ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಹಂತದ ಪಂಚಾಯಿತಿ ಚುನಾವಣೆ: ಶೇ 75.42 ಮತದಾನ

ಗ್ರಾಮ ಪಂಚಾಯಿತಿ ಕದನ ಮುಕ್ತಾಯ: ಫಲಿತಾಂಶದತ್ತ ಎಲ್ಲರ ಚಿತ್ತ
Last Updated 27 ಡಿಸೆಂಬರ್ 2020, 16:32 IST
ಅಕ್ಷರ ಗಾತ್ರ

ಉಡುಪಿ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯವಾಗಿದ್ದು ಒಟ್ಟಾರೆ ಶೇ 75.42ರಷ್ಟು ಮತದಾನವಾಗಿದೆ. ಕುಂದಾಪುರ ತಾಲ್ಲೂಕಿನಲ್ಲಿ ಶೇ 76.09, ಕಾರ್ಕಳ ತಾಲ್ಲೂಕಿನಲ್ಲಿ ಶೇ ಶೇ 76.21 ಹಾಗೂ ಕಾಪು ತಾಲ್ಲೂಕಿನಲ್ಲಿ ಶೇ 73.08ರಷ್ಟು ಮತದಾನವಾಗಿದೆ.

ನಿರ್ಭೀತಿಯಿಂದ ಮತ ಚಲಾವಣೆ:ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲ್ಲೂಕಿನ 86 ಗ್ರಾಮ ಪಂಚಾಯಿತಿಯ 1,178 ಸ್ಥಾನಗಳಿಗೆ ಮತದಾನ ನಡೆದಿದ್ದು, ಕೋವಿಡ್‌ ಭೀತಿಯ ನಡುವೆಯೂ ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಿದರು. ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 5ರವರೆಗೂ ನಡೆಯಿತು.

ಮತದಾನಕ್ಕೆ ಬೆಳಿಗ್ಗಿನಿಂದಲೇ ಹೆಚ್ಚು ಉತ್ಸಾಹ ಕಂಡುಬಂತು. ಪಂಚಾಯಿತಿ ಚುನಾವಣೆಯಾಗಿದ್ದರಿಂದ ಹಳ್ಳಿಗಳಲ್ಲಿ ಚುನಾವಣೆಯ ಕಾವು ಜೋರಾಗಿತ್ತು. ಕೊನೆ ಕ್ಷಣದವರೆಗೂ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ನಿರತರಾಗಿದ್ದ ದೃಶ್ಯ ಮತಗಟ್ಟೆಗಳ ಸಮೀಪ ಕಂಡುಬಂತು.

ಅಶಕ್ತರು, ವೃದ್ಧರು ಅಂಗವಿಕಲರು ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದ್ದು ಗಮನ ಸೆಳೆಯಿತು. ಅಂಗವಿಕಲರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಮೊದಲ ಬಾರಿಗೆ ಪಂಚಾಯಿತಿ ಚುನಾವಣೆಗೆ ಮತಹಾಕುವ ಮೂಲಕ ಯುವ ಮತದಾರರು ಸಂಭ್ರಮಿಸಿದರು.

ಕೋವಿಡ್‌ ಹರಡುವಿಕೆ ತಡೆಗೆ ಮತಗಟ್ಟೆಯಲ್ಲಿ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗೆ ಬಂದ ಮತದಾರರಿಗೆ ದೇಹದ ಉಷ್ಠಾಂಶ ಪರೀಕ್ಷಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಸಿಬ್ಬಂದಿ ಸೂಚಿಸುತ್ತಿದ್ದ ದೃಶ್ಯ ಕಂಡುಬಂತು.

ಅಹಿತಕರ ಘಟನೆಗಳು ನಡೆಯದಂತೆ ಸೂಕ್ಷ್ಮ ಮತಗಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಸ್ತ್ರಸಜ್ಜಿತ ಪೊಲೀಸರು ಮತಗಟ್ಟೆಯನ್ನು ಸುತ್ತುವರಿದಿದ್ದರು. ಮತಗಟ್ಟೆಯ ಮುಖ್ಯ ದ್ವಾರದಲ್ಲಿ ವಿಡಿಯೋ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿತ್ತು.

ಯಾರಿಗೆ ಹೊಸ ವರ್ಷದ ಸಿಹಿ:ಎರಡು ಹಂತದಲ್ಲಿ ನಡೆದ ಪಂಚಾಯಿತಿ ಚುನಾವಣೆಯ ಮತಪತ್ರಗಳು ಮತಯಂತ್ರ ಸೇರಿದ್ದು, ಡಿ.30ರಂದು ಫಲಿತಾಂಶ ಹೊರಬೀಳಲಿದೆ. ಯಾರಿಗೆ ಹೊಸ ವರ್ಷದ ಸಿಹಿ, ಯಾರಿಗೆ ಕಹಿ ಎಂಬುದು ಅಂದು ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT