ಭಾನುವಾರ, ಡಿಸೆಂಬರ್ 8, 2019
25 °C
ದಕ್ಷಿಣ ಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನದ ಸಮಾರೋಪ ಸಮಾರಂಭ

ಶ್ರೀಕೃಷ್ಣ ವೇದಪ್ರಿಯ: ಪಲಿಮಾರು ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ‘ಶ್ರೀಕೃಷ್ಣ ವೇದಪ್ರಿಯ. ಗುರುಶಿಷ್ಯ ಪರಂಪರೆಯ ಮೂಲಕ ವೇದವನ್ನು ಸಂರಕ್ಷಿಸಲು ಗುರುಕುಲಕ್ಕೆ ತೆರಳಿ ಸಾಂದೀಪನಿ ಮಹರ್ಷಿಗಳಿಂದ ಅಧ್ಯಯನ ಮಾಡಿದವರು ಶ್ರೀಕೃಷ್ಣ’ ಎಂದು ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ತಿಳಿಸಿದರು.

ಗುರುವಾರ ರಾಜಾಂಗಣದಲ್ಲಿ ಮಹರ್ಷಿ ಸಾಂದೀಪನಿ ರಾಷ್ಟ್ರೀಯ ವೇದ ವಿದ್ಯಾ ಪ್ರತಿಷ್ಠಾನ ಹಾಗೂ ಪರ್ಯಾಯ ಪಲಿಮಾರು ಕೃಷ್ಣಮಠ ಹಾಗೂ ಉಡುಪಿ ಎಸ್.ಎಂ.ಎಸ್.ಪಿ. ಸಂಸ್ಕೃತ ಮಹಾವಿದ್ಯಾಲಯ, ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನಾ ಮಂದಿರದ ಸಹಯೋಗದಲ್ಲಿ ಏರ್ಪಡಿಸಿದ್ದ ಮೂರು ದಿನಗಳ ದಕ್ಷಿಣಭಾರತ ಮಟ್ಟದ ಕ್ಷೇತ್ರೀಯ ವೇದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ವೇದ ಸಮ್ಮೇಳನದಲ್ಲಿ ಸದ್ಗುಣಶಾಲಿಗಳಾದ ವೇದ ವಿದ್ವಾಂಸರಿಗೆ ನೀಡಿದ ಗೌರವವು ವೇದಗಳಿಗೆ ಮಾಡಿದ ಸನ್ಮಾನದಂತೆ. ಆಚಾರ್ಯ ಮಧ್ವರು ಋಗ್ಭಾಷ್ಯ ಬರೆದಿದ್ದಾರೆ. ಅದಕ್ಕೆ ಬ್ರಹ್ಮಸೂತ್ರಗಳ ವ್ಯಾಖ್ಯಾನ ಮಾಡುವಾಗ ಯಜುರ್ವೇದ ಮಂತ್ರಗಳಿಗೂ ವ್ಯಾಖ್ಯಾನ ಮಾಡಿದ್ದಾರೆ. ಇಂತಹ ಆಚಾರ್ಯರ ಕ್ಷೇತ್ರದಲ್ಲಿ ವೇದ ಸಮ್ಮೇಳನ ನಡೆದಿರುವುದು ಸಾರ್ಥಕವಾಗಿದೆ ಎಂದರು.

ಉಜ್ಜಯಿನಿಯ ಮಹರ್ಷಿ ಸಾಂದೀಪನಿ ವೇದವಿದ್ಯಾ ಪ್ರತಿಷ್ಠಾನದ ಹಣಕಾಸು ಅಧಿಕಾರಿ ಸಂಜಯ ಶ್ರೀವಾಸ್ತವ ಮಾತನಾಡಿ, ‘ಗುರುಶಿಷ್ಯ ಪರಂಪರೆಯ ಮೂಲಕ ವೇದ ಸಂಸ್ಕೃತಿ ರಕ್ಷಣೆ ಮಾಡುವುದು ಪ್ರತಿಷ್ಠಾನದ ಪ್ರಧಾನ ಉದ್ದೇಶ. ಪ್ರತಿಷ್ಠಾನವು ದೇಶದಲ್ಲಿ ವಿವಿಧ ಕಡೆಯಲ್ಲಿ ವೇದ ಸಮ್ಮೇಳನಗಳನ್ನು ಹಮ್ಮಿಕೊಂಡು ವೇದದ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ವೇದ-ಶಾಸ್ತ್ರ ಪಂಡಿತ ಪ್ರೊ.ಆರ್.ಕೃಷ್ಣಮೂರ್ತಿ ಶಾಸ್ತ್ರಿ, ಪ್ರೊ.ಚಿರ್ರಾವುರಿ ರಾಮಶರ್ಮಾ, ಅಗ್ನಿಹೋತ್ರಿ ತಲಾರೆ ವಾಮನ ಭಟ್ಟರನ್ನು ಸನ್ಮಾನಿಸಲಾಯಿತು. ವಿದ್ವಾನ್ ಪಾಲ್‌ಘಾಟ್ ರಮೇಶ ದ್ರಾವಿಡ ಶಾಸ್ತ್ರಿಗಳು ವೇದಸಮ್ಮೇಳನದ ಬಗ್ಗೆ ಅನುಭವವನ್ನು ಹಂಚಿಕೊಂಡರು.

ಪರ್ಯಾಯ ಪಲಿಮಾರು ಮಠದ ದಿವಾನರಾದ ವಿದ್ವಾನ್ ಎಸ್.ವೇದವ್ಯಾಸ ತಂತ್ರಿ, ಎಸ್.ಎಂ.ಎಸ್.ಪಿ ಕಾರ್ಯದರ್ಶಿ ರತ್ನಕುಮಾರ್, ಎಸ್.ಎಂ.ಎಸ್.ಪಿ ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ಎನ್. ಲಕ್ಷ್ಮೀನಾರಾಯಣ ಭಟ್ಟ ಉಪಸ್ಥಿತರಿದ್ದರು.

ಬೆಂಗಳೂರಿನ ಪೂರ್ಣಪ್ರಜ್ಞ ಸಂಶೋಧನ ಮಂದಿರದ ನಿರ್ದೇಶಕರಾದ ಡಾ.ಆನಂದತೀರ್ಥ ವಿ.ನಾಗಸಂಪಿಗೆ ಸ್ವಾಗತಿಸಿದರು, ಡಾ.ಡಿ.ಶಿವಪ್ರಸಾದ ತಂತ್ರಿ ಕಾರ್ಯಕ್ರಮ ನಿರೂಪಿಸಿದರು, ವೇದಾಂತ ಪ್ರಾಧ್ಯಾಪಕ ಪ್ರೊ.ಷಣ್ಮುಖ ಹೆಬ್ಬಾರ್ ವಂದಿಸಿದರು.

ಪ್ರತಿಕ್ರಿಯಿಸಿ (+)