ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವರ್ಕರ್ ಹಿಮಾಲಯ, ಗಾಂಧೀಜಿ ನಂದಿಬೆಟ್ಟ: ಲೇಖಕ ಸಂದೀಪ್ ಬಾಲಕೃಷ್ಣನ್ ಹೋಲಿಕೆ

ಸಾವರ್ಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಲೇಖಕ ಸಂದೀಪ್ ಬಾಲಕೃಷ್ಣನ್ ಹೋಲಿಕೆ
Last Updated 12 ಜನವರಿ 2022, 15:25 IST
ಅಕ್ಷರ ಗಾತ್ರ

ಉಡುಪಿ: ‘ಯಾವುದೇ ವಿಚಾರದಲ್ಲೂ ಗಾಂಧೀಜಿ, ಸಾವರ್ಕರ್ ಸಮನಾಗಿ ನಿಲ್ಲುವುದಿಲ್ಲ. ಸಾವರ್ಕರ್ ಹಿಮಾಲಯ ಶಿಖರವಾದರೆ, ಗಾಂಧೀಜಿ ನಂದಿಬೆಟ್ಟದಂತೆ’ ಎಂದು ಲೇಖಕ ಸಂದೀಪ್ ಬಾಲಕೃಷ್ಣನ್ ಹೇಳಿದರು.

ಬುಧವಾರ ಅಜ್ಜರಕಾಡು ಪುರಭವನದಲ್ಲಿ ಬುಧವಾರ ಸಾವರ್ಕರ್ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಭಾಗವಾಗಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ‘ದೇಶಸೇವೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಗಳನ್ನು ಗಮನಿಸಿದಾಗ ಸಾವರ್ಕರ್‌ ಗಾಂಧೀಜಿ ಅವರಿಗಿಂತ ಮೇಲೆ ನಿಲ್ಲುತ್ತಾರೆ. ಗಾಂಧೀಜಿ ಅವರ ಎಲ್ಲ ಕಾರ್ಯಗಳ ಹಿಂದೆ ವ್ಯವಸ್ಥಿತವಾದ ಸಿಂಡಿಕೇಟ್‌ ಕಾರ್ಯ ನಿರ್ವಹಿಸಿದರೆ, ಸಾವರ್ಕರ್ ಏಕಾಂಗಿಯಾಗಿ ಹೋರಾಟ ನಡೆಸಿದರು’ ಎಂದರು.

‘ಅಂಡಮಾನ್ ಸೆಲ್ಯುಲರ್ ಜೈಲಿನಲ್ಲಿ ಸಾವರ್ಕರ್‌ ಅವರಿಗೆ ಓದಲು ಬರೆಯಲು ಕನಿಷ್ಠ ಪೆನ್ನು ಪುಸ್ತಕಗಳನ್ನು ಕೊಟ್ಟಿರಲಿಲ್ಲ. ಆದರೆ, ಗಾಂಧೀಜಿ ಅವರಿಗೆ ಜೈಲಿನಲ್ಲಿಯೂ ಸ್ಟಾರ್‌ ಹೋಟೆಲ್‌ಗಳಲ್ಲಿ ಸಿಗುವ ಸೌಲಭ್ಯಗಳಿದ್ದವು’ ಎಂದು ವ್ಯಂಗ್ಯವಾಡಿದರು.

‘ಸಾವರ್ಕರ್ ಜೈಲಿನಲ್ಲಿ ಅನುಭವಿಸಿದ ಯಾತನೆಯನ್ನು ಊಹಿಸಲೂ ಸಾಧ್ಯವಿಲ್ಲ. ಹೀಗಿರುವಾಗ, ಕೇವಲ ತುಂಡು ಬಟ್ಟೆಯಿಂದ ಹಾಗೂ ಕೋಲಿನಿಂದ ದೇಶಕ್ಕೆ ಸ್ವಾತಂತ್ಯ್ಯ ಬಂತು ಎಂದರೆ ಯಾರೂ ನಂಬುವ ಮಾತಲ್ಲ’ ಎಂದು ಟೀಕಿಸಿದರು.

ಸಾವರ್ಕರ್ ಜೈಲಿನಿಂದ ಆಚೆಬಂದ ಬಳಿಕವೂ ಸ್ವಂತ ಬಲದಿಂದ ಬೆಳೆದು ಬಂದವರು. ಸಾವರ್ಕರ್‌ಗೆ ಭಾರತ ರತ್ನ ಸಿಗದಿರುವುದು ದೊಡ್ಡ ವಿಷಯವಲ್ಲ. ಅವರಿಗೆ ಭಾರತ ರತ್ನ ಸಿಕ್ಕರೆ ಅಮಾರ್ಥ್ಯಸೇನ್, ಮದರ್ ಥೆರೆಸಾ ಸಾಲಿನಲ್ಲಿ ಅವರೂ ನಿಲ್ಲುತ್ತಾರೆ. ಅದರ ಅಗತ್ಯವಿಲ್ಲ ಎಂದು ಸಂದೀಪ್ ಬಾಲಕೃಷ್ಣನ್ ಹೇಳಿದರು.

‘ಹಿಂದೂ’ ಎಂದು ಧೈರ್ಯವಾಗಿ ಹೇಳಿಕೊಳ್ಳಲು ಭಯಪಡುವಂತಹ ಪರಿಸ್ಥಿತಿಯಲ್ಲಿ ಹಿಂದುತ್ವವನ್ನು ಪ್ರಬಲವಾಗಿ ಪ್ರತಿಪಾದಿಸಿದವರು ವಿನಾಯಕ ದಾಮೋದರ್ ಸಾವರ್ಕರ್ ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.

ಬುಧವಾರ ಅಜ್ಜರಕಾಡು ಪುರಭವನದಲ್ಲಿ ನಡೆದ ಜಯೋಸ್ತುತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಯೇ ಪ್ರಧಾನವಾಗಿದ್ದ ದಿನಗಳಲ್ಲಿ ಸಾವರ್ಕರ್ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಿಂದುತ್ವದ ಕಿಚ್ಚು ಹೊತ್ತಿಸಿದರು. ಹಿಂದುತ್ವ ಕುರಿತಾದ ಗ್ರಂಥಗಳನ್ನು ರಚಿಸಿ ಜಾಗೃತಿ ಮೂಡಿಸಿದರು ಎಂದರು.

ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಮರಳಿ ಸ್ವಧರ್ಮಕ್ಕೆ ಕರೆತರುವ ಕಾರ್ಯ ಮಾಡಿದರು. ಹಿಂದುತ್ವ ಪ್ರತಿಪಾದನೆಯ ಜತೆಗೆ, ಸಮಾಜದಲ್ಲಿದ್ದ ಜಾತಿ ಬೇಧ, ದ್ವೇಷವನ್ನು ತೊಡೆದುಹಾಕಲು ಹಾಗೂ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದರು. ಸ್ವತಃ ಅಂಬೇಡ್ಕರ್ ಅವರೂ ಸಾವರ್ಕರ್ ಅವರ ಕಾರ್ಯವನ್ನು ಗೌರವಿಸಿದ್ದರು ಎಂದು ಸಾತ್ಯಕಿ ಸಾವರ್ಕರ್ ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಕಾಶ್ ಮಲ್ಪೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT