ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮ

ಶೇ 99.90 ರೆಗ್ಯುಲರ್ ವಿದ್ಯಾರ್ಥಿಗಳು ಹಾಜರು
Last Updated 22 ಜುಲೈ 2021, 14:12 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ ಹಾಗೂ ಮಳೆಯ ಆತಂಕದ ನಡುವೆ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮುಗಿಯಿತು. ಗುರುವಾರ ಪ್ರಥಮ, ದ್ವಿತೀಯ, ತೃತೀಯ ಭಾಷಾ ವಿಷಯಗಳಿಗೆ ನಡೆದ ಪರೀಕ್ಷೆಯಲ್ಲಿ ರೆಗ್ಯುಲರ್ ವಿದ್ಯಾರ್ಥಿಗಳ ಹಾಜರಾತಿ ಶೇ 99.90ರಷ್ಟು ಇದ್ದದ್ದು ವಿಶೇಷವಾಗಿತ್ತು.

ಉಡುಪಿ ತಾಲ್ಲೂಕಿನ 21, ಕಾರ್ಕಳ ತಾಲ್ಲೂಕಿನಲ್ಲಿ 16, ಬೈಂದೂರಿನಲ್ಲಿ 13, ಕುಂದಾಪುರದ್ಲಿ 13, ಬ್ರಹ್ಮಾವರದ 14 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಮಳೆಯ ನಡುವೆ ಪರೀಕ್ಷಾ ಕೇಂದ್ರಗಳಿಗೆ ಬರಲು ವಿದ್ಯಾರ್ಥಿಗಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿಲ್ಲ. ಮಕ್ಕಳಿಗೆ ಕೋವಿಡ್ ಲಕ್ಷಣಗಳು ಕಂಡುಬರಲಿಲ್ಲ. ಕಾರ್ಕಳ ಮತ್ತು ಕುಂದಾಪುರ ವಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಶೇ 100ರಷ್ಟು ಹಾಜರಾತಿ ದಾಖಲಾಗಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ಮಾಹಿತಿ ನೀಡಿದರು.

ಪ್ರಥಮ ಭಾಷೆ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದ 12876 ರೆಗ್ಯುಲರ್,205 ಖಾಸಗಿ ಹಾಗೂ 75 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 12,862 ರೆಗ್ಯುಲರ್‌, 204 ಖಾಸಗಿ, 74 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ದ್ವಿತೀಯ ಭಾಷೆ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದ 12846, 205 ಖಾಸಗಿ, 239 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 12,833 ರೆಗ್ಯುಲರ್‌, 204 ಖಾಸಗಿ ಹಾಗೂ 237 ಪುನರಾವರ್ತಿ ವಿದ್ಯಾರ್ಥಿಗಳು ಹಾಜರಾಗಿದ್ದರು. ತೃತೀಯ ಭಾಷೆ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 12842 ರೆಗ್ಯುಲರ್, 205 ಖಾಸಗಿ ಹಾಗೂ 192 ಪುನರಾವರ್ತಿತ ವಿದ್ಯಾರ್ಥಿಗಳ ಪೈಕಿ 12,829 ರೆಗ್ಯುಲರ್, 204 ಖಾಸಗಿ ಹಾಗೂ 191 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ಬಂದಿದ್ದರು.

ಬೆಳಿಗ್ಗೆ 10.30 ರಿಂದ 1.30ರವರೆಗೆ ಪರೀಕ್ಷೆ ನಡೆಯಿತು. ಜಿಲ್ಲೆಯ 259 ಪ್ರೌಢಶಾಲೆಗಳ ವಿದ್ಯಾರ್ಥಿಗಳು 77 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಬರೆದರು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಪರೀಕ್ಷೆಗೂ ಮುನ್ನ ಬೆಳಿಗ್ಗೆ ಉಡುಪಿ ಜಿಲ್ಲಾ ಖಜಾನೆ, ಕಾರ್ಕಳ ಕುಂದಾಪುರ ಉಪ ಖಜಾನೆಯಿಂದ ಸಕಾಲಕ್ಕೆ ಎಲ್ಲ ಪರೀಕ್ಷಾ ಕೇಂದ್ರಗಳಿಗೆ 23 ಮಾರ್ಗಗಳಲ್ಲಿ ಅಧಿಕಾರಿಗಳು ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಿದರು. ವಾಹನಗಳ ವ್ಯವಸ್ಥೆ ಇಲ್ಲದ ಮಕ್ಕಳು ಪರೀಕ್ಷಾ ಕೇಂದ್ರಗಳಿಗೆ ಬರಲು ಆಯಾ ಕೇಂದ್ರಗಳ ಸಿಬ್ಬಂದಿ ಹಾಗೂ ಶಿಕ್ಷಕರು ಸಾರಿಗೆ ವ್ಯವಸ್ಥೆ ಮಾಡಿದ್ದರು. ಪರೀಕ್ಷೆಯ ನಂತರ ವಿದ್ಯಾರ್ಥಿಗಳಿಗೆ ಬಿಸ್ಕತ್, ಬಾಳೆಹಣ್ಣು ಹಂಚಲಾಯಿತು.

ಡಿಡಿಪಿಐ ಎನ್.ಎಚ್.ನಾಗೂರ ಬೈಂದೂರಿನ ನಾವುಂದ, ಉಪ್ಪುಂದ, ಕಂಬಂದಕೋಣೆ, ಬೈಂದೂರು, ಶಿರೂರು, ಕೊಲ್ಲೂರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದರು. ಮಂಗಳೂರು ಸಿಟಿಒ ಸಹ ನಿರ್ದೇಶಕ ಸಿಪ್ರಿಯನ್ ಮೊಂತೆರೋ ಕುಂದಾಪುರ ತಾಲ್ಲೂಕಿನ ಹಲವು ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಪರೀಕ್ಷಾ ಯಶಸ್ಸಿಗೆ ಅಗತ್ಯ ಸಹಕಾರ ನೀಡಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಪೌರಾಡಳಿತ ಇಲಾಖೆಗೆ ಡಿಡಿಪಿಐ ಎನ್‌.ಎಚ್.ನಾಗೂರ ಧನ್ಯವಾದ ಸಲ್ಲಿಸಿದ್ದಾರೆ.

ಪರೀಕ್ಷೆ ಬರೆದ ಐವರು ಸೋಂಕಿತರು

ಕಾರ್ಕಳ ತಾಲ್ಲೂಕಿನ ಇಬ್ಬರು, ಬ್ರಹ್ಮಾವರ ತಾಲ್ಲೂಕಿನ ಇಬ್ಬರು, ಕುಂದಾಪುರ ತಾಲ್ಲೂಕಿನ ಒಬ್ಬ ವಿದ್ಯಾರ್ಥಿ ಸೇರಿ ಐವರು ಕೋವಿಡ್‌ ಸೋಂಕಿತ ವಿದ್ಯಾರ್ಥಿಗಳು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕೋವಿಡ್‌ ಕೇರ್ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT