ಸೋಮವಾರ, ಆಗಸ್ಟ್ 19, 2019
24 °C
ಸುಷ್ಮಾ ಸ್ವರಾಜ್ ನಿಧನಕ್ಕೆ ಮಠಾಧೀಶರ, ರಾಜಕೀಯ ನಾಯಕರ ಸಂತಾಪ

ಸರಳ, ಸಜ್ಜನಿಕೆಯ ಧೀಮಂತ ನಾಯಕಿ

Published:
Updated:
Prajavani

ಉಡುಪಿ: ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನಕ್ಕೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ. ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದ್ದಾರೆ.

ಪಲಿಮಾರು ಶ್ರೀಗಳ ಸಂತಾಪ: ಚಿಕ್ಕ ವಯಸ್ಸಿನಿಂದಲೇ ದೇಶ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ದೇಶ ಸೇವೆಗೆ ಜೀವನವನ್ನೇ ಮುಡಿಪಿಟ್ಟಿದ್ದ ಸುಷ್ಮಾ ಸ್ವರಾಜ್, ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿ ಯಶಸ್ವಿಯಾಗಿ ನಿಭಾಯಿಸಿದ್ದರು. ಸರಳ ಸಜ್ಜನಿಕೆಯ ಧೀಮಂತ ನಾಯಕಿಯ ನಿಧನ ದುಃಖ ತಂದಿದೆ. ಮೃತರ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ಸಿಗಲಿ, ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಪರ್ಯಾಯ ಪಲಿಮಾರು ಶ್ರೀಗಳು ತಿಳಿಸಿದ್ದಾರೆ.

ಪುತ್ತಿಗೆ ಶ್ರೀಗಳ ಸಂತಾಪ: ಸೆಪ್ಟೆಂಬರ್ 11, 2009ರಂದು ಪುತ್ತಿಗೆ ಮಠದ 3ನೇ ಪರ್ಯಾಯದ ಅವಧಿಯಲ್ಲಿ ಶ್ರೀಕೃಷ್ಣ ಜಯಂತಿಯ ಮಾಸೋತ್ಸವವನ್ನು ಸುಷ್ಮಾ ಸ್ವರಾಜ್‌ ಉದ್ಘಾಟಿಸಿದ್ದರು. ಅವರಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅವರ ಸಾವು ತೀವ್ರ ದುಃಖ ತಂದಿದೆ ಎಂದು ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.

ದೇಶದ ಹೆಮ್ಮೆಯ ಮಗಳಾಗಿದ್ದ ಸುಷ್ಮಾ ಸ್ವರಾಜ್ ಭಾರತಾಂಬೆಯ ಮಡಿಲು ಸೇರಿದ್ದಾರೆ. 1999ರಲ್ಲಿ ಬ್ರಹ್ಮಾವರದಿಂದ ಸ್ಪರ್ಧಿಸಿದ್ದಾಗ ಸುಷ್ಮಾ ಸ್ವರಾಜ್ ಪ್ರಚಾರ ಮಾಡಲು ಉಡುಪಿ ಜಿಲ್ಲೆಗೆ ಭೇಟಿ ನೀಡಿದ್ದರು. ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ನನ್ನ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಪರವಾಗಿ ಪ್ರಚಾರ ಮಾಡಿದ್ದರು.

ಭಾರತೀಯ ಸಂಸ್ಕೃತಿಯ ಪ್ರತಿಬಿಂಬವಾಗಿ ಹಣೆಯಲ್ಲಿ ಕಾಸಗಲ ತಿಲಕವನ್ನಿಟ್ಟುಕೊಂಡು ಕನ್ನಡದಲ್ಲಿ ಮಾತನಾಡಿದ್ದರು. ಇಷ್ಟು ಬೇಗ ಸುಷ್ಮಾ ಸ್ವರಾಜ್ ಎಲ್ಲರನ್ನೂ ಅಗಲಿರುವುದು ನೋವು ತಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ನುಡಿನಮನ ಸಲ್ಲಿಸಿದ್ದಾರೆ.

Post Comments (+)