ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುರ್ವೇದ ಶಿಕ್ಷಣ: ಸಾಂದರ್ಭಿಕ ಬದಲಾವಣೆ ಅಗತ್ಯ

ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ನಡೆದ ‘ತ್ವಿಷ’ ರಾಷ್ಟ್ರೀಯ ಸಮ್ಮೇಳನದಲ್ಲಿ ಜಯಂತ್ ದೇವು ಪುಜಾರಿ
Last Updated 8 ಏಪ್ರಿಲ್ 2022, 14:16 IST
ಅಕ್ಷರ ಗಾತ್ರ

ಉಡುಪಿ: ಆಯುರ್ವೇದ ಶಿಕ್ಷಣದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೋಧಿಸಬೇಕಾದ ವಿಷಯಗಳ ಬಗ್ಗೆ ಪ್ರಾಧ್ಯಾಪಕರು ಸಲಹೆ ಹಾಗೂ ಪ್ರತಿಕ್ರಿಯೆಗಳನ್ನು ಸಮಿತಿಗೆ ನೀಡಿದರೆ ಅದಕ್ಕನುಗುಣವಾಗಿ ಸಿಲಿಬಸ್‌ ತಯಾರಿಸಬಹುದು ಎಂದು ನ್ಯಾಷನಲ್ ಕಮಿಷನ್‌ ಫಾರ್ ಇಂಡಿಯನ್‌ ಸಿಸ್ಟಂ ಆಫ್‌ ಮೆಡಿಸಿನ್‌ ಅಧ್ಯಕ್ಷ ಜಯಂತ್ ದೇವು ಪುಜಾರಿ ಹೇಳಿದರು.

ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಸ್ಮರಣಾರ್ಥ ಕುತ್ಪಾಡಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಅಗದತಂತ್ರ ಸ್ನಾತಕೋತ್ತರ ವಿಭಾಗದಿಂದ ರಾಷ್ಟ್ರೀಯ ಮಟ್ಟದ ಸಮ್ಮೇಳನ ‘ತ್ವಿಷ-2022 ಉದ್ಘಾಟಿಸಿ ಮಾತನಾಡಿದ ಅವರು, ಆಯುರ್ವೇದ ವೈದ್ಯಕೀಯ ಶಿಕ್ಷಣ ಪದ್ಧತಿಯಲ್ಲಿ ಸಾಂದರ್ಭಿಕ ಬದಲಾವಣೆ ಅಗತ್ಯವಿದೆ ಎಂದರು.

ಆಯುರ್ವೇದ ಕ್ಷೇತ್ರದಲ್ಲಿನ ಸಂಶೋಧನೆಯಿಂದಾಗಿ ಜಗತ್ತಿನೆಲ್ಲೆಡೆ ಆಯುರ್ವೇದ ಪಸರಿಸುತ್ತಿದೆ. ವಿದ್ಯಾರ್ಥಿಗಳು ಆಯುರ್ವೇದ ಸಂಶೋಧನೆಯ ಮಹತ್ವ ಅರಿಯಬೇಕು ಎಂದು ಕಿವಿಮಾತು ಹೇಳಿದರು.

ಹಾಸನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ.ಪ್ರಸನ್ನ ಎನ್.ರಾವ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಧರ್ಮಸ್ಥಳ ಸಂಸ್ಥೆಗಳಿಂದ ಪದವಿ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಆಯುರ್ವೇದವನ್ನು ಪಸರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತಿದ್ದಾರೆ ಎಂದು ಹೇಳಿದರು.

ರಾಷ್ಟ್ರೀಯ ಆರೋಗ್ಯ ಸುಧಾರಣೆಗೆ ಎಸ್‌ಡಿಎಂ ಸಂಸ್ಥೆಯ ವಿದ್ಯಾರ್ಥಿಗಳ ಕೊಡುಗೆ ಅಪಾರ. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಆಯುರ್ವೇದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವುದು ಹಾಗೂ ಉದ್ಯಮಗಳನ್ನು ಆರಂಭಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ಜೀವನವನ್ನು ಅರಿಯುವುದು, ಜೀವನವನ್ನು ರೂಪಿಸುವುದು ಹಾಗೂ ಜೀವನದಾಚೆಗಿನ ಸತ್ಯಗಳನ್ನು ತಿಳಿಯುವುದು ನಿಜವಾದ ಜ್ಞಾನವಾಗಿದ್ದು, ವಿದ್ಯಾರ್ಥಿಗಳು ಸಂಧೋಧನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಮಮತಾ ಮಾತನಾಡಿ, ಆಯುರ್ವೇದವನ್ನು ಸಮಾಜಕ್ಕೆ ಮುಟ್ಟಿಸುವಲ್ಲಿ ಆಯುರ್ವೇದ ವಿದ್ಯಾರ್ಥಿಗಳು ಹಾಗೂ ವೈದ್ಯರ ಶ್ರಮ ದೊಡ್ಡದು. ಕೇಂದ್ರ ಸರ್ಕಾರದ ‘ಆಜಾದ್ ಕೀ ಅಮೃತ ಮಹೋತ್ಸವ’ ಕಾರ್ಯಕ್ರಮ ಸರಣಿಯಲ್ಲಿ ಶಾಲಾ ಕಾಲೇಜುಗಳಲ್ಲಿ ಆಯುರ್ವೇದದ ಜಾಗೃತಿ ಮೂಡಿಸುವ ಯೋಜನೆಯೂ ಶ್ಲಾಘನೀಯ ಎಂದು ಹೇಳಿದರು.

ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್. ಸ್ವಾಗತಿಸಿದರು. ಸಮ್ಮೇಳನದ ಮುಖ್ಯ ಕಾರ್ಯದರ್ಶಿ ಡಾ. ಚೈತ್ರ ಹೆಬ್ಬಾರ್ ವಂದಿಸಿದರು. ಕಾಲೇಜಿನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾದ ಡಾ. ನಿರಂಜನ್ ರಾವ್ ಉಪಸ್ಥಿತರಿದ್ದರು. ರೋಗನಿಧಾನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಅರುಣ್ ಕುಮಾರ್ ಹಾಗೂ ಕೌಮಾರಭೃತ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಎಸ್‌.ಜೆ.ನಾಗರತ್ನ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT