ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಹತ್ತಲು ಅಡ್ಡಿಪಡಿಸಿದ್ದ ಉಕ್ರೇನಿಗರು: ಕಹಿ ಅನುಭವ ಬಿಚ್ಚಿಟ್ಟ ವಿದ್ಯಾರ್ಥಿನಿ

ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ಉಕ್ರೇನ್‌ನಲ್ಲಿ ಸಿಲುಕಿದ್ದ ಉಡುಪಿಯ ವಿದ್ಯಾರ್ಥಿಗಳು
Last Updated 9 ಮಾರ್ಚ್ 2022, 15:19 IST
ಅಕ್ಷರ ಗಾತ್ರ

ಉಡುಪಿ: ಯುದ್ಧಭೂಮಿ ಉಕ್ರೇನ್‌ನಲ್ಲಿ ಸಿಲುಕಿದ್ದ ಉಡುಪಿಯ ಕಲ್ಯಾಣಪುರದ ನಿವಾಸಿ ಆ್ಯನಿಫ್ರೆಡ್ ರಿಡ್ಲೆ ಡಿಸೋಜಾ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಈ ಮೂಲಕ ಉಕ್ರೇನ್‌ನಲ್ಲಿ ಸಿಲುಕಿದ್ದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ತವರಿಗೆ ಬಂದಂತಾಗಿದೆ.

ಉಕ್ರೇನ್‌ನಲ್ಲಿ ಅನುಭವಿಸಿದ ಯಾತನೆ, ಭಾರತಕ್ಕೆ ಮರಳುವಾಗ ಎದುರಿಸಿದ ಸವಾಲುಗಳ ಬಗ್ಗೆ ಆ್ಯನಿಫ್ರೆಡ್‌ ಮಾಧ್ಯಮಗಳೊಂದಿಗೆ ಹಂಚಿಕೊಂಡರು.

ರಷ್ಯಾ ಉಕ್ರೇನ್‌ ಮೇಲೆ ಯುದ್ಧ ಸಾರಿದ ಬಳಿಕ ಹಾರ್ಕೀವ್‌ನ ಬಂಕರ್‌ನಲ್ಲಿ 10 ದಿನ ಕಾಲ ಕಳೆಯಬೇಕಾಯಿತು. ಸರಿಯಾಗಿ ನಿದ್ದೆ ಇಲ್ಲ, ಆಹಾರ ಸಿಗುತ್ತಿರಲಿಲ್ಲ. ಬಾಂಬ್‌, ಶೆಲ್‌ಗಳ ಅಬ್ಬರದ ಮಧ್ಯೆ ಜೀವಭಯದಲ್ಲಿ ದಿನ ದೂಡಬೇಕಾಗಿತ್ತು. ಬಂಕರ್‌ಗಳಲ್ಲಿ ಶಬ್ದಮಾಡುವಂತೆಯೂ ಇರಲಿಲ್ಲ ಎಂದು ಕಹಿ ಅನುಭವಗಳನ್ನು ಹಂಚಿಕೊಂಡರು.

ಹಾರ್ಕೀವ್‌ ಬಂಕರ್‌ನಲ್ಲಿದ್ದಾಗ ಭಾರತದ ರಾಯಭಾರ ಕಚೇರಿಯಿಂದ ಬಂಕರ್ ಖಾಲಿ ಮಾಡುವಂತೆ ಸಂದೇಶ ಬಂತು. ಆದರೆ, ಪ್ರಯಾಣಕ್ಕೆ ವಾಹನಗಳ ವ್ಯವಸ್ಥೆ ಇರಲಿಲ್ಲ. 7 ಕಿ.ಮೀ ನಡೆದು ರೈಲು ನಿಲ್ದಾಣ ಸೇರಬೇಕಾಯಿತು ಎಂದು ವಿವರಿಸಿದರು.

ಪೆಪ್ಪರ್ ಸ್ಪ್ರೇ ಮಾಡಿದರು.

ರೈಲು ನಿಲ್ದಾಣ ತಲುಪಿದ ಭಾರತೀಯ ವಿದ್ಯಾರ್ಥಿಗಳ ಮೇಲೆ ಸ್ಥಳೀಯರು ಪೆಪ್ಪರ್ ಸ್ಪ್ರೇ ಮಾಡಿದರು. ರೈಲು ಹತ್ತಲು ಅಡ್ಡಿಪಡಿಸಿದರು. ರೈಲಿನ ಬಾಗಿಲಿಗೆ ಅಡ್ಡಲಾಗಿ ನಿಂತು ಹೊರಗೆ ತಳ್ಳಲು, ಹಲ್ಲೆ ಮಾಡಿದರು. ಭಾರತ ಬಿಟ್ಟು ಉಕ್ರೇನ್‌ಗೆ ಬಂದಿದ್ದು ಏಕೆ ಎಂದೆಲ್ಲ ನಿಂದಿಸಿದರು ಎಂದು ಆ್ಯನಿಫ್ರೆಡ್‌ ತಿಳಿಸಿದರು.

ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಭಾರತೀಯ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ರೈಲು ಹತ್ತಿದೆವು. ಬಳಿಕ ಹಂಗೇರಿ ಗಡಿ ತಲುಪಿದ ಬಳಿಕ ಕೇಂದ್ರ ಸರ್ಕಾರ ಸುರಕ್ಷಿತವಾಗಿ ನಮ್ಮನ್ನು ಮನೆಗೆ ತಲುಪಿಸಿತು ಎಂದು ನಿಟ್ಟುಸಿರು ಬಿಟ್ಟರು ಆ್ಯನಿಫ್ರೆಡ್‌.

ಹಾರ್ಕೀವ್ ಹಾಗೂ ಕೀವ್ ನಗರದ ಮೇಲೆ ನಿರಂತರ ಶೆಲ್‌ ದಾಳಿ ನಡೆಯುತ್ತಿದ್ದ ಕಾರಣ ಅಲ್ಲಿಗೆ ಬೇರೆ ದೇಶದ ವಿಮಾನಗಳು ಬರಲು ಸಾಧ್ಯವಿರಲಿಲ್ಲ. ನೆರೆಯ ದೇಶದ ಗಡಿ ತಲುಪುದು ಭಾರತೀಯ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿತ್ತು ಎಂದರು.

ಯುದ್ಧ ಆರಂಭವಾಗುವ ಮುನ್ಸೂಚನೆ ಸಿಕ್ಕಾಗ ಆನ್‌ಲೈನ್ ತರಗತಿ ಮಾಡುವಂತೆ ಕಾಲೇಜಿನ ಡೀನ್‌ ಬಳಿ ಮನವಿ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಪರಿಣಾಮ, ಉಕ್ರೇನ್‌ನಲ್ಲಿಯೇ ತೊಂದರೆಗೆ ಸಿಲುಕಬೇಕಾಯಿತು. ರಾಯಭಾರ ಕಚೇರಿ ಕೂಡ ಸ್ಪಷ್ಟವಾಗಿ ದೇಶ ತೊರೆಯುವಂತೆ ನಿರ್ದೇಶನ ನೀಡಿದ್ದರೂ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದರು.

’ಪ್ರಾರ್ಥನೆ ಫಲಿಸಿತು‘

ಮಗಳಿಗೆ ಅನಾರೋಗ್ಯ ಸಮಸ್ಯೆ ಇದ್ದ ಕಾರಣ ಹೆಚ್ಚು ಆತಂಕ ಇತ್ತು. ಮಗಳ ಪೋನ್‌ಗಾಗಿ ಕಾಯುವುದೇ ಕೆಲಸವಾಗಿತ್ತು. ಪ್ರತಿದಿನ ಚರ್ಚ್‌ಗೆ ತೆರಳಿ ಮಗಳು ಸುರಕ್ಷಿತವಾಗಿ ಮರಳುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದೆ. ಕೊನೆಗೂ ಪ್ರಾರ್ಥನೆ ಫಲಿಸಿತು. ಕೇಂದ್ರ ಸರ್ಕಾರ ಹಾಗೂ ರಾಯಭಾರ ಕಚೇರಿಯಿಂದ ಸಹಾಯವಾಗಿದೆ. ಅಲ್ಲಿನ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡಿ ಮಾರ್ಗದರ್ಶನ ಮಾಡಿದ್ದಾರೆ ಎಂದು ಆ್ಯನಿಫ್ರೆಡ್‌ ಡಿಸೋಜಾ ಅವರ ತಾಯಿ ಶೋಭಾ ಡಿಸೋಜಾ ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT