ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ನಿರ್ಮಾಣ ಕ್ಷೇತ್ರಕ್ಕೆ ಜಿಲ್ಲಾಡಳಿತ ಪೆಟ್ಟು

ಸಂಪೂರ್ಣ ಮರಳುಗಾರಿಕೆಗೆ ಅನುಮತಿ ನೀಡದ ಜಿಲ್ಲಾಡಳಿತ: ಶಾಸಕ ರಘುಪತಿ ಭಟ್‌ ಆರೋಪ
Last Updated 28 ಜನವರಿ 2019, 12:38 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಮರಳುಗಾರಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಮತಿ ನೀಡಿದ್ದರೂ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಶಾಸಕ ರಘುಪತಿ ಭಟ್‌ ಆರೋಪಿಸಿದರು.

ಮರಳುಗಾರಿಕೆ ಆರಂಭಕ್ಕೆ ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ಮರಳು ಹೋರಾಟ ಸಮಿತಿ ಆರಂಭಿಸಿರುವ ಧರಣಿಯಲ್ಲಿ ಮಾತನಾಡಿದರು.

ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಜ.4ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಶಾಸಕರು, ಸಚಿವರು ಹಾಗೂ ಗಣಿ ಇಲಾಖೆ ಕಾರ್ಯದರ್ಶಿಗಳ ಸಭೆ ನಡೆಯಿತು. ಹಿಂದೆ ಜಿಲ್ಲೆಯಲ್ಲಿ ಮರಳು ತೆಗೆಯಲು ಪರವಾನಗಿ ಪಡೆದಿದ್ದ ಎಲ್ಲರಿಗೂ ಈ ಬಾರಿಯೂ ಅನುಮತಿ ನೀಡಬೇಕು ಎಂದು ಮನವಿ ಮಾಡಲಾಗಿತ್ತು.

ಅದರಂತೆ, ಈಗಾಗಲೇ ನೋಂದಾಯಿಸಿಕೊಂಡ ಎಲ್ಲರಿಗೂ ಮರಳು ತೆಗೆಯಲು ಅನುಮತಿ ನೀಡಬೇಕು ಎಂದು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಮರಳು ದರ ನಿಯಂತ್ರಣಕ್ಕೆ 7 ಸದಸ್ಯರ ಸಮಿತಿ ಕ್ರಮ ತೆಗೆದುಕೊಳ್ಳಬೇಕು ಎಂದೂ ತಿಳಿಸಲಾಗಿತ್ತು. ಈ ಸಂಬಂಧಜ.14ರಂದು ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಅಧಿಕೃತ ಆದೇಶದ ಪ್ರತಿ ಕೂಡ ಬಂದಿತ್ತು. ಆದರೂ ಕ್ರಮ ತೆಗೆದುಕೊಂಡಿಲ್ಲ. 7 ಸಮಿತಿ ಸದಸ್ಯರ ಸಭೆಯೂ ನಡೆದಿಲ್ಲ ಎಂದು ರಘುಪತಿ ಭಟ್‌ ಅಸಮಾಧಾನ ವ್ಯಕ್ತಪಡಿಸಿದರು.

28ರಂದು ಮತ್ತೆ ಮರಳು ಹೋರಾಟ ಆರಂಭಿಸುವುದಾಗಿ ಸೂಚನೆ ನೀಡಿದ್ದರೂ ಅಧಿಕಾರಿಗಳು ತಲೆಕೆಡಿಸಿಕೊಳ್ಳಲಿಲ್ಲ. ಈಗಾಗಲೇ ಜಿಲ್ಲಾಡಳಿತ ಪರವಾನಗಿ ನೀಡಿದ್ದ ಮರಳು ದಕ್ಕೆಗಳೆಲ್ಲ ಖಾಲಿಯಾಗಿವೆ. ಕೇವಲ 45 ಜನರಿಗೆ ಮಾತ್ರ ಪರವಾನಗಿ ನೀಡಿದ್ದರಿಂದ ಮಾರುಕಟ್ಟೆಯಲ್ಲಿ ದರ ಏರಿಕೆಯಾಗಿದೆ. ದಕ್ಕೆಯಲ್ಲಿ ಮೂರು ಯುನಿಟ್‌ಗೆ ₹ 11000 ವಸೂಲಿ ಮಾಡಲಾಗುತ್ತಿದೆ ಎಂದು ಶಾಸಕರು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಅಕ್ರಮ ಮರಳು ಮಾರಾಟ ನಡೆಯುತ್ತಿದೆ. ಲಾರಿ ಬಾಡಿಗೆ ಸೇರಿ ಲೋಡ್‌ಗೆ ₹ 15000 ವಸೂಲಿ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಮರಳು ನೀಡುವ ಜಿಲ್ಲಾಡಳಿತದ ಭರವಸೆ ಸಂಪೂರ್ಣ ಹುಸಿಯಾಗಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.‌

ಮರಳು ತೆಗೆಯುವ ಪ್ರಕ್ರಿಯೆಯಲ್ಲಿ ಲೋಪ ಎಸಗಿದ 79 ಪರವಾನಗಿದಾರರ ಲೈಸೆನ್ಸ್‌ ಅನ್ನು ಜಿಲ್ಲಾಡಳಿತ ರದ್ದು ಮಾಡಿದೆ. ನಿಯಮಗಳ ಉಲ್ಲಂಘನೆ ಮುಂದಿಟ್ಟುಕೊಂಡು ಪರವಾನಗಿ ರದ್ದು ಮಾಡುವುದು ಸರಿಯೇ ಎಂದು ಶಾಸಕರು ಪ್ರಶ್ನಿಸಿದರು.

ಜಿಪಿಎಸ್‌ ವ್ಯವಸ್ಥೆಯಲ್ಲಿ ಲೋಪವಿದೆ ಎಂದು ಸತ್ಯಶೋಧನಾ ಸಮಿತಿಯೇ ವರದಿ ನೀಡಿದೆ. ಆದರೂ, ಜಿಪಿಎಸ್‌ ನಿಯಮಗಳ ಉಲ್ಲಂಘನೆ ಮುಂದಿಟ್ಟುಕೊಂಡು ಪರವಾನಗಿ ರದ್ದು ಮಾಡಲಾಗಿದೆ. ಜಿಲ್ಲಾಡಳಿತದ ಧೋರಣೆ ಸರಿಯಲ್ಲ ಎಂದು ಟೀಕಿಸಿದರು.

ಜ.28ರೊಳಗೆ ಎಲ್ಲ ಗುತ್ತಿಗೆದಾರರಿಗೂ ಮರಳು ತೆಗೆಯಲು ಅವಕಾಶ ನೀಡದಿದ್ದರೆ ಧರಣಿ ಆರಂಭಿಸುವ ನಿರ್ಧಾರವನ್ನು ಈಚೆಗೆ ಬ್ರಹ್ಮಾವರದಲ್ಲಿ ನಡೆದಮರಳು ಹೋರಾಟಗಾರರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅದರಂತೆ ಧರಣಿ ಆರಂಭಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಧರಣಿ ಕೈಬಿಡುವುದಿಲ್ಲ ಎಂದು ಶಾಸಕರು ತಿಳಿಸಿದರು.

ಬಿಲ್ಡರ್ ಅಸೋಸಿಯೇಷನ್‌ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್‌ ಮಾತನಾಡಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ ಹಾಗೂ ಮುಖಂಡರಾದ ಪ್ರದೀಪ್‌ಶೆಟ್ಟಿ, ಗುರುರಾಜ ಶೆಟ್ಟಿ, ಗೋಪಾಲ್‌ ಭಟ್‌, ಪ್ರವೀಣ್‌ ಸುವರ್ಣ, ಕಟಪಾಡಿ ಚಂದ್ರ ಪೂಜಾರಿ, ಶರತ್ ಶೆಟ್ಟಿ, ರಾಜೇಶ್‌ ಕುಲಾಲ್‌, ಅಶ್ವತ್‌, ಉದಯ್‌ಕುಮಾರ್, ಗೀತಾ ಕಡಿಯಾಳಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT