ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಬ್ರಹ್ಮಣ್ಯ ಮಠದ ಶ್ರೀಗಳಿಗೆ ಕಿರುಕುಳ ಸಲ್ಲದು: ವಿಶ್ವೇಶ ತೀರ್ಥ ಸ್ವಾಮೀಜಿ

Last Updated 14 ಅಕ್ಟೋಬರ್ 2018, 12:42 IST
ಅಕ್ಷರ ಗಾತ್ರ

ಉಡುಪಿ: ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ಶ್ರೀಗಳಿಗೆ ದೇವಸ್ಥಾನದ ಕೆಲವರು ಕಿರುಕುಳ ನೀಡುತ್ತಿದ್ದು, ತಕ್ಷಣ ನಿಲ್ಲಿಸಬೇಕು. ದೇವಸ್ಥಾನ ಹಾಗೂ ಮಠಗಳು ಧಾರ್ಮಿಕ ಸಂಸ್ಥೆಗಳಾಗಿದ್ದು, ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಕಿವಿಮಾತು ಹೇಳಿದರು.

ಶ್ರೀಕೃಷ್ಣಮಠದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶ್ರೀಗಳು, ‘ಸುಬ್ರಹ್ಮಣ್ಯ ಮಠಕ್ಕೆ ನೀರಿನ ಸಂಪರ್ಕ ಸ್ಥಗಿತಗೊಳಿಸಲಾಗಿದ್ದು, ಗೋವುಗಳಿಗೆ ಸಮಸ್ಯೆ ಎದುರಾಗಿದೆ. ಉದ್ದೇಶಪೂರ್ವಕವಾಗಿ ಶ್ರೀಗಳ ಪೂಜಾ ಕೈಂಕರ್ಯಕ್ಕೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುಬ್ರಹ್ಮಣ್ಯ ಮಠದಲ್ಲಿ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಸೇವೆಗಳನ್ನು ನಡೆಸುವುದು ತಪ್ಪಲ್ಲ. ಮಠದ ವಿರುದ್ಧ ಅಪಪ್ರಚಾರ ಸಲ್ಲದು. ಸುಬ್ರಹ್ಮಣ್ಯ ಶ್ರೀಗಳ ಹೋರಾಟಕ್ಕೆ ಅಷ್ಟಮಠಾಧೀಶರ ಬೆಂಬಲವಿದೆ ಎಂದು ತಿಳಿಸಿದರು.

ಸುಬ್ರಹ್ಮಣ ದೇವಸ್ಥಾನದಲ್ಲೂ ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಸೇವೆ ಮುಂದುವರಿಯಲಿ. ಇದಕ್ಕೆ ಯಾರ ಆಕ್ಷೇಪವೂ ಇಲ್ಲ. ಭಕ್ತರು ಇಷ್ಟಬಂದ ಕಡೆಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಸಮಾಜಕ್ಕೆ ಹಾನಿಕಾರವಲ್ಲದ ಕಾರ್ಯಗಳಿಗೆ ಯಾರೂ ಅಡ್ಡಿ ಮಾಡಬಾರದು ಎಂದು ಸ್ವಾಮೀಜಿ ಕಿವಿಮಾತು ಹೇಳಿದರು.

ಹಿಂದೆ, ಸುಬ್ರಹ್ಮಣ್ಯ ಕ್ಷೇತ್ರವು ಮಠದ ಸ್ವಾಧೀನಕ್ಕೆ ಒಳಪಟ್ಟಿತ್ತು. ಮಠವೇ ಆಡಳಿತ ನಡೆಸುತ್ತಿತ್ತು. ಈಗ ವ್ಯವಸ್ಥೆ ಬದಲಾಗಿದ್ದು, ಅದರ ವಿರುದ್ಧ ಮಾತನಾಡುವುದಿಲ್ಲ. ಮಠ ಹಾಗೂ ದೇವಸ್ಥಾನಗಳ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದು ಪೇಜಾವರ ಶ್ರೀಗಳು ಚಾಟಿ ಬೀಸಿದರು.

ನವರಾತ್ರಿ ಮುಗಿದ ಕೂಡಲೇ ಸುಬ್ರಹ್ಮಣ್ಯಕ್ಕೆ ತೆರಳಿ ಗೊಂದಲ ಬಗೆಹರಿಸಲು ಯತ್ನಿಸುತ್ತೇನೆ. ಅದಮಾರು ಮಠದ ಕಿರಿಯ ಯತಿಗಳು ಸುಬ್ರಹ್ಮಣ್ಯ ಮಠಕ್ಕೆ ತೆರಳಿದ್ದಾರೆ. ಶೀಘ್ರವೇ ಸೋದೆ ಮಠದ ಶ್ರೀಗಳು ಕರಾವಳಿಯ ಮಧ್ವ ಮಠಾಧೀಶರು ತೆರಳಲಿದ್ದಾರೆ ಎಂದರು.

‘ಸೂಕ್ತ ವಟು ಸಿಕ್ಕಕೂಡಲೇ ಉತ್ತರಾಧಿಕಾರಿ ನೇಮಕ’

ಶಿರೂರು ಮಠಕ್ಕೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆಯುತ್ತಿದ್ದು, ಆಯ್ಕೆ ಅಂತಿಮವಾಗಿಲ್ಲ. ನೈತಿಕತೆ ಉಳಿಸಿಕೊಂಡು ಹೋಗುವಂತಹ ಯೋಗ್ಯ ವಟು ಮುಂದಿನ ಸ್ವಾಮೀಜಿ ಆಗಬೇಕು ಎಂಬುದು ಸ್ಪಷ್ಟ ನಿಲುವು. ಜತೆಗೆ, ವಟುವಿನ ಪೋಷಕರು ಒಪ್ಪಬೇಕು. ಸಂಸ್ಕೃತ ವಿದ್ಯೆ ಕಲಿತಿರಬೇಕು. ಜಾತಕ ಕೂಡಿಬರಬೇಕು. ನಂತರವಷ್ಟೆ ಸ್ವಾಮೀಜಿ ನೇಮಕ ಮಾಡಲಾಗುವುದು ಎಂದು ಪೇಜಾವರ ಶ್ರೀಗಳು ತಿಳಿಸಿದರು.

ಶಬರಿಮಲೆಗೆ ಮಹಿಳೆಯರು ಭೇಟಿ ನೀಡುವುದಕ್ಕೆ ಯಾವ ಆಕ್ಷೇಪವಿಲ್ಲ. ಕೃಷ್ಣದೇವರ ದರ್ಶನಕ್ಕೂ ಮಹಿಳೆಯರು ಬರುತ್ತಾರೆ. ದೇವಸ್ಥಾನಗಳ ಸಂಪ್ರದಾಯಗಳು ಬೇರೆ ಬೇರೆ ಇದೆ. ಈ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡುವುದಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ವಿವಾದವಿದ್ದು, ಶಬರಿಮಲೆ ದೇವಸ್ಥಾನ ಬಗೆಹರಿಸಿಕೊಳ್ಳಲಿದೆ ಎಂದು ಪೇಜಾವರ ಶ್ರೀಗಳು ಅಭಿಪ್ರಾಯಪಟ್ಟರು.

ಈ ಸಂದರ್ಭ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು, ಸೋದೆಮಠದ ವಿಶ್ವವಲ್ಲಭ ಶ್ರೀಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT