ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿಗೆ ಹರಿದು ಬಂದ ಕೆಂಬಾವುಟ ಪಡೆ

ಪಟ್ಟಣದ ಮುಖ್ಯರಸ್ತೆಯಲ್ಲಿ ಬೃಹತ್ ಮೆರವಣಿಗೆ, ಸಿಪಿಎಂ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ ಕ್ರಾಂತಿ ಕವಿ ಗದ್ದರ್
Last Updated 6 ಮಾರ್ಚ್ 2018, 10:50 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಮುಂಬರುವ ವಿಧಾನಸಭೆ ದೃಷ್ಟಿಯಲ್ಲಿಟ್ಟುಕೊಂಡು ಪಟ್ಟಣದಲ್ಲಿ ಸಿಪಿಎಂ ಭಾನುವಾರ ಆಯೋಜಿಸಿದ್ದ ‘ರಾಜಕೀಯ ಸಮಾವೇಶ’ಕ್ಕೆ ಕೆಂಬಾವುಟ ಹಿಡಿದ ದೊಡ್ಡ ದಂಡೇ ಹರಿದು ಬಂದಿತ್ತು. ಪಟ್ಟಣದ ಮುಖ್ಯರಸ್ತೆಯಲ್ಲಿ ನಡೆದ ಬೃಹತ್ ಮೆರವಣಿಗೆ ನಡೆಸಲಾಯಿತು.

ತಾಲ್ಲೂಕು ಕ್ರೀಡಾಂಗಣದಲ್ಲಿ ಹಾಕಿದ್ದ ವೇದಿಕೆಯಲ್ಲಿ ಆಂಧ್ರಪ್ರದೇಶದ ಕ್ರಾಂತಿ ಕವಿ ಗದ್ದರ್ ಅವರ ತಂಡ ಕ್ರಾಂತಿ ಗೀತೆಗಳನ್ನು ಮೊಳಗಿಸುವ ಮೂಲಕ ಸಿಪಿಎಂ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ‘ಕಳೆದ 10 ವರ್ಷಗಳಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಶ್ವತವಾದ ಕೆಲಸಗಳು ಆಗಿಲ್ಲ. ಗ್ರಾಮಗಳಲ್ಲಿ ಕೆಲಸ ಇಲ್ಲದೆ ಜನರು ನಗರ ಪ್ರದೇಶಗಳಿಗೆ ವಲಸೆ ಹೋದರೂ ಇಲ್ಲಿನ ಶಾಸಕರು ಕ್ಷೇತ್ರದ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಲೇ ಇಲ್ಲ. ಇವತ್ತು ಶಾಸಕ ಸುಬ್ಬಾರೆಡ್ಡಿ ಅವರು ಮಾಧ್ಯಮವೊಂದು ನಡೆಸಿದ ಸಮೀಕ್ಷೆಯಲ್ಲಿ ವೈಯಕ್ತಿಕ ಸಾಧನೆಯಲ್ಲಿ ತೀರಾ ಹಿಂದುಳಿದಿದ್ದಾರೆ. ಇದು ಶಾಸಕ ಕೆಲಸಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಹೇಳಿದರು.

‘ನಾನು ಕ್ಷೇತ್ರದಲ್ಲಿ ಎರಡು ಬಾರಿ ಶಾಸಕನಾಗಿದ್ದೆ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ 11 ಸಾವಿರ ಭೂಹೀನ ರೈತರಿಗೆ ಬಗರ್ ಹುಕುಂ ಭೂಮಿ ಮಂಜೂರು ಮಾಡಿಸಿದ್ದೇನೆ. ಚಿತ್ರಾವತಿ ಮತ್ತು ವಂಡಮಾನ್ ಜಲಾಶಯಗಳ ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್, ಐಟಿಐ ಕಾಲೇಜು ನನ್ನ ಅವಧಿಯಲ್ಲಿ ಮಂಜೂರಾಗಿವೆ’ ಎಂದು ತಿಳಿಸಿದರು.

ಗದ್ದರ್ ಅವರ ‘ಪ್ರಜಾ ನಾಟ್ಯ ಮಂಡಳಿ’ಯ ಕಲಾವಿದರು ಕ್ರಾಂತಿಗೀತೆಗಳ ಜತೆಗೆ ಕಿರು ನಾಟಕವೊಂದನ್ನು ಪ್ರದರ್ಶಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಾಡಪ್ಪಲ್ಲಿ ಬಳಿಯಲ್ಲಿ ನಿರ್ಮಿಸಿರುವ ಸಿಪಿಎಂ ಮುಖಂಡ ದಿವಂಗತ ಶ್ರೀನಿವಾಸರೆಡ್ಡಿ ಅವರ ಸ್ತೂಪಕ್ಕೆ ಗದ್ದರ್, ಶ್ರೀರಾಮರೆಡ್ಡಿ ಮತ್ತು ಶ್ರೀನಿವಾಸರೆಡ್ಡಿ ಕುಟುಂಬದವರು ಪುಷ್ಪನಮನ ಸಲ್ಲಿಸಿದರು.

ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವರಲಕ್ಷ್ಮೀ, ವಿ.ಜೆ.ಕೆ.ನಾಯರ್, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ವಿ.ಗೀತಾ, ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಜಯರಾಮರೆಡ್ಡಿ, ತಾಲ್ಲೂಕು ಕಾರ್ಯದರ್ಶಿ ಚನ್ನರಾಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಧಾಕರರೆಡ್ಡಿ, ಶ್ರೀರಾಮನಾಯಕ್, ಮುಖಂಡರಾದ ಮಹಮದ್ ಷಫೀ, ಗಡದಂ ವೆಂಕಟೇಶ್, ಅಬ್ದುಲ್ ಲತೀಫ್ ಖಾನ್ ಉಪಸ್ಥಿತರಿದ್ದರು.
***
80 ಶಾಸಕರು ಭೂಗಳ್ಳರು

‘ಇವತ್ತು ರಾಜ್ಯದ 224 ಶಾಸಕರ ಪೈಕಿ 80 ಮಂದಿ ಭೂಗಳ್ಳರು, ಮದ್ಯ ಮತ್ತು ಮೈನಿಂಗ್ ಮಾಫಿಯಾದವರು ಸೇರಿಕೊಂಡಿದ್ದಾರೆ. ಇವರೆಲ್ಲರಿಗೂ ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬೇಕಿಲ್ಲ. ತಮ್ಮ ರಾಜಕೀಯ ಮತ್ತು ಆಸ್ತಿಗಳನ್ನು ರಕ್ಷಣೆ ಮಾಡಿಕೊಳ್ಳುವುದಷ್ಟಕ್ಕೆ ಇವರು ಸೀಮಿತಗೊಂಡಿದ್ದಾರೆ. ಇವತ್ತು ಬಡವರು, ದಲಿತರು, ಶೋಷಿತರ ಪರ ಧ್ವನಿ ಎತ್ತುವವರು ಅಧಿಕಾರಕ್ಕೆ ಬರಬೇಕಿದೆ. ಆ ನಿಟ್ಟಿನಲ್ಲಿ ಈ ಬಾರಿ ಕ್ಷೇತ್ರದಲ್ಲಿ ಸಿಪಿಎಂ ಗೆಲ್ಲಿಸಬೇಕಿದೆ’ ಎಂದು ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.
***
ಕಾರ್ಮಿಕರು ದೀನ ದಲಿತರ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಾಗೇಪಲ್ಲಿ ಮತದಾರರು ಸಿಪಿಎಂ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಬೇಕು.
– ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT