ಶನಿವಾರ, ಡಿಸೆಂಬರ್ 7, 2019
21 °C
ಎಂಜಿಎಂ ಕಾಲೇಜಿನಲ್ಲಿ ಇ- ಸ್ಕೂಲ್‌ನಿಂದ ಹಮ್ಮಿಕೊಂಡಿದ್ದ ಬ್ರೈನ್ ಕ್ವೆಸ್ಟ್

ಉಡುಪಿ | ವೈಜ್ಞಾನಿಕ ಕುತೂಹಲ ತಣಿಸಿದ ವಿಜ್ಞಾನ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಮಣ್ಣಿನಲ್ಲಿರುವ ತೇವಾಂಶ ಪತ್ತೆ ಹಚ್ಚುವಿಕೆ, ವೈಜ್ಞಾನಿಕ ಕಸ ವಿಲೇವಾರಿ, ನೀರಿನ ಪರಿಶುದ್ಧತೆ ಹಳೆಯುವುದು ಹೀಗೆ ಮಿದುಳಿಗೆ ಕೆಲಸ ಕೊಡುವ ಪ್ರಯೋಗಗಳನ್ನು ವಿದ್ಯಾರ್ಥಿಗಳು ಮಾಡಿ ಸಂಭ್ರಮಿಸಿದರು.

ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಇ- ಸ್ಕೂಲ್‌ನಿಂದ ಹಮ್ಮಿಕೊಂಡಿದ್ದ ಬ್ರೈನ್ ಕ್ವೆಸ್ಟ್- 2019 ವಿಜ್ಞಾನ ಮೇಳದಲ್ಲಿ ಕಂಡುಬಂದ ದೃಶ್ಯಗಳಿವು.

ಮೇಳದಲ್ಲಿ ಜಿಲ್ಲೆಯ ಆರು ಪ್ರೌಢಶಾಲೆಗಳ 61 ವಿದ್ಯಾರ್ಥಿಗಳು ಭಾಗವಹಿಸಿ ಹಲವು ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನದ ಕುತೂಹಲಕಾರಿ ವಿಚಾರಗಳನ್ನು ಪ್ರದರ್ಶನ ನೋಡಲು ಬಂದವರಿಗೆ ವಿವರಿಸಿದರು.

ಮಹಾನಗರಗಳ ಬಹುದೊಡ್ಡ ಸಮಸ್ಯೆಯಾದ ತ್ಯಾಜ್ಯವಿಲೇವಾರಿಗೆ ಮುಕ್ತಿ ನೀಡಲು ಪೆರಂಪಳ್ಳಿಯ ಟ್ರಿನಿಟಿ ಇಂಗ್ಲೀಷ್‌ ಶಾಲೆಯ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಮಾಡೆಲ್‌ ಗಮನ ಸೆಳೆಯಿತು. ಮನೆಯಲ್ಲಿ ಸೃಷ್ಠಿಯಾಗುವ ಹಸಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ವಿಧಾನವನ್ನು ವಿದ್ಯಾರ್ಥಿಗಳು ವಿವರಿಸಿದರು. ರಾನಿಯಾ, ಅಧಿಯಾ, ಹರ್ಷ ತಂಡದಲ್ಲಿದ್ದರು.

ಹಿರಿಯಡ್ಕದ ಗ್ರೀನ್‌ಪಾರ್ಕ್ ಶಾಲೆ ವಿದ್ಯಾರ್ಥಿಗಳು, ರಾಸಾಯನಿಕದಿಂದ ನೀರು ಬಣ್ಣವನ್ನು ಬದಲಾಯಿಸುವ ಕುತೂಹಲಕಾರಿ ವಿಚಾರವನ್ನು ತಿಳಿಸಿದರು.

ಉಡುಪಿಯ ಅನಂತೇಶ್ವರ ಇಂಗ್ಲೀಷ್ ಮಾಧ್ಯಮದ ಶಾಲೆಯ ಅಭಿಷೇಕ್, ಅಕ್ಷಯ್, ಸುಮೇದ್ ತಂಡ ಮಣ್ಣಿನಲ್ಲಿರುವ ತೇವಾಂಶದ ಪರೀಕ್ಷೆ ಮಾಡುವ ಸಾಧನವನ್ನು ಪರಿಚಯಿಸಿದರು.  ಸೆನ್ಸಾರ್ ಮೂಲಕ ಕಂಪ್ಯೂಟರ್‌ನಲ್ಲಿ ಆಳವಡಿಸಲಾದ ಸಾಪ್ಟ್‌ವೇರ್‌ ಮಣ್ಣಿನಲ್ಲಿರುವ ತೇವಾಂಶ ಪ್ರಮಾಣವನ್ನು ಪತ್ತೆ ಮಾಡಿತು.

ಕಡಿಯಾಳಿಯಲ್ಲಿರುವ ಯು.ಕಮಲಾ ಬಾಯಿ ಸ್ಕೂಲಿನ ವಿದ್ಯಾರ್ಥಿಗಳಾದ ಸಚಿನ್ ಹಾಗೂ ಸಂತೋಷ್ ಶುದ್ಧ ಕುಡಿಯುವ ನೀರಿನ ಮಹತ್ವವನ್ನು ತಿಳಿಸಿದರು. ಪರಿಸರದಲ್ಲಿರುವ ನೀರು ಕುಡಿಯಲು ಯೋಗ್ಯವೇ, ಯಾವ ನೀರನ್ನು ಕುಡಿಯಬೇಕು, ಶುದ್ಧ ನೀರಿನಲ್ಲಿರುವ ಅಂಶಗಳು ಯಾವುವು ಎಂಬುದನ್ನು ಪರೀಕ್ಷೆಯ ಮೂಲಕ ತಿಳಿಸಿದರು. ಇದೇ ಶಾಲೆಯ ವಿನಾಯಕ ಶೇಟ್, ಪ್ರಶಾಂತ್ ಹಸಿರು ಮನೆ ಪರಿಣಾಮದಿಂದ ಜಾಗತಿಕ ತಾಪಮಾನ ಏರಿಕೆ ಕುರಿತು ಮಾಹಿತಿ ನೀಡಿದರು.

ವಿಜ್ಞಾನ ವಸ್ತುಪ್ರದರ್ಶನ ಇ- ಸ್ಕೂಲ್‌ನ ನಿರ್ದೇಶಕಿ ಪೂರ್ಣಿಮಾ ಕಾಮತ್ ನೇತೃತ್ವದಲ್ಲಿ ನಡೆಯಿತು. ಮಣಿಪಾಲದ ಎಂಐಟಿಯ ಪ್ರೊ.ನಾರಾಯಣ ಶೆಣೈ ಹಾಗೂ ತಂತ್ರಜ್ಞರಾದ ಥೋಮಸ್ ತೀರ್ಪುಗಾರರಾಗಿದ್ದರು. ಜತೆಗೆ ಪ್ರಯೋಗದಲ್ಲಿರುವ ದೋಷಗಳನ್ನು ತಿಳಿಸಿ, ಸರಿಪಡಿಸುವ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಪ್ರತಿಕ್ರಿಯಿಸಿ (+)