ನವದೆಹಲಿ : ಆಫ್‌ಸ್ಪಿನ್–ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರನ್ನು ಮುಂದಿನ ತಿಂಗಳು ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಗುರುವಾರ ಅಂತಿಮಗೊಳಿಸಲಾದ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದೆ. ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುವರು. ಹಾರ್ದಿಕ್ ಪಾಂಡ್ಯ ಉಪನಾಯಕರಾಗಿದ್ದಾರೆ.
ಹೋದ ತಿಂಗಳು ಪ್ರಕಟಿಸಲಾಗಿದ್ದ ಸಂಭವನೀಯರ ತಂಡದಲ್ಲಿ ಎಡಗೈ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಇದ್ದರು. ಆದರೆ ಅಶ್ವಿನ್‌ಗೆ ಸ್ಥಾನ ನೀಡಿರಲಿಲ್ಲ. ಏಷ್ಯಾ ಕಪ್ ಟೂರ್ನಿ ಸಂದರ್ಭದಲ್ಲಿ ಅಕ್ಷರ್ ಗಾಯಗೊಂಡಿದ್ದರು. ಆಗ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಅಕ್ಷರ್ ಇಲ್ಲಿಯವರೆಗೆ ಚೇತರಿಸಿಕೊಳ್ಳದ ಕಾರಣಕ್ಕೆ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಅವಕಾಶವನ್ನೂ ನೀಡಲಾಗಿದೆ.
‘ಎಡಗಾಲಿನ ತೊಡೆಯ ಸ್ನಾಯುಸೆಳೆತದಿಂದ ಅವರಿನ್ನೂ ಚೇತರಿಸಿಕೊಂಡಿಲ್ಲ. ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಅವರು ಗಾಯಗೊಂಡಿದ್ದರು. ನಂತರದ ಪಂದ್ಯಗಳಲ್ಲಿ ಆಡಿರಲಿಲ್ಲ. ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಅಕ್ಷರ್ ಬದಲಿಗೆ ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯಾ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿಯೂ ಅವರು ಚೆನ್ನಾಗಿ ಆಡಿದ್ದರು’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತ ತಂಡವು ಇದೇ 30ರಂದು ಗುವಾಹಟಿಯಲ್ಲಿ ನಡೆಯುವ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ.
ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಆರ್. ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್. ಮುಖ್ಯಕೋಚ್; ರಾಹುಲ್ ದ್ರಾವಿಡ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.