ಬಹಿರಂಗವಾಗದ ಶಿರೂರು ಶ್ರೀ ಸಾವಿನ ಸತ್ಯ

7
ಲಕ್ಷ್ಮೀವರ ತೀರ್ತರು ಅನುಮಾನಾಸ್ಪದವಾಗಿ ಮೃತಪಟ್ಟು ತಿಂಗಳಾಯ್ತು; ಇನ್ನೂ ಬಾರದ ಎಫ್ಎಸ್‌ಎಲ್‌ ವರದಿ

ಬಹಿರಂಗವಾಗದ ಶಿರೂರು ಶ್ರೀ ಸಾವಿನ ಸತ್ಯ

Published:
Updated:
Deccan Herald

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರು ಅನುಮಾನಾಸ್ಪದವಾಗಿ ಮೃತಪಟ್ಟು ತಿಂಗಳು ಕಳೆದರೂ ಸಾವಿನ ಹಿಂದಿರುವ ಸತ್ಯ ಮಾತ್ರ ಇದುವರೆಗೂ ಬಯಲಾಗಿಲ್ಲ.

ಪೊಲೀಸರು ‘ತನಿಖೆ ಪ್ರಗತಿಯಲ್ಲಿದೆ’ ಎಂಬ ಅಂಶವನ್ನು ಬಹಿರಂಗಪಡಿಸಿದ್ದು ಬಿಟ್ಟರೆ ಬೇರೆನನ್ನೂ ಹೇಳುತ್ತಿಲ್ಲ. ಶ್ರೀಗಳ ಮರಣೋತ್ತರ ಪರೀಕ್ಷಾ ವರದಿ ಪೊಲೀಸರ ಕೈ ಸೇರಿದ್ದರೂ ಸಾವಿನ ಕಾರಣ ಮಾತ್ರ ನಿಗೂಢವಾಗಿದೆ. ಶ್ರೀಗಳದ್ದು ಸಹಜ ಸಾವೇ? ಅಸಹಜ ಸಾವೇ? ಎಂಬುದು ಕಗ್ಗಂಟಾಗಿಯೇ ಉಳಿದಿದೆ.

ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ತನಿಖೆ ಸಷ್ಪವಾದ ದಿಕ್ಕಿನಲ್ಲಿ ಸಾಗಲಿದೆ. ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿಯನ್ನು ತಾಳೆಹಾಕಿ ಸಾವಿಗೆ ಕಾರಣ ತಿಳಿಯಬಹುದು. ನಂತರ ಪ್ರಕರಣದ ಸ್ವರೂಪ ಕೂಡ ಬದಲಾಗಲಿದೆ. ಅಲ್ಲಿಯವರೆಗೂ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಗಳು.

ತಿಂಗಳಾದರೂ ಎಫ್‌ಎಸ್‌ಎಲ್‌ ವರದಿ ಬಾರದಿರುವುದು ಪ್ರಕರಣದ ತನಿಖೆಯ ಹಿನ್ನಡೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಷ್ಠಮಠಗಳ ಸ್ವಾಮೀಜಿಗಳಲ್ಲೊಬ್ಬರಾಗಿದ್ದ ಶಿರೂರು ಶ್ರೀಗಳ ಸಾವಿನ ತನಿಖೆಯ ವಿಚಾರದಲ್ಲಿ ಆಗುತ್ತಿರುವ ವಿಳಂಬಕ್ಕೆ ಶ್ರೀಗಳ ಆಪ್ತರು, ಅಭಿಮಾನಿಗಳು, ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.

ಅನುಮಾನಗಳು:  ಈಚೆಗೆ ನಡೆದ ಶಿರೂರು ಶ್ರೀ ಅಭಿಮಾನಿ ಸಮಿತಿ ಸಭೆಯಲ್ಲಿ ವಕೀಲ ರವಿಕಿರಣ್ ಮುರ್ಡೇಶ್ವರ್‌ ಮಾತನಾಡಿ, ‘ಕೆಲವು ಮಾದರಿಯ ‘ವಿಷ’ಗಳು ಬಹುಬೇಗನೆ ವಿಷದ ಅಂಶವನ್ನೇ ಕಳೆದುಕೊಳ್ಳುತ್ತವೆ. ಅದರಂತೆ, ಶ್ರೀಗಳ ದೇಹದಲ್ಲಿ ವಿಷದ ಅಂಶವಿದ್ದರೂ, ತನಿಖೆಯಲ್ಲಿ ವಿಳಂಬವಾದರೆ ಅದು ಸತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ಶೀಘ್ರ ಎಫ್‌ಎಸ್‌ಎಲ್‌ ವರದಿ ನೀಡಬೇಕು. ಸಾವಿಗೆ ಕಾರಣ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದರು.

