ಮಂಗಳವಾರ, ಸೆಪ್ಟೆಂಬರ್ 28, 2021
21 °C
ರಾಷ್ಟ್ರಮಟ್ಟ ಮಟ್ಟಕ್ಕೆ ಆರ್ಡಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಆಯ್ಕೆ

‘ಗ್ಯಾಸ್ ಸೇವಿಂಗ್ ಕಿಟ್’ಗೆ ರಾಷ್ಟ್ರ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿದ್ದಾಪುರ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸಿದ ರಾಷ್ಟ್ರಮಟ್ಟದ ‘ಸಿಎಸ್ಐಆರ್ ಇನ್ನೊ ವೇಷನ್ ಅವಾರ್ಡ್ ಫಾರ್ ಸ್ಕೂಲ್ ಚಿಲ್ಡ್ರನ್- 2021’ ಸ್ಪರ್ಧೆಯಲ್ಲಿ ಅಲ್ಬಾಡಿ - ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಇಬ್ಬರು ವಿದ್ಯಾರ್ಥಿನಿಯರಿಗೆ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.‌

ಅಲ್ಬಾಡಿ ಆರ್ಡಿಯ 10 ನೇ ತರಗತಿ ವಿದ್ಯಾರ್ಥಿನಿಯರಾದ ಅನುಷಾ ಹಾಗೂ ರಕ್ಷಿತಾ ನಾಯ್ಕ ಮಂಡಿಸಿದ ‘ಗ್ಯಾಸ್ ಸೇವಿಂಗ್ ಕಿಟ್’ (ಜಿಎಸ್ ಕೆ) ಅವಿಷ್ಕಾರದ ಸಾಧನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿದೆ.

ದೇಶದಲ್ಲಿ ಆಯ್ಕೆಯಾದ  14 ಶಾಲೆಗಳಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆ ಅಲ್ಬಾಡಿ ಆರ್ಡಿ ಕೂಡ ಒಂದು. ವಿಜೇತ ಶಾಲೆಗಳಲ್ಲಿ ದೇಶದಲ್ಲಿ ಸರ್ಕಾರಿ ಪ್ರೌಢಶಾಲೆ ಇದಾಗಿದೆ. ರಾಜ್ಯದಿಂದ ಆಯ್ಕೆ ಆಗಿರುವ ಏಕೈಕ ಶಾಲೆ ಹೆಗ್ಗಳಿಕೆ ಇದೆ.

ಹಳ್ಳಿಯ ಮಕ್ಕಳು ದೆಹಲಿಗೆ: ದೆಹಲಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಹದಿನಾಲ್ಕು ಶಾಲೆಯ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿ ನೀಡಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಸೆ. 26 ರಂದು ನಡೆಯಬೇಕಾಗಿದ್ದ ಈ ಕಾರ್ಯಕ್ರಮದ ದಿನಾಂಕ ತಿಳಿಸಲಾಗುವುದು ಎಂದು ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಶಾಲೆ ವಿಜ್ಞಾನ ಶಿಕ್ಷಕಿ ವೈಶಾಲಿ ರಾವ್ ಅವರ ಮಾರ್ಗದರ್ಶನದಲ್ಲಿ ಜಿಎಸ್‌ಕೆ ಕಿಟ್‌ ಸಿದ್ಧಪಡಿಸಲಾಗಿತ್ತು. ಜಿ.ಎಸ್.ಕೆ. ಕಿಟ್‌ ವಿನ್ಯಾಸ ಹಾಗೂ ವೆಲ್ಡಿಂಗ್ ಕಾರ್ಯವನ್ನು ಸಮಾಜ ವಿಜ್ಞಾನ ಶಿಕ್ಷಕ ಸುರೇಶ್ ಮರಕಾಲ ನಿರ್ವಹಿಸಿದ್ದರು.

₹ 600 ವೆಚ್ಚದಲ್ಲಿ ತಯಾರಿಸಲಾದ ಜಿಎಸ್‌ಕೆ ಉಪಕರಣವನ್ನು ಗ್ಯಾಸ್ ಸ್ಟೌವ್‌ಗೆ ಅಳವಡಿಸಿದರೆ ಒಲೆಯ ಮೇಲೆ ಅಡುಗೆ ಆಗುತ್ತಿರುವಾಗಲೆ ಕುಟುಂಬಕ್ಕೆ ಬೇಕಾಗುವಷ್ಟು ಬಿಸಿ ನೀರು ಕಾಯಿಸಿಕೊಳ್ಳಬಹುದು. ದೇಶದಾದ್ಯಂತ ಎಲ್ಲ ಮನೆ, ಹೋಟೆಲ್‌ಗಳಲ್ಲಿ ಬಳಸಿದರೆ ದಿನಕ್ಕೆ ಲಕ್ಷಗಟ್ಟಲೆ ಟನ್ ಎಲ್‌ಪಿಜಿ ಉಳಿತಾಯವಾಗುತ್ತದೆ ಎನ್ನುವ ಅಭಿಪ್ರಾಯ ವಿದ್ಯಾರ್ಥಿನಿಯರದು.

ಈ ಕಿಟ್‌ಅನ್ನು ಇನ್ನಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಹಾಗೂ ಇದಕ್ಕೆ ಪೇಟೆಂಟ್ ಪಡೆಯಲು ಈಗಾಗಲೇ ತಯಾರಿ ನಡೆಸಲಾಗಿದೆ ಎಂದು ಶಿಕ್ಷಕರು ತಿಳಿಸಿದರು.

ಟ್ರಸ್ಟ್‌ ನೆರವು

3ನೇ ಬಾರಿ ಶಾಲೆ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುತ್ತಿರುವುದಕ್ಕೆ, ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ವೃಂದಕ್ಕೆ ಚಾರ್ಮಕ್ಕಿ ನಾರಾಯಣ ಶೆಟ್ಟಿ ಟ್ರಸ್ಟ್ ಪ್ರಶಂಸೆ ವ್ಯಕ್ತೊಡಿಸಿದೆ. ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಲಕ್ಷಾಂತರ ರೂಪಾಯಿಗಳ ಲೇಖನ ಸಾಮಗ್ರಿಗಳು, ನೋಟ್ ಪುಸ್ತಕಗಳು, ಅಟ್ಲಾಸ್, ಮೂರೂ ಭಾಷೆಗಳ ಬೇರೆಬೇರೆ ಶಬ್ದಕೋಶ, ಸ್ಕೂಲ್ ಬ್ಯಾಗ್, ಐ.ಡಿ. ಕಾರ್ಡ್, ಟ್ರ್ಯಾಕ್ ಸೂಟ್ ನೀಡಿದ್ದು ಕೆಲವೇ ದಿನಗಳಲ್ಲಿ ವಿತರಣೆ ನಡೆಯಲಿದೆ. ಗ್ರಾಮೀಣ ಪ್ರದೇಶದಿಂದ ಬರುವ ಶಾಲೆಯ ಮಕ್ಕಳಿಗಾಗಿ ಹೊಸ ಶಾಲಾ ಬಸ್ ವ್ಯವಸ್ಥೆ ಮಾಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು