ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಂತೆ ಮೀನುಗಾರರನ್ನೂ ನೋಡಿ

‘ಭಾರತ್‌ ಕೆ ಮನ್‌ ಕಿ ಬಾತ್ ಮೋದಿ ಕೆ ಸಾಥ್’ ಕಾರ್ಯಕ್ರಮದಲ್ಲಿ ಒತ್ತಾಯ
Last Updated 20 ಫೆಬ್ರುವರಿ 2019, 14:11 IST
ಅಕ್ಷರ ಗಾತ್ರ

ಉಡುಪಿ: 2 ತಿಂಗಳ ಹಿಂದೆ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್‌ ಇದುವರೆಗೂ ಪತ್ತೆಯಾಗಿಲ್ಲ. ಮೀನುಗಾರರ ಕುಟುಂಬ ಸದಸ್ಯರು ಜೀವ ಕೈಲಿಡಿದು ಬದುಕುತ್ತಿದ್ದಾರೆ. ಈ ಪ್ರಕರಣವನ್ನು ಕೇಂದ್ರ ಸರ್ಕಾರ ಮತ್ತಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮಲ್ಪೆ ಮೀನುಗಾರರ ಸಂಘದ ಸದಸ್ಯ ಸತೀಶ್ ಕುಂದರ್ ಒತ್ತಾಯಿಸಿದರು.

ನಗರದ ಶಾರದಾ ಹೋಟೆಲ್‌ ಸಭಾಂಗಣದಲ್ಲಿ ಬುಧವಾರ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ‘ಭಾರತ್‌ ಕೆ ಮನ್‌ ಕಿ ಬಾತ್ ಮೋದಿ ಕೆ ಸಾಥ್’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಡಿ.15ರಂದು ಸುವರ್ಣ ತ್ರಿಭುಜ ಬೋಟ್‌ ಮಹಾರಾಷ್ಟ್ರದ ಮಾಲ್ವಾನ್‌ ಬಳಿ ನಾಪತ್ತೆಯಾಗಿತ್ತು. ಇದೇ ಸಮಯದಲ್ಲಿ ಐಎನ್‌ಎಸ್‌ ಕೊಚ್ಚಿ ನೌಕೆಯ ತಳಭಾಗಕ್ಕೆ ಹಾನಿಯಾಗಿತ್ತು. ಸಮುದ್ರದಾಳದಲ್ಲಿ ಶೋಧ ನಡೆಸಿದಾಗ 22 ಮೀಟರ್‌ ರೆಕ್ಕೆಯಾಕಾರಾದ ವಸ್ತು ಪತ್ತೆಯಾಗಿತ್ತು. ಆರಂಭದಲ್ಲಿ ಬೋಟ್‌ನದ್ದೇ ಅವಶೇಷ ಎನ್ನಲಾಗಿತ್ತು. ಬಳಿಕ ಅದೊಂದು ಕಲ್ಲುಬಂಡೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ, ಐಎನ್‌ಎಸ್‌ ಕೊಚ್ಚಿ ನೌಕೆಗೆ ಡಿಕ್ಕಿ ಹೊಡೆದಿದ್ದು ಏನು ಎಂಬ ಸತ್ಯ ಬಹಿರಂಗಪಡಿಸಬೇಕು ಎಂದು ಕುಂದರ್ ಒತ್ತಾಯಿಸಿದರು.

ಐಎನ್‌ಎಸ್‌ ಕೊಚ್ಚಿಗೆ ತಾಗಿಯೇ ಸುವರ್ಣ ತ್ರಿಭುಜ ಬೋಟ್‌ ಮುಳುಗಡೆಯಾಗಿದೆ ಎಂಬ ಬಲವಾದ ಶಂಕೆ ಇದೆ. ಈ ವಿಚಾರದಲ್ಲಿ ನೌಕಾಪಡೆ ಅಧಿಕಾರಿಗಳು ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ತಕ್ಷಣ ಕೇಂದ್ರ ಸರ್ಕಾರ ವಿಷಯವನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.

‘ಮೀನುಗಾರಿಕೆಗೆ ತೆರಳಿದ ಸಂದರ್ಭ ಹಲವು ಬಾರಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಈ ವೇಳೆ ವೈದ್ಯಕೀಯ ನೆರವು ಪಡೆಯಲು ನೆರೆ ರಾಜ್ಯದ ಬಂದರಿಗೆ ಹೋದರೆ ಅಲ್ಲಿನ ಅಧಿಕಾರಿಗಳು ತನಿಖೆಯ ಹೆಸರಿನಲ್ಲಿ ಚಿಕಿತ್ಸೆ ನೀಡದೆ ಕಿರುಕುಳ ನೀಡುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಮೀನುಗಾರ ಮುಖಂಡ ರವಿ ಅಳಲು ತೋಡಿಕೊಂಡರು.

ರೈತರು ಆತ್ಮಹತ್ಯೆ ಮಾಡಿಕೊಂಡರೆ ರಾಜ್ಯದಾದ್ಯಂತ ಸುದ್ದಿಯಾಗುತ್ತದೆ. ಮೀನುಗಾರರು ಸತ್ತರೆ ಕನಿಷ್ಠ ಶವ ನೋಡಲು ಯಾರೂ ಬರುವುದಿಲ್ಲ. ಈ ತಾರತಮ್ಯ ನಿವಾರಣೆಯಾಗಬೇಕು. ಮೀನುಗಾರರು ಮೃತಪಟ್ಟರೆ ಸೂಕ್ತ ಪರಿಹಾರ ನೀಡಬೇಕು. ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಮೀನುಗಾರರ ಬೇಡಿಕೆಗಳಿಗೆ ಮನ್ನಣೆ ಸಿಗಬೇಕು ಎಂದು ಒತ್ತಾಯಿಸಿದರು.

ಪಂಜಾಬ್ ರಾಜ್ಯದ ಸಂಸದ ಅವಿನಾಶ್ ಖನ್ನಾ ಮಾತನಾಡಿ, ‘ಚುನಾವಣೆಗೂ ಮುನ್ನ ಬಿಜೆಪಿ ನೀಡಿದ್ದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಈಡೇರಿಸಿದ್ದಾರೆ. ಸಬ್‌ ಕೆ ಸಾತ್, ಸಬ್‌ ಕೆ ವಿಕಾಸ್‌ ಘೋಷಣೆಯಂತೆ ಸರ್ವರನ್ನು ಒಳಗೊಂಡು ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಈ ಬಾರಿ ಜನರ ನಿರೀಕ್ಷೆಗಳನ್ನು ಅರಿತು ಪ್ರಣಾಳಿಕೆಯಲ್ಲಿ ಸೇರಿಸಲು ದೇಶದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಉಡುಪಿ ಶಾಸಕ ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಮೆಂಡನ್‌, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ್‌ ಕುಮಾರ್‌ ಶೆಟ್ಟಿ, ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟಗಾರರ ಫೆಡರೇಷನ್ ಅಧ್ಯಕ್ಷ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT