ಮಂಗಳವಾರ, ಡಿಸೆಂಬರ್ 10, 2019
26 °C
ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ

ಜಾತ್ಯತೀತತೆಗೆ ಎದುರಾಗಿದೆ ಗಂಡಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಡಾ.ಬಿ.ಆರ್.ಅಂಬೇಡ್ಕರ್ ನಿಧನರಾಗಿ 62 ವರ್ಷಗಳು ಕಳೆದಿವೆ. ಹಾಗೆಯೇ ಬಾಬ್ರಿ ಮಸೀದಿ ಧ್ವಂಸವಾಗಿ 26 ವರ್ಷಗಳು ಕಳೆದಿವೆ. ಈ ಎರಡೂ ಘಟನೆಗಳಿಗೆ ಡಿಸೆಂಬರ್ 6 ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಹೇಳಿದರು.

ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಗುರುವಾರ ಸಂವಿಧಾನ ಹಾಗು ಜಾತ್ಯತೀತತೆ ರಕ್ಷಣೆಗಾಗಿ ಪ್ರಚಾರ ವಾಹನ ಹಾಗೂ ಧರಣಿ ಸತ್ಯಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.

ಬಾಬ್ರಿ ಮಸೀದಿ ಕೆಡವಿದ ಜಾಗದಲ್ಲಿ ರಾಮಮಂದಿರ ಕಟ್ಟುವ ಕುರಿತು ದೇಶದಾದ್ಯಂತ ಚರ್ಚೆಗಳು ನಡೆಯುತ್ತಿವೆ. ರಾಮಮಂದಿರ ನಿರ್ಮಾಣಕ್ಕೆ ಸಿಪಿಐಎಂ ವಿರೋಧವಿಲ್ಲ. ಆದರೆ, ನ್ಯಾಯಾಲಯ ನೀಡುವ ತೀರ್ಪಿಗೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಬಾಬ್ರಿ ಮಸೀದಿ–ರಾಮಮಂದಿರ ಪ್ರಕರಣವನ್ನು ತುರ್ತಾಗಿ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಆದರೆ, ನ್ಯಾಯಾಂಗದ ತೀರ್ಪಿನ ವಿರುದ್ಧ ಅಪಸ್ವರಗಳು ಕೇಳಿ ಬರುತ್ತಿವೆ. ಈಚೆಗೆ ಪೇಜಾವರ ಶ್ರೀಗಳು ಸುಪ್ರೀಂಕೋರ್ಟ್‌ ತೀರ್ಪು ನೀಡುವವರೆಗೂ ಕಾಯುವ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ರಾಮಮಂದಿರ ನಿರ್ಮಾಣ ಮಾಡಲಿ ಎಂದು ಹೇಳಿಕೆ ನೀಡಿದ್ದಾರೆ. ಶ್ರೀಗಳ ಹೇಳಿಕೆ ಸರಿಯಲ್ಲ ಎಂದು ಬಾಲಕೃಷ್ಣ ಶೆಟ್ಟಿ ಹೇಳಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹಿಂದೂಗಳು, ಮುಸ್ಲಿಮರು, ಕ್ರೈಸ್ತರು, ಬೌದ್ಧರು, ಜೈನರು, ಸಿಖ್ಖರು ಭಾಗಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ಸಂವಿಧಾನದಲ್ಲಿ ಜಾತ್ಯತೀತತೆ ಅಂಶಗಳನ್ನು ಸೇರಿಸಲಾಗಿದೆ. ಆದರೆ, ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆಗೆ ಗಂಡಾಂತರ ಕೆಲಸ ನಡೆಯುತ್ತಿದೆ ಎಂದರು.

ರಾಮಮಂದಿರ ವಿಚಾರದಲ್ಲಿ ಒಂದು ಕೋಮಿನ ವಿರುದ್ಧ ಉದ್ರೇಕಕಾರಿಯಾಗಿ ಭಾಷಣ ಮಾಡುವುದು ಖಂಡನೀಯ. 26 ವರ್ಷಗಳಿಂದಲೂ ರಾಮಮಂದಿರ ಕಟ್ಟುವ ವಿಚಾರ ಚುನಾವಣೆ ಬರುತ್ತಿದ್ದಂತೆ ಮುನ್ನಲೆಗೆ ಬಂದು ನಂತರ ಹಿನ್ನೆಲೆಗೆ ಸರಿಯುತ್ತದೆ. ಹಿಂದೂಗಳ ಮತ ಪಡೆಯುವ ಒಂದೇ ಉದ್ದೇಶದಿಂದ ರಾಮಮಂದಿರ ವಿಚಾರ ಜೀವಂತವಾಗಿದೆ ಎಂದು ಟೀಕಿಸಿದರು.

ಸಂವಿಧಾನಕ್ಕೆ ಎಲ್ಲರೂ ಭಾಧ್ಯರಾಗಿರಬೇಕು. ಯಾವ ಧರ್ಮವನ್ನೂ ಓಲೈಕೆ ಮಾಡುವ ಅವಶ್ಯಕತೆ ಇಲ್ಲ. ಎಲ್ಲ ಧರ್ಮಗಳನ್ನು ಸಮಾನವಾಗಿ ಕಾಣಬೇಕಾದ ಅವಶ್ಯಕತೆ ಇದೆ. ಗೊಂದಲ, ಆತಂಕಗಳನ್ನು ಸೃಷ್ಟಿಸಿ ರಾಜಕೀಯ ಲಾಭಮಾಡಿಕೊಳ್ಳುವುದು ಖಂಡನೀಯ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು