ಕಡಲ್ಕೊರೆತ: ಆತಂಕದಲ್ಲಿ ತೀರದ ಜನರು

7
ಮಲ್ಪೆ ತೊಟ್ಟಂ ಭಾಗದಲ್ಲಿ ನೆಲಕ್ಕುರುಳಿದ ತೆಂಗು, ಗಾಳಿ ಮರಗಳು

ಕಡಲ್ಕೊರೆತ: ಆತಂಕದಲ್ಲಿ ತೀರದ ಜನರು

Published:
Updated:
Deccan Herald

ಉಡುಪಿ: ಭಾರಿ ಬಿರುಗಾಳಿ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು ಮಲ್ಪೆ, ಪಡುಕೆರೆ ಭಾಗದಲ್ಲಿ ಕಡಲ್ಕೊರೆತ ಉಂಟಾಗಿದೆ. ಸಮುದ್ರದಲ್ಲಿ ಎದ್ದಿರುವ ದೈತ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುತ್ತಿದ್ದು, ತೀರದಲ್ಲಿ ವಾಸಮಾಡುತ್ತಿರುವ ಕುಟುಂಬಗಳು ಜೀವವನ್ನು ಕೈಲಿಡಿದು ಬದುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮೂರ್ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿಮಳೆ ಈಗಾಗಲೇ ಅವಾಂತರಗಳನ್ನು ಸೃಷ್ಟಿಸಿದೆ. ಈಗ ಕಡಲ್ಕೊರೆತದ ಸಮಸ್ಯೆಯೂ ಉಂಟಾಗಿದ್ದು, ಮಲ್ಪೆ ತೊಟ್ಟಂ ಭಾಗದಲ್ಲಿ ಹಲವು ತೆಂಗಿನ ಮರಗಳನ್ನು ಅಪೋಷನ ತೆಗೆದುಕೊಂಡಿದೆ.‌

ಮಲ್ಪೆ ತೊಟ್ಟಂ ವ್ಯಾಪ್ತಿಯಲ್ಲಿ ಸಮರ್ಪಕ ತಡೆಗೋಡೆ ನಿರ್ಮಾಣ ಮಾಡದ ಪರಿಣಾಮ, ಸಮುದ್ರದ ನೀರು ಸುತ್ತಮುತ್ತಲಿನ ಮನೆಗಳಿಗೆ ನುಗ್ಗುತ್ತಿದೆ. ಈಗಾಗಲೇ ಅಲೆಗಳ ಹೊಡೆತಕ್ಕೆ ತೀರದಲ್ಲಿರುವ ಮರಗಳು ಬುಡಮೇಲಾಗಿವೆ. ಕೆಲವು ಬೀಳುವ ಹಂತ ತಲುಪಿವೆ ಎನ್ನುತ್ತಾರೆ ನಿವಾಸಿ ಸುಂದರ್ ಲೀಲಾ ಡಿಸಿಲ್ವಾ.

ತೊಟ್ಟಂ ತೀರ ವ್ಯಾಪ್ತಿಯಲ್ಲಿ ಸಾವಿರಾರು ತೆಂಗಿನ ಮರ ಹಾಗೂ ಗಾಳಿ ಮರಗಳಿವೆ. ಈ ಮರಗಳನ್ನೇ ನಂಬಿಕೊಂಡು ಹಲವು ಕುಟುಂಬಗಳು ಜೀವನ ನಡೆಸುತ್ತಿವೆ. ಬಿರುಗಾಳಿ ಮಳೆಗೆ ಎಲ್ಲವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ ಎನ್ನುತ್ತಾರೆ ನಿವಾಸಿಗಳು.

ಪ್ರತಿದಿನ ದುಡಿದರಷ್ಟೇ ಜೀವನ ನಡೆಯುತ್ತದೆ. ಬೇರೆಡೆ ಹೋಗಲು ಸ್ವಂತ ಸೂರಿಲ್ಲ. ಹಿಂದಿನಿಂದಲೂ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದು, ಸರ್ಕಾರ ನಿರ್ಭೀತಿಯಿಂದ ಬದುಕಲು ಸೌಲಭ್ಯ ಒದಗಿಸಬೇಕು ಎನ್ನುತ್ತಾರೆ ಅವರು.  

ರಾತ್ರಿಯ ಹೊತ್ತು ಕಡಲಿನಲ್ಲಿ ಏಳುವ ದೈತ್ಯ ಅಲೆಗಳನ್ನು ನೋಡಿದರೆ ಭಯವಾಗುತ್ತದೆ. ನಿದ್ದೆಯಿಲ್ಲದೆ ದಿನಗಳನ್ನು ಕಳೆಯುವಂತಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತೊಟ್ಟಂ ತೀರ ವ್ಯಾಪ್ತಿಯಲ್ಲಿ ಕಲ್ಲನ್ನು ಹಾಕಿದರೆ ಅಲೆಗಳ ಹೊಡೆತದಿಂದ ರಕ್ಷಣೆ ಪಡೆಯಬಹುದು ಎನ್ನುತ್ತಾರೆ ಅಲ್ಲಿನ ನಿವಾಸಿಗಳು.

ಈಚೆಗಿನ ಕೆಲವು ವರ್ಷಗಳಲ್ಲಿ ಈ ಪ್ರಮಾಣದ ಮಳೆ ಬಿದ್ದಿರಲಿಲ್ಲ. ಈ ಬಾರಿ ಕಡಲಿನ ವ್ಯಾಪ್ತಿ ವಿಸ್ತಾರವಾಗಿದೆ. ಮನೆಗಳಿಗೆ ನೀರು ನುಗ್ಗುತ್ತಿದೆ. ಮಳೆಯ ಜತೆಗೆ ಗಾಳಿಯೂ ಜೋರಾಗಿದ್ದು, ಮನೆಗಳ ಮೇಲೆ ಮರಗಳು ಬೀಳುವ ಆತಂಕ ಎದುರಾಗಿದೆ. ಶಾಶ್ವತ ತಡೆಗೋಡೆ ನಿರ್ಮಿಸಿದರೆ ಕಡಲ್ಕೊರೆತ ಸಮಸ್ಯೆಗೆ ಮುಕ್ತಿಸಿಗಲಿದೆ. ಸದ್ಯ ತಾತ್ಕಾಲಿಕವಾಗಿ ದೊಡ್ಡ ಕಲ್ಲುಗಳನ್ನಾದರೂ ತೀರಕ್ಕೆ ತಂದು ಸುರಿಯಬೇಕು ಎಂದು ಒತ್ತಾಯಿಸುತ್ತಾರೆ ನಿವಾಸಿ ಪ್ರಮೀಳಾ.

ಪಡುಕೆರೆ ಭಾಗದಲ್ಲೂ ಅಲೆಗಳ ಹೊಡೆತಕ್ಕೆ ಕಡಲ್ಕೊರೆತ ಉಂಟಾಗಿದ್ದು, ರಸ್ತೆಗಳು ಕಡಿದುಬೀಳುವ ಆತಂಕ ಎದುರಾಗಿದೆ. ವಿದ್ಯುತ್ ಕಂಬಗಳು ಮುರಿದುಬೀಳುವ ಭೀತಿ ಇದೆ. ಅವಘಡಗಳಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರು.

ಮಲ್ಪೆ ಸಮುದ್ರತೀರ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಕಡಲು ತನ್ನೊಳಗಿದ್ದ ಕಲ್ಮಶವನ್ನೆಲ್ಲ ತೀರಕ್ಕೆ ತಂದು ಎಸೆದಿದ್ದು, ಎಲ್ಲೆಡೆ ಕಸದ ರಾಶಿ ಆವರಿಸಿದೆ. ಪ್ಲಾಸ್ಟಿಕ್‌ ಬಾಟೆಲ್‌ಗಳು, ಚಪ್ಪಲಿಗಳು, ಮದ್ಯದ ಬಾಟಲಿಗಳು ಎಲ್ಲೆಂದರಲ್ಲಿ ಹರಡಿಕೊಂಡಿವೆ. 

ಮಳೆ, ಬಿಸಿಲಿನ ರಕ್ಷಣೆ ಪಡೆಯಲು ಹಾಕಲಾಗಿದ್ದ ಛತ್ರಿಗಳು ಗಾಳಿಗೆ ಮುರಿದುಬಿದ್ದಿವೆ. ಸಿಸಿಟಿವಿ ಕ್ಯಾಮೆರಾಗೂ ಹಾನಿಯಾಗಿದೆ. ಪ್ರವಾಸಿಗರು ಸಮುದ್ರಕ್ಕೆ ಇಳಿಯುವ ಕಡೆಗಳಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಲಾಗಿದ್ದು, ಮೈಕ್‌ ಮೂಲಕ ಎಚ್ಚರಿಕೆಯ ಸಂದೇಶಗಳನ್ನು ನೀಡಲಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !