ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಠಾಣೆ ಮೇಲೆ ಕಲ್ಲು ತೂರಾಟ: ನಾಲ್ವರಿಗೆ ನ್ಯಾಯಾಂಗ ಬಂಧನ

ಹಿಂದೆ, ಡಿಸಿ, ಎಸಿ ಮೇಲೆ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು
Last Updated 19 ಮೇ 2019, 10:47 IST
ಅಕ್ಷರ ಗಾತ್ರ

ಉಡುಪಿ: ಕುಂದಾಪುರ ಗ್ರಾಮಾಂತರ ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿ ಪೊಲೀಸ್ ಸಿಬ್ಬಂದಿಗೆ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳಿಗೆ ಕುಂದಾಪುರ ನ್ಯಾಯಾಲಯ ಮೇ 31ರವೆಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿಗಳಾದ ಶಾಹಿದ್ ಬೆಟ್ಟೆ, ಜಾಕಿರ್ ಹುಸೇನ್, ಕರಾಣಿ ಶಾಕಿರ್, ತಬ್ರೇಜ್‌ ಸಾಹೇಬ್ ಬಂಧಿತ ಆರೋಪಿಗಳಾಗಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ: ಗುರುವಾರ ರಾತ್ರಿ ಕಂಡ್ಲೂರು ಜೆ.ಎಂ ರಸ್ತೆ ಸಮೀಪದ ವರಾಹಿ ನದಿಯಿಂದ ಆಮ್ನಿ ವಾಹನದಲ್ಲಿ ಮರಳು ತುಂಬಿಕೊಂಡು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದರು. ಈ ಸಂದರ್ಭ ವಾಹನದಲ್ಲಿದ್ದವರು ಪರಾರಿಯಾಗಿದ್ದರು. ವಾಹನವನ್ನು ವಶಕ್ಕೆ ಪಡೆದು ಕುಂದಾಪುರ ಗ್ರಾಮಾಂತರ ಠಾಣೆಗೆ ತಂದು ನಿಲ್ಲಿಸಲಾಗಿತ್ತು.

ರಾತ್ರಿ 10.30ರ ಸುಮಾರಿಗೆ ಹಲವರು ಠಾಣೆಯ ಬಳಿ ಜಮಾಯಿಸಿ, ಪೊಲೀಸ್ ಸಿಬ್ಬಂದಿ ಮಧುಸೂದನ್ ಅವರನ್ನು ಸುತ್ತುವರಿದು ಯಾರ ಮೇಲೂ ಕೇಸ್‌ ಹಾಕದಂತೆ, ವಾಹನವನ್ನು ಬಿಡುವಂತೆ ಒತ್ತಡ ಹಾಕಿದ್ದರು.

ಈ ಸಂದರ್ಭ ಕಿಡಿಗೇಡಿಗಳು ಠಾಣೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ವೇಳೆ ಪೊಲೀಸರು ಕೈಗೆ ಸಿಕ್ಕ ನಾಲ್ವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಆರೋಪಿಗಳ ವಿರುದ್ಧ 143, 147,148, 341, 353, 504, 332, 149 ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.

ಕಾನೂನು ಕ್ರಮ:

ಕಾನೂನು ಕೈಗೆತ್ತಿಕೊಂಡ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆಗೆ ಕಾರ್ಯ ಪ್ರವೃತ್ತವಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, 4 ಕಡೆ ಚೆಕ್‌ಪೋಸ್ಟ್‌ಗಳನ್ನು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಪಿಕೆಟಿಂಗ್ ಪಾಯಿಂಟ್‌ಗಳನ್ನು ಮಾಡಲಾಗಿದೆ. ರಾತ್ರಿ ಗಸ್ತು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸ್‌ಪಿ ನಿಶಾ ಜೇಮ್ಸ್‌, ಎಎಸ್‌ಪಿ ಕುಮಾರಚಂದ್ರ ಹಾಗೂ ಡಿವೈಎಸ್‌ಪಿ ಬಿ.ಪಿ.ದಿನೇಶ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT