ಗುರುವಾರ , ಡಿಸೆಂಬರ್ 12, 2019
27 °C
ಬೆಚ್ಚಿಬಿದ್ದ ಪೋಷಕರು

ಬಾಲಕರ ಮೇಲೆ ಸರಣಿ ಲೈಂಗಿಕ ದೌರ್ಜನ್ಯ: ಪತ್ರಕರ್ತನ ವಿರುದ್ಧ 11 ಪೋಕ್ಸೊ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಬಾಲಕರನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪತ್ರಕರ್ತ ಚಂದ್ರ ಕೆ.ಹೆಮ್ಮಾಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಯುತ್ತಿದೆ.

ಆರೋಪಿ ವಿರುದ್ಧ ಇದುವರೆಗೂ ಪೋಕ್ಸೊ ಕಾಯ್ದೆಯಡಿ 11 ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾದ್ಯತೆಗಳಿವೆ ಎಂದು ‘ಪ್ರಜಾವಾಣಿ’ಗೆ ಉನ್ನತ ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.‌

ಕುಂದಾಪುರ ತಾಲ್ಲೂಕಿನ ಹೆಮ್ಮಾಡಿಯ ಚಂದ್ರ ಕೆ.ಹೆಮ್ಮಾಡಿ (40) ರಾಜ್ಯಮಟ್ಟದ ಪತ್ರಿಕೆಯ ಬಿಡಿ ವರದಿಗಾರ. ವಿಚಾರಣೆ ವೇಳೆ ಆರೋಪಿಯ ಲೈಂಗಿಕ ದೌರ್ಜನ್ಯ ಕೃತ್ಯಗಳು ಒಂದೊಂದೇ ಬೆಳಕಿಗೆ ಬರುತ್ತಿದ್ದು, ಪೋಷಕರನ್ನು ಬೆಚ್ಚಿಬೀಳಿಸಿವೆ.

ಹೇಗೆ ಕೃತ್ಯ ಎಸಗುತ್ತಿದ್ದ ?

ಶಾಲಾ ಸಮಾರಂಭಗಳಿಗೆ ವರದಿ ಮಾಡಲು ತೆರಳುತ್ತಿದ್ದ ಆರೋಪಿಯು ಬಾಲಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದ. ಅವರ ಜತೆ ಆತ್ಮೀಯವಾಗಿ ಬೆರೆತು, ವಿಶ್ವಾಸ ಗಳಿಸುತ್ತಿದ್ದ. ನಂತರ ಮಕ್ಕಳ ಅಭಿರುಚಿಯನ್ನು ಗುರುತಿಸಿ ಗಾಯನ, ಫೊಟೊಗ್ರಪಿ, ನೃತ್ಯ ಹೇಳಿಕೊಡುವುದಾಗಿ ಸೆಳೆಯುತ್ತಿದ್ದ.

ಬಳಿಕ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸೆಕ್ಸ್‌ ಬಗ್ಗೆ ಮಾತನಾಡುತ್ತಿದ್ದ. ಪೋರ್ನ್‌ ವಿಡಿಯೋ ಹಾಗೂ ಫೋಟೊಗಳನ್ನು ತೋರಿಸಿ ಪ್ರಚೋದಿಸಿ, ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಬಳಿಕ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಸುತ್ತಿದ್ದ. ಹೀಗೆ, ಹಲವು ವರ್ಷಗಳಿಂದ ಆರೋಪಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಛಾಯಾಚಿತ್ರ ತೆಗೆಯುವ ಸೋಗಿನಲ್ಲಿ ಕಾಡಿನಂಚಿನ ಮನೆಗಳಿಗೆ ಭೇಟಿನೀಡುತ್ತಿದ್ದ ಆರೋಪಿ, ‘ಕಾಡಿನೊಳಗೆ ಹೋಗಲು ದಾರಿ ತಿಳಿದಿಲ್ಲ. ನಿಮ್ಮ ಮಗನನ್ನು ಜತೆಗೆ ಕಳುಹಿಸಿಕೊಡಿ ಎಂದು ಪೋಷಕರನ್ನು ಒತ್ತಾಯಿಸುತ್ತಿದ್ದ. ಬಳಿಕ ಕಾಡಿನೊಳಗೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಎಂದು ಪೊಲೀಸರು ಆರೋಪಿಯ ವಿಕೃತಿಯನ್ನು ವಿವರಿಸಿದರು.

ಖಾಲಿ ಕಟ್ಟಡಗಳು, ನಿರ್ಜನ ಪ್ರದೇಶಗಳಲ್ಲೂ ಲೈಂಗಿಕ ದೌರ್ಜನ್ಯ ನಡೆದಿರುವುದು ತಿಳಿದು ಬಂದಿದೆ. ಪ್ರಕರಣ ಕೆದುಕುತ್ತಾ ಹೋದಂತೆ ಬಿಚ್ಚಿಕೊಳ್ಳುತ್ತಲೇ ಇದೆ. ಆರೋಪಿ ಮೂರು ದಿನಗಳ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗೆ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೆಲ ದಿನಗಳ ಹಿಂದೆ ಬೈಂದೂರಿನಲ್ಲಿ ಬಾಲಕನೊಬ್ಬ ಮಾನಸಿಕ ಆಘಾತಕ್ಕೊಳಗಾಗಿದ್ದ. ಪೋಷಕರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವ ವಿಚಾರ ಬಯಲಾಗಿತ್ತು. ತಕ್ಷಣ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದರು. ಘಟನೆಯ ಸಂಪೂರ್ಣ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ಹಲವು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಚಾರ ಬೆಳಕಿಗೆ ಬಂದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು