ಮಂಗಳವಾರ, ನವೆಂಬರ್ 19, 2019
23 °C
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಸ್ಕ್ವಾಷ್‌

ಪಂಜಾಬ್, ಪುಣೆಯ ಸಾವಿತ್ರಿಬಾಯಿ ಫುಲೆ ವಿವಿ ಮುನ್ನಡೆ

Published:
Updated:
Prajavani

ಉಡುಪಿ: ಮಣಿಪಾಲದ ಮರೇನಾ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ಆರಂಭವಾದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಟ್ಟದ ಮಹಿಳೆಯರ ಸ್ಕ್ವಾಷ್‌ ಟೂರ್ನಿಯಲ್ಲಿ ಪಂಜಾಬ್‌, ಚಂಡಿಘಡ ಹಾಗೂ ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯಗಳು ಉತ್ತಮ ಪ್ರದರ್ಶನ ನೀಡಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿವೆ.

ಟೂರ್ನಿಯಲ್ಲಿ ಉತ್ತಮ ಆಟವಾಡಿದ ಪಂಜಾಬ್‌ ವಿವಿ ಆಟಗಾರರು 3–2 ಗೇಮ್‌ಗಳಿಂದ ಚೆನ್ನೈನ ಅಣ್ಣ ವಿವಿ ಆಟಗಾರರನ್ನು ಮಣಿಸಿದರು. ರಾಜಸ್ತಾನ ವಿವಿ ವಿರುದ್ಧ ಸಾವಿತ್ರಿಬಾಯಿ ಫುಲೆ ವಿವಿ 3–1 ಗೇಮ್‌ಗಳಿಂದ ಪಂದ್ಯ ಗೆದ್ದುಕೊಂಡಿತು.

ಅಲಹಾಬಾದ್ ವಿವಿ ವಿರುದ್ಧ ಕೇರಳ ವಿವಿ ವಾಕ್‌ ಓವರ್ ಪಡೆದರೆ, ಪಟಿಯಾಲದ ಪಂಜಾಬಿ ವಿವಿಯು ಕೋಟಾ ವಿವಿ ವಿರುದ್ಧ ಹಾಗೂ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ವಿರುದ್ಧ ಉದಯಪುರದ ಮೋಹನ್‌ಲಾಲ್‌ ಸುಕಾಡಿಯಾ ವಿವಿ ವಾಕ್‌ ಓವರ್ ಪಡೆದು ಮುಂದಿನ ಸುತ್ತು ಪ್ರವೇಶಿಸಿತು.

ಕಳೆದ ವರ್ಷ ಸೆಮಿಫೈನಲ್ ಹಂತ ಪ್ರವೇಶಿಸಿದ್ದ ಮದ್ರಾಸ್ ವಿವಿ, ಮಣಿಪಾಲದ ಮಾಹೆ, ದೆಹಲಿ ವಿವಿ ಹಾಗೂ ಪಂಡಿತ್ ರವಿಶಂಕರ್ ಶುಕ್ಲ ವಿವಿ ಕ್ವಾಟರ್‌ ಫೈನಲ್‌ನಲ್ಲಿ ಸೆಣಸಲಿವೆ. ಅ.18ರವರೆಗೂ ಪಂದ್ಯಗಳು ನಡೆಯಲಿವೆ.

ಬುಧವಾರ ಬೆಳಿಗ್ಗೆ ಸ್ಕ್ವಾಷ್ ಟೂರ್ನಿಯನ್ನು ಮಾಹೆ ಕುಲಪತಿ ಡಾ.ಎಚ್‌.ಎಸ್‌.ಬಲ್ಲಾಳ್ ಉದ್ಘಾಟಿಸಿದರು. ಏಷ್ಯನ್‌ ಜ್ಯೂನಿಯರ್ ಚಾಂಪಿಯನ್‌ ರವಿ ದೀಕ್ಷಿತ್‌ ಉಪಸ್ಥಿತರಿದ್ದರು. ಮಾಹೆ ಸಹ ಉಪ ಕುಲಪತಿ ಡಾ.ಪೂರ್ಣಿಮಾ ಬಾಳಿಗ, ಕ್ರೀಡಾ ಕಾರ್ಯದರ್ಶಿ ಡಾ.ವಿನೋದ್ ನಾಯಕ್‌, ಕ್ರೀಡಾ ವಿಭಾಗದ ಮುಖ್ಯಸ್ಥ ಡಾ.ಫಿಡ್ಡಿ ಡೇವಿಸ್‌, ನಿರ್ದೇಶಕ ಡಾ.ಶ್ರೀಧರ ಇದ್ದರು.

ಪ್ರತಿಕ್ರಿಯಿಸಿ (+)