ಇದೇವೇಳೆ ಶಿರೂರು ಶ್ರೀಗಳ ಸಾವಿನ ಸಂಬಂಧ ಇದುವರೆಗೂ ‘ಅಸ್ವಾಭಾವಿಕ ಸಾವು’ ಎಂದಷ್ಟೇ ದೂರು ದಾಖಲಾಗಿದೆ. ಇದರಿಂದ ಮುಂದೆ ಪ್ರಕರಣ ದುರ್ಬಲವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ‘ಅಪರಾಧ ನಡೆದಿರಬಹುದು’ ಎಂಬ ಸಂಶಯದಡಿ ಯಾರಾದರೂ ದೂರು ನೀಡಿ, ಕಾನೂನುಬದ್ಧ ಎಫ್‌ಐಆರ್ ದಾಖಲಾದರೆ, ಪ್ರಕರಣಕ್ಕೆ ಬಲ ಬಂದಾತಾಗುತ್ತದೆ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗಲು ಪೊಲೀಸರಿಗೆ ಭೂಮಿಕೆ ಸಿದ್ಧಮಾಡಿಕೊಟ್ಟಂತಾಗುತ್ತದೆ ಎಂದು ವಕೀಲರಾದ ಮುರ್ಡೇಶ್ವರ ಅಭಿಪ್ರಾಯಪಟ್ಟಿದ್ದರು.

ಒಟ್ಟಾರೆ, ಶಿರೂರು ಶ್ರೀಗಳ ಸಾವಿಗೆ ಕಾರಣ ಏನು ಎಂಬುದು ಶೀಘ್ರವಾಗಿ ಬಹಿರಂಗವಾಗಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.

‘ತಿಂಗಳಾಯಿತು ಸಾವಿಗೆ’

ಜುಲೈ 19ರಂದು ಬೆಳಿಗ್ಗೆ 8.30ಕ್ಕೆ ಶಿರೂರು ಲಕ್ಷ್ಮೀವರ ತೀರ್ಥರು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಶ್ರೀಗಳ ಸಾವಿಗೆ ವಿಷಪ್ರಾಷನ ಕಾರಣ ಇರಬಹುದು ಎಂದು ಆಸ್ಪತ್ರೆಯ ಅಧೀಕ್ಷಕರು ಸಂಶಯ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಯಾಗಿತ್ತು. ಶ್ರೀಗಳ ಸಾವು ಸಹಜವಾ ಅಥವಾ ಸಾವಿನ ಹಿಂದೆ ಕೈವಾಡವಿದೆಯಾ ಎಂಬ ಅನುಮಾನ ಸೃಷ್ಟಿಯಾಗಿತ್ತು.

ಎಫ್‌ಎಸ್‌ಎಲ್‌ ವರದಿಯತ್ತ ಚಿತ್ತ...

ಕೃಷ್ಣಮಠದ ಪರಿಸರದಲ್ಲಿರುವ ಶಿರೂರು ಮಠವನ್ನು ಪೊಲೀಸರು ದ್ವಂದ್ವಮಠವಾದ ಸೋದೆ ಮಠದ ಸುಪರ್ದಿಗೆ ಒಪ್ಪಿಸಿದ್ದಾರೆ. ಹಿರಿಯಡಕದಲ್ಲಿರುವ ಮೂಲಮಠ ಇನ್ನೂ ಪೊಲೀಸರ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ವಶಪಡಿಸಿಕೊಂಡ ಮಠದ ಡಿವಿಆರ್‌ಗಳ ಪರಿಶೀಲನೆ ನಡೆಸಲಾಗಿದೆ. ಅಂತಿಮವಾಗಿ ಎಫ್‌ಎಸ್‌ಎಲ್‌ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !