ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದ ಹೊಟ್ಟೆಗಳಿಗೆ ‘ಸಂತೃಪ್ತಿ’ ಊಟ

ಮಣಿಪಾಲದ ಲಯನ್ಸ್‌ ಕ್ಲಬ್‌, ಸಿಂಡಿಕೇಟ್‌ ಬ್ಯಾಂಕ್‌, ಟ್ಯಾಪ್ಮೆಯ ಸಮಾಜಮುಖಿ ಸೇವೆ
Last Updated 24 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಉಡುಪಿ: ಹಸಿದವರಿಗೆ ಊಟ ಹಾಕುವ ಸಮಾಜಮುಖಿ ಕಾರ್ಯಕ್ಕೆ ಮಣಿಪಾಲದ ಲಯನ್ಸ್‌ ಕ್ಲಬ್‌, ಸಿಂಡಿಕೇಟ್‌ ಬ್ಯಾಂಕ್‌, ಟ್ಯಾಪ್ಮೆ ಸಂಸ್ಥೆ ಕೈಜೋಡಿಸಿವೆ. ಹೋಟೆಲ್‌ಗಳಲ್ಲಿ ಉಳಿಯುವ ಆಹಾರ ವ್ಯರ್ಥವಾಗದೆ ಬಡವರ ಹಸಿವು ತಣಿಸಬೇಕು ಎಂಬ ಉದ್ದೇಶದಿಂದ ಮಣಿಪಾಲದ ಟೈಗರ್ ಸರ್ಕಲ್‌ ಬಳಿಯ ಆಟೋಸ್ಟಾಂಡ್‌ನಲ್ಲಿ ಸಮುದಾಯ ಶೀತಲೀಕರಣ (ಕಮ್ಯುನಿಟಿ ಫ್ರಿಜ್‌) ಘಟಕವನ್ನು ಸ್ಥಾಪಿಸಲಾಗಿದೆ.‌

ಸಂತೃಪ್ತಿ ಹೆಸರಿನ ಈ ಘಟಕದಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಉಚಿತವಾಗಿ ದೊರೆಯಲಿದೆ. ಬಡವರು, ಮಣಿಪಾಲಕ್ಕೆ ಬರುವ ಬಡ ರೋಗಿಗಳ ಸಂಬಂಧಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎನ್ನುತ್ತಾರೆ ಯೋಜನೆಯ ಉಸ್ತುವಾರಿ ವಹಿಸಿಕೊಂಡಿರುವ ಮಣಿಪಾಲದ ಲಯನ್ಸ್ ಕ್ಲಬ್ ಕಾರ್ಯದರ್ಶಿ ಮೈತ್ರಿ ಚಂದ್ರಶೇಖರ್‌.

ಯಾರೂ ಹಸಿವಿನಿಂದ ನರಳಬಾರದು. ಆಹಾರ ಪದಾರ್ಥಗಳು ವ್ಯರ್ಥವಾಗದೆ ಹಸಿದವರ ಹೊಟ್ಟೆಸೇರಬೇಕು ಎಂಬ ಸದುದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಈ ಕಾರ್ಯಕ್ಕೆ ಸಂಘ–ಸಂಸ್ಥೆಗಳಿಂದ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ ಎನ್ನುತ್ತಾರೆ ಮೈತ್ರಿ.

ಯೋಜನೆಯ ಪ್ರಸ್ತಾವ ಮುಂದಿಟ್ಟಾಗ ಸಿಂಡಿಕೇಟ್ ಬ್ಯಾಂಕ್‌ ಶೀಥಲೀಕರಣ ಘಟಕ ನೀಡಲು ಮುಂದೆಬಂತು. ಮಣಿಪಾಲದ ಆಟೋಸ್ಟಾಂಡ್‌ ಚಾಲಕರು ಘಟಕದ ಉಸ್ತುವಾರಿ ನೋಡಿಕೊಳ್ಳುವುದಾಗಿ ಹೇಳಿದರು. ಟ್ಯಾಪ್ಮಿ ಸೋಷಿಯಲ್ ಎಂಡೆವರ್ ಸಂಸ್ಥೆಯ ವಿದ್ಯಾರ್ಥಿಗಳು ಸಹಾಯ ಹಸ್ತ ಚಾಚಿದರು. ನಗರಸಭೆ ಸ್ವಚ್ಛತೆಯ ಹೊಣೆ ಹೊತ್ತುಕೊಂಡಿತು ಎಂದು ಯೋಜನೆ ಸಾಕಾರಗೊಂಡ ಬಗೆಯನ್ನು ವಿವರಿಸಿದರು.

ಸಧ್ಯ ಇದನ್ನು ಪೈಲಟ್ ಯೋಜನೆಯಾಗಿ ಜಾರಿಗೊಳಿಸಲಾಗುತ್ತಿದ್ದು ಮುಂದೆ ದೊಡ್ಡ ಮಟ್ಟದಲ್ಲಿ ಅನುಷ್ಠಾನಗೊಳಿಸಲಾಗುವುದು. ಈಗ ಮೂರು ಹೋಟೆಲ್‌ಗಳ ಸಹಭಾಗಿತ್ವ ಮಾತ್ರ ಪಡೆಯಲಾಗಿದ್ದು, ಕಂಟೇನರ್‌ಗಳನ್ನು ಸರಬರಾಜು ಮಾಡಲಾಗಿದೆ. ಬೆಳಿಗ್ಗೆ 10ರ ನಂತರ ಉಳಿಯುವ ತಿಂಡಿಯನ್ನು ಪಾಕೆಟ್‌ಗಳಾಗಿ ವಿಂಗಡಿಸಿ ನೀಡಲಿದ್ದಾರೆ. ಅದನ್ನು ಫುಡ್‌ಝೋನ್‌ ಕಂಪೆನಿಯ ಪ್ರತಿನಿಧಿಗಳು ಸಂಗ್ರಹಿಸಿ ಫ್ರೀಜ್‌ನಲ್ಲಿ ತಂದು ಇಡಲಿದ್ದಾರೆ. ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಉಳಿಯುವ ಊಟವನ್ನೂ ಇದೇ ಮಾದರಿಯಲ್ಲಿ ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಬೆಳಿಗ್ಗೆ 10 ಗಂಟೆಯ ನಂತರ ತಿಂಡಿ, ಮಧ್ಯಾಹ್ನ 2 ಹಾಗೂ ರಾತ್ರಿ 8ರ ನಂತರ ಊಟ ದೊರೆಯಲಿದೆ. ಯಾರೂ ಬೇಕಾದರೂ ಬಂದು ಊಟ ತೆಗೆದುಕೊಂಡು ಹೋಗಬಹುದು. ಫ್ರೀಜರ್ ಇಡಲು ಜಾಗದ ವ್ಯವಸ್ಥೆ ಮಾಡಲಾಗಿದೆ. 300 ಲೀಟರ್ ಸಾಮರ್ಥ್ಯದ ಫ್ರೀಜರ್‌ನ ನಿರ್ವಹಣಾ ವೆಚ್ಚವನ್ನು ಲಯನ್ಸ್ ಕ್ಲಬ್ ಭರಿಸಲಿದೆ ಎಂದು ಮಾಹಿತಿ ನೀಡಿದರು.

ಮಣಿಪಾಲಕ್ಕೆ ಪ್ರತಿನಿತ್ಯ ನೂರಾರು ರೋಗಿಗಳು ರಾಜ್ಯದ ಮೂಲೆಮೂಲೆಗಳಿಂದ ಬರುತ್ತಾರೆ. ಅವರಲ್ಲಿ ಹೆಚ್ಚಿನವರು ಬಡವರು. ವಾರಗಟ್ಟಲೆ ಹಣತೆತ್ತು ಹೋಟೆಲ್‌ಗಳಲ್ಲಿ ಊಟ ಮಾಡುವ ಶಕ್ತಿ ಇರುವುದಿಲ್ಲ. ಜತೆಗೆ, ಬಿಸಿಲಿನಲ್ಲಿ ಹೋಟೆಲ್‌ಗಳನ್ನು ಹುಡುಕಿಕೊಂಡು ಹೋಗುವುದು ಕಷ್ಟವಾಗುತ್ತದೆ. ಅಂಥವರಿಗೆ ಈ ವ್ಯವಸ್ಥೆ ನೆರವಾಗಲಿದೆ ಎನ್ನುತ್ತಾರೆ ಮೈತ್ರಿ.

ಸಮುದಾಯ ಶೀಥಲೀಕರಣ ಘಟಕ ಯೋಜನೆ ಯಶಸ್ವಿಯಾದರೆ, ಹೆಚ್ಚಿನ ಜನರಿಗೆ ವಿಸ್ತರಿಸುವ ಉದ್ದೇಶವಿದೆ. ಮುಂದೆ ಸಮಾರಂಭಗಳಲ್ಲಿ ಉಳಿಯುವ ಆಹಾರವನ್ನು ಸಂಗ್ರಹಿಸಿ, ಬಡವರಿಗೆ ತಲುಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಅಕ್ಟೋಬರ್ 27ರಂದುಚಾಲನೆ

ಅಕ್ಟೋಬರ್ 27ರಂದು ಬೆಳಿಗ್ಗೆ 10ಕ್ಕೆ ಮಣಿಪಾಲದ ಟೈಗರ್ ಸರ್ಕಲ್‌ ಬಳಿಯ ಆಟೋ ಸ್ಟಾಂಡ್‌ನಲ್ಲಿ ಸಮದಾಯ ಶೀಥಲೀಕರಣ ಘಟಕಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿದ್ದಾರೆ. ಲಯನ್ಸ್ ಗವರ್ನರ್ ತಲ್ಲೂರು ಶಿವರಾಮ ಶೆಟ್ಟಿ, ಸಿಂಡಿಕೇಟ್ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಭಾಸ್ಕರ್ ಹಂದೆ ಭಾಗವಹಿಸಲಿದ್ದಾರೆ. ಲಯನ್ಸ್‌ ಕ್ಲಬ್‌ ಅಧ್ಯಕ್ಷೆ ಶೃತಿ ಶೆಣೈ, ಕ್ಲಬ್‌ನ ಮಾಜಿ ಅಧ್ಯಕ್ಷೆ ಸರಿತಾ ಸಂತೋಷ್, ಟ್ಯಾಪ್ಮಿಯ ವಿಕಾಸ್, ರಿತು ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT