ಶಿರೂರು ಲಕ್ಷ್ಮೀವರ ತೀರ್ಥರ ಸಾವು ಸಹಜ: ಅಂತಿಮ ಷರಾ ಬರೆದ ವೈದ್ಯರು

7

ಶಿರೂರು ಲಕ್ಷ್ಮೀವರ ತೀರ್ಥರ ಸಾವು ಸಹಜ: ಅಂತಿಮ ಷರಾ ಬರೆದ ವೈದ್ಯರು

Published:
Updated:
Deccan Herald

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ಅನುಮಾನಾಸ್ಪದ ಸಾವಿನ ಸಂಬಂಧ ಮಣಿಪಾಲದ ತಜ್ಞ ವೈದ್ಯರು ಅಂತಿಮ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದು, ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶಗಳಿಲ್ಲ; ಇದೊಂದು ಸಹಜ ಸಾವು ಎಂದು ವರದಿ ನೀಡಿದ್ದಾರೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಮರಣೋತ್ತರ ಪರೀಕ್ಷೆ ಹಾಗೂ ಎಫ್‌ಎಸ್‌ಎಲ್‌ ವರದಿಯನ್ನು ಪರಿಶೀಲಿಸಿ ಅಂತಿಮ ವರದಿಯನ್ನು ಸಿದ್ಧಪಡಿಸಿರುವ ವೈದ್ಯರು, ಶಿರೂರು ಶ್ರೀಗಳು ಲಿವರ್ ಸಿರಾಸಿಸ್‌ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಷರಾ ಬರೆದಿದ್ದಾರೆ ಎನ್ನಲಾಗಿದೆ.

ವೈದ್ಯರು ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರಿಗೆ ಸಲ್ಲಿಸಿದ್ದು, ತನಿಖಾಧಿಕಾರಿ ಕಾರ್ಕಳ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರು ಪ್ರಕರಣದ ತನಿಖೆ ನಡೆಸಿ ಕುಂದಾಪುರದ ಉಪ ವಿಭಾಗಾಧಿಕಾರಿ ಭೂ ಬಾಲನ್ಅವರಿಗೆ ಹಸ್ತಾಂತರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ ಹಿನ್ನೆಲೆ

ಜೂನ್ 19ರಂದು ಶಿರೂರು ಲಕ್ಷ್ಮೀವರ ತೀರ್ಥರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಶ್ರೀಗಳ ಸಾವಿಗೆ ವಿಷಪ್ರಾಷನ ಕಾರಣವಿರಬಹುದು ಎಂದು ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಶಂಕೆ ವ್ಯಕ್ತಪಡಿಸಿದ್ದರು. ಬಳಿಕ ಶ್ರೀಗಳ ದೇಹವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ಅಂಗಾಂಗಳನ್ನು ಎಫ್‌ಎಸ್‌ಎಲ್‌ ಪರೀಕ್ಷೆಗೆ ರವಾನೆ ಮಾಡಲಾಗಿತ್ತು.

ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್ಎಸ್ಎಲ್ ವರದಿಯಲ್ಲಿ ಶ್ರೀಗಳ ದೇಹದಲ್ಲಿ ವಿಷ ಪತ್ತೆಯಾಗದಿರುವುದು ಬಹಿರಂಗವಾಗಿತ್ತು.

ಶಿರೂರು ಶ್ರೀಗಳು ಮೃತಪಟ್ಟ ದಿನ ದೇಹದಲ್ಲಿ ವಿಷಕಾರಿ ಅಂಶಗಳಿವೆ ಎಂದು ಯಾವ ಆಧಾರದಲ್ಲಿ ಹೇಳಿಕೆ ನೀಡಲಾಗಿತ್ತು ಎಂದು ಮಣಿಪಾಲ ವೈದ್ಯರಿಗೆ ಪೊಲೀಸರು ಪ್ರಶ್ನಾವಳಿ ಕಳುಹಿಸಿದ್ದರು. ಅಂತಿಮವಾಗಿ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿರುವ ವೈದ್ಯರು ಅಂತಿಮ ವರದಿಯನ್ನೂ ಸಲ್ಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !