ಬುಧವಾರ, ಆಗಸ್ಟ್ 17, 2022
25 °C

ರೈತರ ಹೋರಾಟದ ಹಿಂದೆ ತುಕ್ಡೆ ಗ್ಯಾಂಗ್‌: ಸಂಸದೆ ಶೋಭಾ ಕರಂದ್ಲಾಜೆ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದೆಹಲಿಯಲ್ಲಿ ರೈತರ ಹೋರಾಟದ ಹಿಂದೆ ದೇಶ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ತುಕ್ಡೆ ಗ್ಯಾಂಗ್‌ ಕೈವಾಡವಿದೆ. ಜೆಎನ್‌ಯುನಲ್ಲಿ ಪಾಕ್‌ಪರ ಘೋಷಣೆ ಕೂಗಿ ಬಂಧನಕ್ಕೆ ಒಳಗಾದವರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಯೋತ್ಪಾದನೆ ನಡೆಸಿ ಜೈಲಿನಲ್ಲಿರುವವರ ಬಿಡುಗಡೆಗೆ ರೈತರ ಪ್ರತಿಭಟನೆಯಲ್ಲಿ ಒತ್ತಾಯಗಳು ಕೇಳಿಬರುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ದೆಹಲಿಯ ರೈತರ ಹೋರಾಟಕ್ಕೂ, ಜೆಎನ್‌ಯು ಬಂಧನಕೋರರ ಬಿಡುಗಡೆಗೆ ಒತ್ತಾಯಿಸುತ್ತಿರುವುದರ ಹಿಂದಿನ ಸಂಬಂಧ ಏನು ಎಂದು ಪ್ರಶ್ನಿಸಿದ ಅವರು, ರೈತರ ಹೆಸರಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.

ರೈತರ ಹೋರಾಟ ಬೆಂಬಲಿಸುತ್ತಿರುವ ಹಾಗೂ ಕೃಷಿ ಕಾಯ್ದೆಗಳನ್ನು ವಿರೋಧಿಸುತ್ತಿರುವ ವಿರೋಧ ಪಕ್ಷಗಳು ಹಿಂದೆ ಎಪಿಎಂಸಿ ಕಾಯ್ದೆಯ ವಿರುದ್ಧವಾಗಿದ್ದವು. ಅಧಿಕಾರಕ್ಕೆ ಬಂದರೆ ಎಪಿಎಂಸಿ ಕಾಯ್ದೆ ರದ್ದು ಮಾಡುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಎಪಿಎಂಸಿ ಕಾಯ್ದೆ ರದ್ದು ಮಾಡುವ ಸಂಬಂಧ ಎಲ್ಲ ರಾಜ್ಯಗಳಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದ್ದರು. ಈಗ ರಾಜಕೀಯ ಕಾರಣಕ್ಕಾಗಿ ರೈತ ಕಾಯ್ದೆಯನ್ನು ವಿರೋಧಿಸುತ್ತಿವೆ ಎಂದು ಟೀಕಿಸಿದರು.

ಪಂಜಾಬ್‌ನಲ್ಲಿ ಎಪಿಎಂಸಿ ಲಾಬಿ ಪ್ರಬಲವಾಗಿದ್ದು, ಪಂಜಾಬ್ ಸರ್ಕಾರ ಮಧ್ಯವರ್ತಿಗಳ ಲಾಬಿಗೆ ಮಣಿದು ರೈತರ ಹೋರಾಟಕ್ಕೆ ಬೆಂಬಲ ನೀಡಿದೆ. ರೈತರ ಹಿತವನ್ನು ಬಲಿಕೊಟ್ಟು ದಲ್ಲಾಳಿಗಳ ಹಿತ ಕಾಯುತ್ತಿದೆ ಎಂದು ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಮಧ್ಯವರ್ತಿಗಳ ಹಾವಳಿ ತಡೆಯಲು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸರ್ಕಾರ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ರೈತ ಬೆಳೆದ ಬೆಳೆಯನ್ನು ಹೆಚ್ಚು ಲಾಭ ಸಿಗುವ ಕಡೆಗಳಲ್ಲಿ ಮಾರಾಟ ಮಾಡಲು ಕಾಯ್ದೆಯಲ್ಲಿ ಅವಕಾಶ ನೀಡಲಾಗಿದೆ. 2023ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣ ಮಾಡುವುದು ಈ ಕಾಯ್ದೆಯ ಹಿಂದಿರುವ ಪ್ರಮುಖ ಉದ್ದೇಶ ಎಂದರು.

ಗುತ್ತಿಗೆ ಆಧಾರಿತ ಕೃಷಿ ರಾಜ್ಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಹಾಸನದಲ್ಲಿ ಕೆಲವು ಖಾಸಗಿ ಕಂಪೆನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡು ವಿದೇಶಕ್ಕೆ ರಫ್ತಾತುವ ಸೌತೆ ಬೆಳೆಯುತ್ತಿದ್ದಾರೆ. ಕೃಷಿ ಕಾಯ್ದೆಯಲ್ಲಿ ಗುತ್ತಿಗೆ ಆಧಾರಿತ ಕೃಷಿಗೆ ಕಾನೂನಿನ ಮಾನ್ಯತೆ ಸಿಗಲಿದ್ದು, ರೈತರು ಉದ್ಯಮಿಗಳಿಂದ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದರು.

‘ಕೋಡಿಹಳ್ಳಿ ರೈತಪರ ಹೋರಾಟದ ಮೇಲೆ ಸಂಶಯ’
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಏಕಾಏಕಿ ಸಾರಿಗೆ ಹೋರಾಟಗಾರರಾಗಿ ಬದಲಾಗಿದ್ದಾರೆ. ಕೋಡಿಹಳ್ಳಿ ಅವರ ಹೋರಾಟದಲ್ಲಿ ಕಾಂಗ್ರೆಸ್‌ ನಾಯಕರ ಹಸ್ತಕ್ಷೇಪ ಕಾಣುತ್ತಿದ್ದು, ಅವರ ರೈತಪರ ಹೋರಾಟದ ಬಗ್ಗೆಯೇ ಸಂಶಯ ಮೂಡುತ್ತಿದೆ. ಕಾಂಗ್ರೆಸ್‌ನ ಅಣತಿಯಂತೆ ಕೋಡಿಹಳ್ಳಿ ನಡೆದುಕೊಳ್ಳುತ್ತಿದ್ದಾರೆ ಎಂಬ ಸಂಶಯವಿದೆ ಎಂದು ಸಂಶದೆ ಶೋಭಾ ಕರಂದ್ಲಾಜೆ ಸಂಶಯ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಶಾಸಕರ ರಘುಪತಿ ಭಟ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು