ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸಂಚಲನ: ಕಲಿಕಾ ಮಟ್ಟ ಅವಲೋಕನ

ವಿದ್ಯಾರ್ಥಿಗಳ ಕಲಿಕಾ ಗತಿ ಸುಧಾರಣೆ ಹಾಗೂ ಶಿಕ್ಷಕರ ಬೋಧನಾ ಗುಣಮಟ್ಟ ಹೆಚ್ಚಳಕ್ಕೆ ಕ್ರಮ
Last Updated 27 ಫೆಬ್ರುವರಿ 2021, 14:01 IST
ಅಕ್ಷರ ಗಾತ್ರ

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ಹಲವು ಮಾದರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿರುವ ಶಿಕ್ಷಣ ಇಲಾಖೆ ಇದೀಗ ‘ಶಾಲಾ ಸಂಚಲನ’ ಎಂಬ ವಿಭಿನ್ನ ಶೈಕ್ಷಣಿಕ ಕಾರ್ಯಕ್ರಮವನ್ನು ಜಾರಿಗೆ ತಂದಿದೆ. ಮಕ್ಕಳ ಕಲಿಕಾ ಗತಿ ಗುರುತಿಸುವಿಕೆ, ಶಿಕ್ಷಕರ ಬೋಧನಾ ಕ್ರಮಗಳ ಅವಲೋಕನ, ಶಾಲೆಗಳಲ್ಲಿರುವ ಮೂಲಸೌಕರ್ಯ ಕೊರತೆ ಗುರುತಿಸುವಿಕೆ ಸೇರಿದಂತೆ ಸಮಗ್ರ ವಿವರ ಕಲೆ ಹಾಕುವುದು ಶಾಲಾ ಸಂಚಲನ ಕಾರ್ಯಕ್ರಮದ ಮುಖ್ಯ ಉದ್ದೇಶ.

7 ತಂಡಗಳ ರಚನೆ

ಶಾಲಾ ಸಂಚಲನ ಕಾರ್ಯಕ್ರಮ ಅನುಷ್ಠಾನಕ್ಕಾಗಿ 7 ತಂಡಗಳನ್ನು ರಚಿಸಲಾಗಿದ್ದು, ಸ್ವತಃ ಡಿಡಿಪಿಐ ಎನ್‌.ಎಚ್‌.ನಾಗೂರ ಒಂದು ತಂಡದ ನೇತೃತ್ವ ವಹಿಸಿಕೊಂಡಿದ್ದಾರೆ. ಉಳಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಂಡಗಳ ಜವಾಬ್ದಾರಿ ವಹಿಸಿದ್ದು, ತಂಡದಲ್ಲಿ ಮೂರರಿಂದ ನಾಲ್ವರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ತಂಡಗಳ ಜವಾಬ್ದಾರಿ ಏನು:

ವಾರಕ್ಕೊಂದು ದಿನ ತಂಡ ನಿರ್ಧಿಷ್ಟ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಭೇಟಿನೀಡಿ ಸಮಗ್ರ ಮಾಹಿತಿ ಪಡೆಯಬೇಕು. ಮಕ್ಕಳ ಕಲಿಕಾ ಗತಿ ಗುರುತಿಸುವುದು, ಶಿಕ್ಷಕರ ಬೋಧನಾ ಗುಣಮಟ್ಟವನ್ನು ಪ್ರತ್ಯಕ್ಷವಾಗಿ ಮೌಲ್ಯಮಾಪನ ಮಾಡುವುದು, ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಹಾಕಿಕೊಂಡಿರುವ ಕಾರ್ಯಕ್ರಮಗಳು ಏನು ಎಂಬ ಬಗ್ಗೆ ಮಾಹಿತಿ ಪಡೆಯಬೇಕು.

ಜತೆಗೆ, ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆಯೇ, ಶೌಚಾಲಯಗಳು ಶುಚಿಯಾಗಿವೆಯೇ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇದೆಯೇ ಎಂಬ ಬಗ್ಗೆಯೂ ಖುದ್ದು ಪರಿಶೀಲಿಸಬೇಕು. ತಂಡದಲ್ಲಿ ಎಲ್ಲರೂ ಹಿರಿಯ ಶಿಕ್ಷಕರು ಹಾಗೂ ಅಧಿಕಾರಿಗಳೇ ಆಗಿರುವುದರಿಂದ ಮಕ್ಕಳ ಕಲಿಕೆಗೆ ಪೂರಕವಾದ ವಿಚಾರಗಳ ವಿನಿಯಮ ನಡೆಯಲಿದೆ.

ಪರೀಕ್ಷಾ ತಯಾರಿ ಹೇಗೆ, ಪರೀಕ್ಷಾ ಭಯದಿಂದ ಹೊರ ಬರುವುದು ಹೇಗೆ, ಒತ್ತಡ ನಿರ್ವಹಣೆ, ಸುಲಭ ಕಲಿಕಾ ವಿಧಾನಗಳ ಕುರಿತು ತಂಡದ ಸದಸ್ಯರು ವಿದ್ಯಾರ್ಥಿಗಳಿಗೆ ಸಲಹೆ ನೀಡಲಿದ್ದಾರೆ. ಜತೆಗೆ, ಶಿಕ್ಷಕರ ಬೋಧನಾ ಮಟ್ಟ ಸುಧಾರಣೆಗೆ ಸಲಹೆ ಸೂಚನೆಗಳನ್ನೂ ನೀಡಲಿದ್ದಾರೆ ಎಂದು ಶಾಲಾ ಸಂಚಲನ ಕಾರ್ಯಕ್ರಮದ ಮುಖ್ಯಸ್ಥ ಡಿಡಿಪಿಐ ಎನ್‌.ಎಚ್‌.ನಾಗೂರ ವಿವರಿಸಿದರು.

7 ತಂಡಗಳಿಗೆ 7 ಮಾರ್ಗಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರತಿ ಶಾಲೆಗಳಿಗೆ ಭೇಟಿ ನೀಡಬೇಕು. ಒಂದು ಶಾಲೆಯಲ್ಲಿ ಕನಿಷ್ಠ ಒಂದರಿಂದ ಒಂದೂವರೆ ತಾಸು ಇರಬೇಕು. ದಿನಕ್ಕೆ ಕನಿಷ್ಠ ನಾಲ್ಕು ಶಾಲೆಗಳಿಗೆ ತಂಡ ಭೇಟಿ ನೀಡಲಿದೆ. 5 ವಾರಗಳಲ್ಲಿ ಜಿಲ್ಲೆಯ ಎಲ್ಲ ಶಾಲೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ಡಿಡಿಪಿಐ ತಿಳಿಸಿದರು.

ತಾಲ್ಲೂಕಿನ ಎಲ್ಲ ಶಾಲೆಗಳ ಭೇಟಿ ಮುಗಿದ ನಂತರ ಅದೇದಿನ ಸಂಜೆ 5.30ಕ್ಕೆ ತಂಡದ ಎಲ್ಲ ಸದಸ್ಯರು ಒಂದೆಡೆ ಸೇರಿ, ಭೇಟಿವೇಳೆ ಕಂಡುಬಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ಅಂಶಗಳನ್ನು ಹಂಚಿಕೊಳ್ಳಲಿದ್ದಾರೆ. ಶಿಕ್ಷಕರು ತಡವಾಗಿ ಶಾಲೆಗೆ ಬರುವುದು, ಅನಧಿಕೃತ ಗೈರಾಗುವುದು ಹಾಗೂ ಬೋಧನೆಯಲ್ಲಿ ಲೋಪದೋಷಗಳು ಇದ್ದರೆ ಅಂತಹ ಶಿಕ್ಷಕರಿಗೆ ನೋಟಿಸ್‌ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT