ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಭಾ ಕರಂದ್ಲಾಜೆಗೆ ಒಲಿದ ಕೇಂದ್ರ ಮಂತ್ರಿಗಿರಿ

ಸತತ 2 ಬಾರಿ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
Last Updated 7 ಜುಲೈ 2021, 13:54 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ದೊರೆತಿದೆ. ಬುಧವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಶೋಭಾ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ಟೋಬರ್‌ 23, 1966ರಲ್ಲಿ ಮೋನಪ್ಪ ಗೌಡ ಹಾಗೂ ಪೂವಕ್ಕ ದಂಪತಿಯ ಪುತ್ರಿಯಾಗಿ ಜನಿಸಿದ ಶೋಭಾ ಕರಂದ್ಲಾಜೆ ಸಮಾಜಶಾಸ್ತ್ರ ವಿಷಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಶೋಭಾ ರಾಜಕೀಯ ಹಾದಿ

2004 ರಿಂದ 2008ರವರೆಗೆ ವಿಧಾನ ಪರಿಷತ್ ಸದಸ್ಯೆಯಾಗಿದ್ದ ಶೋಭಾ ಕರಂದ್ಲಾಜೆ, 2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಯಶವಂತ ಪುರ ಕ್ಷೇತ್ರದಿಂದ ಗೆದ್ದು ಶಾಸಕಿಯಾದರು. ಈ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಆಹಾರ, ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಹಾಗೂ ಇಂಧನ ಸಚಿವೆಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸಂಸತ್‌ ಪ್ರವೇಶ

ರಾಜ್ಯ ರಾಜಕಾರಣದ ಬಳಿಕ 2014ರಲ್ಲಿ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲಿಯೇ ಗೆಲುವು ಪಡೆದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶೋಭಾ ಕರಂದ್ಲಾಜೆ (5,81,168 ಮತ) ಕಾಂಗ್ರೆಸ್‌ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ (3,99,525) ವಿರುದ್ಧ 1,81,643 ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದರು. ಈ ಕ್ಷೇತ್ರದಲ್ಲಿ ಮಹಿಳೆಯೊಬ್ಬರು ಗೆದ್ದ ಅತಿ ದೊಡ್ಡ ಅಂತರದ ಗೆಲುವು ಇದಾಗಿತ್ತು.

ಸೆ.1, 2014ರಿಂದ ಡಿ.3, 2014ರವರೆಗೆ ಮಹಿಳಾ ಸಬಲೀಕರಣ ಸಮಿತಿಯಲ್ಲಿದ್ದರು. ರಕ್ಷಣಾ ಸಚಿವಾಲಯದ ಸ್ಟಾಂಡಿಂಗ್ ಕಮಿಟಿ, ಕೃಷಿ ಸಚಿವಾಲಯದ ಸಮಾಲೋಚನಾ ಸಮಿತಿ ಹಾಗೂ ಭೂಸ್ವಾಧೀನ, ಪುನರ್ವಸತಿ ಹಾಗೂ ಪರಿಹಾರ ಹಂಚಿಕೆ ಸಂಬಂಧ ರಚನೆಯಾಗಿದ್ದ ಜಂಟಿ ಸಮಿತಿಯಲ್ಲಿಯೂ ಕಾರ್ಯ ನಿರ್ವಹಿಸಿದ್ದರು.

ಎರಡನೇ ಬಾರಿಗೆ ಗೆಲುವಿನ ಸಿಹಿ

2019ರ ಲೋಕಸಭಾ ಚುನಾವಣೆಯಲ್ಲೂ ಅದೃಷ್ಟ ಶೋಭಾ ಅವರ ಕೈ ಹಿಡಿಯಿತು. ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿಪ್ರಮೋದ್ ಮಧ್ವರಾಜ್ (ಪಡೆದ ಮತ 3,69,317) ಅವರ ವಿರುದ್ಧ ಸ್ಪರ್ಧಿಸಿ ಬರೋಬ್ಬರಿ 7,18,916 ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಶೋಭಾ ಅವರ ಗೆಲುವಿನ ಅಂತರ 3,49,599 ಮತಗಳು. ಕಳೆದ ಚುನಾವಣೆಗೆ ಹೋಲಿಸಿದರೆ ಗೆಲುವಿನ ಅಂತರವನ್ನು 1,81,643 ಮತಗಳಿಗೆ ಹಿಗ್ಗಿಸಿಕೊಂಡರು. ಪ್ರಸಕ್ತ ಅವಧಿಯಲ್ಲಿ ಇಂಧನ, ಮಹಿಳಾ ಸಬಲೀಕರಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎರಡನೇ ಅವಧಿಗೆ ಆಯ್ಕೆಯಾಗಿದ್ದ ಶೋಭಾ ಕರಂದ್ಲಾಜೆಗೆ ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವೆ ಸ್ಥಾನ ದೊರೆಯುವ ನಿರೀಕ್ಷೆ ದಟ್ಟವಾಗಿತ್ತು. ಆದರೆ, ನಿರೀಕ್ಷೆಗಳು ಹುಸಿಯಾಗಿ ಕರಾವಳಿಯವರೇ ಆದ ಡಿ.ವಿ.ಸದಾನಂದ ಗೌಡರಿಗೆ ಸಚಿವ ಸ್ಥಾನ ಒಲಿದಿತ್ತು. ಈಗ ರಾಜಕೀಯ ಚಿತ್ರಣ ಬದಲಾಗಿದೆ. ಸದಾನಂದ ಗೌಡರು ಸಚಿವ ಸ್ಥಾನ ಕಳೆದುಕೊಂಡರೆ, ಶೋಭಾ ಕರಂದ್ಲಾಜೆ ಸಚಿವೆ ಸ್ಥಾನ ದಕ್ಕಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT