ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ ಮಹಲ್‌ ಪಾರ್ಶ್ವ ಕುಸಿತ: ಅಪಾಯದಿಂದ ಪಾರಾದ ಸಾರ್ವಜನಿಕರು

ಹಳೆಯ ಕಟ್ಟಡಗಳ ತೆರವಿಗೆ ಪೌರಾಯುಕ್ತರ ಸೂಚನೆ
Last Updated 18 ಸೆಪ್ಟೆಂಬರ್ 2020, 13:18 IST
ಅಕ್ಷರ ಗಾತ್ರ

ಉಡುಪಿ: ನಗರದ ಚಿತ್ತರಂಜನ್‌ ಸರ್ಕಲ್‌ನಲ್ಲಿರುವ ರಾಯಲ್‌ ಮಹಲ್‌ ವಸತಿ ಸಮ್ಮುಚ್ಛಯದ ಒಂದು ಪಾರ್ಶ್ವ ಶುಕ್ರವಾರ ಕುಸಿದು ಬಿದ್ದಿದೆ.

ನೆಲಮಹಡಿಯಲ್ಲಿದ್ದ ಚಿಪ್ಸ್‌ ತಯಾರಿಕಾ ಅಂಗಡಿ ಸಂಪೂರ್ಣ ಕುಸಿದಿದೆ. ಪಕ್ಕದಲ್ಲಿದ್ದ ಜನೌಷಧ ಕೇಂದ್ರಕ್ಕೆ ಭಾಗಶಃ ಹಾನಿಯಾಗಿದೆ. ರಾಯಲ್‌ ಮಹಲ್‌ ಬಹಳ ಹಳೆಯ ಕಟ್ಟಡವಾಗಿದ್ದು, ಶಿಥಿಲಗೊಂಡಿತ್ತು.

ಬೆಳಿಗ್ಗೆ ಕಟ್ಟಡದ ಸಿಮೆಂಟ್ ಭಾಗ ಅಲ್ಲಲ್ಲಿ ಉದುರುತ್ತಿರುವುದನ್ನು ಗಮನಿಸಿದ ಅಂಗಡಿ ಮಾಲೀಕರು ಕಟ್ಟಡದಿಂದ ಹೊರಗೆ ಬಂದಿದ್ದರು. ಪಕ್ಕದಲ್ಲೇ ಇದ್ದ ಟ್ಯಾಕ್ಸಿ ಚಾಲಕರು ಕೂಡ ಅಲ್ಲಿಂದ ತೆರಳಿದ್ದರು. ಇದಾದ ಕೆಲಹೊತ್ತಿನಲ್ಲಿ ಕಟ್ಟಡ ಧರೆಗುರುಳಿದೆ. ಕಟ್ಟಡ ಬೀಳುವಾಗ ಬೆದರಿ ಓಡುವಾಗಮಹಿಳೆಯೊಬ್ಬರಿಗೆ ಚಿಕ್ಕ ಗಾಯವಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯವಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಕಟ್ಟಡ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಇತರೆ ಮಳಿಗೆಗಳಲ್ಲಿದ್ದವರನ್ನು ಹೊರಗೆ ಕಳುಹಿಸಿ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿದರು. ಕಟ್ಟಡದ ಬಳಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು.

ಬಳಿಕನಗರಸಭೆ ಪೌರಾಯುಕ್ತ ಆನಂದ್ ಸಿ.ಕಲ್ಲೋಳಿಕರ್ ಹಾಗೂ ನಗರಸಭೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟಡದಲ್ಲಿರುವ ಇತರೆ ಅಂಗಡಿಗಳ ಮಾಲೀಕರು ತಕ್ಷಣ ಮಳಿಗೆ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಪೌರಾಯುಕ್ತರು ‘ಸಾರ್ವಜನಿಕರ ಹಿತದೃಷ್ಟಿಯಿಂದ ನಗರದಲ್ಲಿರುವ ತೀರಾ ಹಳೆಯದಾದ ಹಾಗೂ ವಾಸಕ್ಕೆ ಯೋಗ್ಯವಲ್ಲದ ಶಿಥಿಲಾವಸ್ಥೆ ತಲುಪಿರುವ ಕಟ್ಟಡಗಳನ್ನು ಗುರುತಿಸಿ ತೆರವುಗೊಳಿಸುವಂತೆ ಮಾಲೀಕರಿಗೆ ನೋಟಿಸ್‌ ನೀಡಲಾಗುವುದು. ತೆರವಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗುವುದು. ತೆರವುಗೊಳಿಸದಿದ್ದರೆ ನಗರಸಭೆಯಿಂದ ತೆರವುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

***

ನಗರಸಭೆ ತಕ್ಷಣ ದಶಕಗಳಿಂದ ಯಾರೂ ವಾಸವಿಲ್ಲದ ಪಾಳು ಕಟ್ಟಡಗಳನ್ನು ಗುರುತಿಸುವ ಕಾರ್ಯ ಕೈಗೆತ್ತಿಕೊಳ್ಳಲಿದೆ. ನಾಗರಿಕರ ಪ್ರಾಣಕ್ಕೆ ಕುತ್ತುತರುವಂತಹ ಕಟ್ಟಡಗಳನ್ನು ತೆರವುಗೊಳಿಸಲಿದೆ.

ಆನಂದ್ ಸಿ.ಕಲ್ಲೋಳಿಕರ್‌, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT