ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೈನಂದಿನ ಬದುಕಿನಲ್ಲಿ ಜಾನಪದ ಹಾಸುಹೊಕ್ಕು: ಲಾಲಾಜಿ ಆರ್ ಮೆಂಡನ್

ಶಿರ್ವದಲ್ಲಿ ಜಾನಪದ ಕಲರವ
Last Updated 27 ನವೆಂಬರ್ 2022, 2:50 IST
ಅಕ್ಷರ ಗಾತ್ರ

ಶಿರ್ವ: ‘ನಮ್ಮ ಮೂಲ ನಿವಾಸಿಗಳಿಂದ ಬಳುವಳಿಯಾಗಿ ಬಂದಿರುವ ಜಾನಪದ ಸಂಪತ್ತು ಇಲ್ಲಿನ ಮಣ್ಣಿನಲ್ಲಿ ಮಿಳಿತಗೊಂಡು ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಆಚರಣೆಗಳಲ್ಲೂ ಜನಪದರ ಆಚಾರ ವಿಚಾರಗಳು ಉಳಿದುಕೊಂಡು ಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾನಪದ ಪ್ರಕಾರಗಳ ಅಭಿವೃದ್ಧಿಗೆ ಹಿಂದಿಗಿಂತಲೂ ಹೆಚ್ಚು ಒತ್ತು ನೀಡುತ್ತಿದೆ ಎಂದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಶಿರ್ವ ಹಿಂದು ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವತಿಯಿಂದ ಜರುಗಿದ ಜಾನಪದ ಕಲರವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿ, ‘ಮನ ಮುಟ್ಟುವ ಗುಣವಿರುವ ಜಾನಪದ ಕಲೆ, ಸಾಹಿತ್ಯ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ಜನಪದೀಯ ವಿಷಯಗಳ ದಾಖಲೀಕರಣ ಆಗಬೇಕಾಗಿದೆ’ ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ. ವೈ ಭಾಸ್ಕರ್ ಶೆಟ್ಟಿ ಮಾತನಾಡಿ, ‘ಪೊಲೀಸ್ ಇಲಾಖೆ ಪರಿಚಯಿಸಿರುವ ಸ್ಟೂಡೆಂಟ್ ಪೋಲಿಸ್ ಕೆಡೆಟ್ ಯೋಜನೆಗೆ ಆಯ್ಕೆಯಾದ ಜಿಲ್ಲೆಯ 24 ಪ್ರೌಢಶಾಲೆಗಳಲ್ಲಿ ನಮ್ಮ ಸಂಸ್ಥೆ ಏಕೈಕ ಅನುದಾನಿತ ಶಿಕ್ಷಣ ಸಂಸ್ಥೆಯಾಗಿದೆ ಎಂಬ ಹೆಗ್ಗಳಿಕೆ ಹೊಂದಿದ್ದೇವೆ’ ಎಂದರು.

ಶಿರ್ವ ವಿದ್ಯಾವರ್ಧಕ ಸಂಘದ ಸಂಚಾಲಕ ವಿ. ಸುಬ್ಬಯ್ಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಾನಪದ ಕಲಾವಿದ ಶಂಕರ್ದಾಸ್ ಚೆಂಡ್ಕಳ, ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಎ. ಮಾತನಾಡಿದರು.

ನಂದಳಿಕೆ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರ ಸುಹಾಸ್ ಹೆಗ್ಡೆ, ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷ ರತನ್ ಕುಮಾರ್ ಶೆಟ್ಟಿ, ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮಾನಂಧ ಶೆಟ್ಟಿಗಾರ್, ಎಂ.ಎಸ್.ಆರ್.ಎಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಕಾರ್ಯಕ್ರಮದ ಸಂಯೋಜಕ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ವಿ. ಸುಬ್ಬಯ್ಯ ಹೆಗ್ಡೆ ಸ್ವಾಗತಿಸಿದರು. ಹಿಂದೂ ಪ್ರೌಢಶಾಲಾ ಮುಖ್ಯ ಶಿಕ್ಷಕಿ ವಸಂತಿ ವಂದಿಸಿದರು.

ಸುಪ್ರಿತಾ ಶೆಟ್ಟಿ ಮತ್ತು ಶಿವರಾಜ್ ಸಿ. ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳು ಶಿಕ್ಷಕರು ತುಳುನಾಡಿನ ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನಸೆಳೆದರು.

ವಿದ್ಯಾರ್ಥಿಗಳು ಕಂಸಾಳೆ, ವೀರಗಾಸೆ, ಯಕ್ಷಗಾನ, ಪೂಜಾ ಕುಣಿತ, ಭಜನೆ, ಕಂಗೀಲು, ಹುಲಿ ಕುಣಿತ, ಚೆಂಡೆ, ನಾಸಿಕ್ ಬ್ಯಾಂಡ್, ಕೀಲು ಕುದುರೆ, ಕೋಳಿ ಅಂಕ, ಕರಗ ಕೋಲಾಟ, ಕಂಬಳ ಸಹಿತ ವಿವಿಧ ಜನಪದ ಪ್ರಕಾರಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT