ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಸಿ, ಎಸ್‌ಟಿ: ಬಜೆಟ್‌ನಲ್ಲಿ ಶೇ 24.10 ಅನುದಾನ: ಸಚಿವ ಕೋಟ ಶ್ರೀನಿವಾಸ ಪೂಜಾರ

ಪರಿಶಿಷ್ಟ ಜಾತಿ, ಪಂಗಡದವರಿಗೆ ಸರ್ಕಾರದ ಯೋಜನೆಗಳನ್ನು ತಲಪಿಸಿ
Last Updated 31 ಮೇ 2022, 4:25 IST
ಅಕ್ಷರ ಗಾತ್ರ

ಉಡುಪಿ: ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಕಲ್ಯಾಣ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಫಲಾನುಭವಿಗಳಿಗೆ ಕಾಲಾವಧಿಯೊಳಗೆ ತಲುಪಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌,ಸಿ,ಎಸ್‌,ಪಿ ಹಾಗೂ ಟಿಎಸ್‌ಪಿ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರ ಪ್ರಸ್ತುತ ಸಾಲಿನ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಜನಸಂಖ್ಯೆ ಆಧಾರದಲ್ಲಿ ಶೇ 24.10ರಷ್ಟು ಅನುದಾನ ಮೀಸಲಿಟ್ಟಿದೆ. ಎಸ್‌ಸಿ, ಎಸ್‌ಟಿ ಕಾಲೋನಿಗಳಿಗೆ ಮೂಲಸೌಕರ್ಯ ಒದಗಿಸುವುದರ ಜೊತೆಗೆ ಹಾಗೂ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿ ಇಲ್ಲದ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಪಟ್ಟಿ ಸಿದ್ಧಪಡಿಸಿ ಅದಕ್ಕನುಗುಣವಾಗಿ ಲಭ್ಯವಿರುವ ಅನುದಾನ ಬಳಸಬೇಕು. ರಾಜೀವ್ ಗಾಂಧಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಕೆಲವು ಷರತ್ತುಗಳ ಕಾರಣದಿಂದ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆಯಿಂದಲೇ ನೇರವಾಗಿ ಗೃಹ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸಚಿವ ಕೋಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 368 ಪೌರ ಕಾರ್ಮಿಕರ ಹುದ್ದೆಗಳಿದ್ದು 130 ಖಾಯಂ ಹುದ್ದೆ, 164 ಗುತ್ತಿಗೆ ಹಾಗೂ ಹೊರ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಹಾಗೂ ಗುತ್ತಿಗೆಯವರನ್ನು ಖಾಯಂಗೊಳಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಬೇಕು ಎಂದು ಸೂಚನೆ ನೀಡಿದರು.

ಕೃಷಿ ಹಾಗೂ ತೋಟಗಾರಿಕೆ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರ ಸಂಖ್ಯೆಯನ್ನು ಕ್ರೋಢಿಕರಿಸಿ ಸಣ್ಣ ಹಾಗೂ ಅತಿ ಸಣ್ಣ ರೈತರ ಮಾಹಿತಿ ಪಡೆಯಬೇಕು. ಅವರ ಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಸರ್ಕಾರದಿಂದ ಪಡೆದು ಫಲಾನುಭವಿಗಳಿಗೆ ಆರ್ಥಿಕ ಸೌಲಭ್ಯ ಕಲ್ಪಿಸಬೇಕು ಎಂದರು.

ಎಸ್‌ಸಿ ಎಸ್‌ಟಿ ಸಮುದಾಯದವರಿಗೆ ಸಹಕಾರ ಸಂಘಗಳನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟು, ಹೆಚ್ಚು ಜನರು ಸಂಘದ ಸದಸ್ಯರಾಗಲು ಷೇರು ಬಂಡವಾಳ ಒದಗಿಸಬೇಕು. ಪ್ರತಿ ಸದಸ್ಯರು ಯಶಸ್ವಿನಿ ಯೋಜನೆಯ ವ್ಯಾಪ್ತಿಯಲ್ಲಿ ಬರುವ ಹಾಗೆ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದರು.

ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸಬರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬಜೆಟ್‌ನಲ್ಲಿ ಆಳ ಸಮುದ್ರ ಮೀನುಗಾರಿಕೆ ಹಾಗೂ 100 ಹೊಸ ಬೋಟ್‌ಗಳ ಖರೀದಿಸಲು ನೆರವು ನೀಡಲಾಗುತ್ತಿದೆ. ಮೀನು ಮಾರಾಟ ಮಾಡಲು ಮಹಿಳೆಯರಿಗೆ 100 ದ್ವಿಚಕ್ರ ವಾಹನ ಖರೀದಿಸಲು ಆರ್ಥಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್‌ ರೆಡ್ಡಿ, ರಾಜ್ಯ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ ನಿರ್ದೇಶಕಿ ಊರ್ಮಿಳಾ, ಡಾ. ಬಾಬು ಜಗಜೀವನ್ ರಾಂ ಸಂಶೋಧನಾ ಸಂಸ್ಥೆಯ ನಿರ್ದೇಶಕ ಅರುಣ್ ಫುಟಾರ್ಡೋ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT