡದಲ್ಲಿ ಕೈ– ಕಾಲು ತೊಳೆದು ಮನೆಯೊಳಗೆ ಬರಬೇಕು. ಬೆಳಿಗ್ಗೆ ಗಿಡದ ಸುತ್ತಲಿನ ಪಾತಿಯಲ್ಲಿ ಮುಖ ತೊಳೆಯಬೇಕು. ಬಟ್ಟೆ ತೊಳೆದ ಬಳಿಕ ಜಾಲಿಸಿದ ನೀರನ್ನು ಗಿಡಗಳಿಗೆ ಹಾಕಬೇಕು, ದನದ ಕೊಟ್ಟಿಗೆ ತಗಡಿನ ಹಾಳೆಗಳಿಂದ ಜಾರಿ ಬರುವ ಮಳೆ ನೀರನ್ನು ಸಂಗ್ರಹಿಸಿ ತೇವದ ಅಗತ್ಯ ಇರುವ ಗಿಡಗಳಿಗೆ ಹಾಕಬೇಕು ಎಂದು ಮನೆ ಮಂದಿಗೆ ಹೇಳಿದರು.

ಕುಟುಂಬದ ಎಲ್ಲ ಸದಸ್ಯರೂ ಕೃಷಿಕರೇ ಆಗಿದ್ದು, ಸುಗುಣ ಅವರ ಮಾತನ್ನು ಒಪ್ಪಿದರು. ಅದರಂತೆ ನಡೆದು ಕೊಂಡರು. ಈಗ ಹಿತ್ತಲು ತೋಟದಲ್ಲಿ ನುಗ್ಗೆ, ನೆಲ್ಲಿ, ಶ್ರೀಗಂಧ ಮರಗಳ ಜತೆಗೆ ಒಂದು ತೆಂಗಿನ ಮರವೂ ಬೆಳೆದು ನಿಂತಿದೆ. ಸಪೋಟ, ದಾಳಿಂಬೆ ಗಿಡಗಳು ಫಲಭರಿತವಾಗಿವೆ. ಗುಲಾಬಿ, ಕಾಕಡ, ಕಣಗಲೆ, ಬ್ರಹ್ಮ ಕಮಲದಂಥ ಹೂಗಿಡಗಳು ತೋಟಕ್ಕೆ ಶೋಭೆ ತಂದಿವೆ. ದೊಡ್ಡಪತ್ರೆಯಂಥ ಮೂಲಿಕಾ ಸಸ್ಯವೂ ಇಲ್ಲಿದೆ. ತಾವೇ ಬೆಳೆದ ಸಾಸಿವೆ, ಒಗ್ಗರಣೆ ಅಗತ್ಯವನ್ನು ಪೂರೈಸುತ್ತದೆ. ಎಳ್ಳಿಗಿಡ ಉಪ್ಪಿನ ಕಾಯಿಗೆ ಹೊಸ ರುಚಿ ನೀಡುತ್ತದೆ.

ತೋಟದಲ್ಲಿ ನಡೆಯುವುದು ಸಂಪೂರ್ಣ ಸಾವಯವ ಕೃಷಿ. ರಾಸಾಯನಿಕ ಗೊಬ್ಬರ ತೋಟಕ್ಕೆ ದೂರ. ಗಿಡಗಳಿಗೆ ಆಗಾಗ ತಿಪ್ಪೆ ಗೊಬ್ಬರ ಕೊಟ್ಟು ಎಂದಿನಂತೆ ನೀರುಣಿಸಲಾಗುತ್ತದೆ. ಗಿಡ, ಮರಗಳು ಸೊಂಪಾಗಿ ಬೆಳೆದಿವೆ.

‘ನಾವು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕಸದಿಂದ ರಸ ತೆಗೆಯುವುದನ್ನು ಕಲಿಯಬೇಕು. ಅನುಪಯುಕ್ತ ವಸ್ತುಗಳಿಂದ ಉಪಯುಕ್ತ ವಸ್ತುಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಬೇಕು. ವ್ಯರ್ಥ ನೀರಿನ ಬಳಕೆ ಹಾಗೂ ನೀರಿನ ಮಿತ ಬಳಕೆ ಮೂಲಕ ಸಾಧ್ಯವಾದ ಬೆಳೆ ತೆಗೆಯಲು ಮುಂದಾಗಬೇಕು. ಹಿತ್ತಲು ತೋಟದಿಂದ ಇಡೀ ಕುಟುಂಬದ ಆರೋಗ್ಯ ವೃದ್ದಿಯಾಗುತ್ತದೆ‘ ಎಂಬುದು ಸುಗುಣ ಅವರ ಅಭಿಪ್ರಾಯ.

ಇದೊಂದು ದೊಡ್ಡ ಯಶೋಗಾಥೆ ಎಂದು ಹೇಳಲಾಗದಿದ್ದರೂ. ಅಲ್ಲಗಳೆಯಲಾಗದ ಸಾಧನೆ ಎಂಬುದರಲ್ಲಿ ಎರಡು ಮಾತಿಲ್ಲ. ಚಿಕ್ಕ ಚಿಕ್ಕ ಪ್ರಯತ್ನಗಳು ದೊಡ್ಡ ಪರಿಣಾಮ ಉಂಟುಮಾಡಬಲ್ಲವು ಎಂಬುದಕ್ಕೆ ಸುಗುಣ ಅವರ ಯಶಸ್ವಿ ಪ್ರಯತ್ನ ಒಂದು ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT