ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಖ್ಯಾತ್ಮಕವಾಗಿ ತೃಪ್ತಿ ಇಲ್ಲ, ಗುಣಾತ್ಮಕವಾಗಿ ತೃಪ್ತಿ ಇದೆ

ಎಸ್ಸೆಸ್ಸೆಲ್ಸಿ ಫಲಿತಾಂಶ: ಡಿಡಿಪಿಐ ಶೇಷಶಯನ ಕರಿಂಜ ಅಭಿಮತ
Last Updated 30 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಉಡುಪಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಸಂಖ್ಯಾತ್ಮಕವಾಗಿ ತೃಪ್ತಿಕೊಟ್ಟಿಲ್ಲ. ಗುಣಾತ್ಮಕವಾಗಿ ತೃಪ್ತಿಕೊಟ್ಟಿದೆ ಎಂದು ಡಿಡಿಪಿಐ ಶೇಷಶಯನ ಕರಿಂಜ ಅಭಿಪ್ರಾಯಪಟ್ಟರು.

ಫಲಿತಾಂಶ ಬಂದ ಬಳಿಕ ಪ್ರಜಾವಾಣಿ ಜತೆ ಮಾತನಾಡಿದ ಅವರು, ಉಡುಪಿ ಜಿಲ್ಲೆ ಮೊದಲ ಅಥವಾ ಎರಡನೇ ಸ್ಥಾನ ಪಡೆಯುವ ನಿರೀಕ್ಷೆ ಇತ್ತು. ಆದರೆ, 5ನೇ ಸ್ಥಾನಕ್ಕೆ ಕುಸಿದಿರುವುದು ಬೇಸರ ತಂದಿದೆ. ಆದರೆ, ಗುಣಾತ್ಮಕ ಫಲಿತಾಂಶದಲ್ಲಿ ಉಡುಪಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವುದು ತೃಪ್ತಿಕೊಟ್ಟಿದೆ ಎಂದರು.

ಫಲಿತಾಂಶ ಕುಸಿಯಲು ಕಾರಣಗಳನ್ನು ಪತ್ತೆಹಚ್ಚಿ, ಫಲಿತಾಂಶ ಸುಧಾರಣೆಗೆ ಜೂನ್‌ನಿಂದಲೇ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗುವುದು. ಮುಂದಿನ ವರ್ಷ ಉಡುಪಿ ಮತ್ತೆ ಅಗ್ರಸ್ಥಾನ ಅಲಂಕರಿಸುವ ವಿಶ್ವಾಸವಿದೆ ಎಂದರು.

2016–17ನೇ ಸಾಲಿನಲ್ಲಿ ಉಡುಪಿ ಮೊದಲ ಸ್ಥಾನ ಪಡೆದಿತ್ತು. ಹಾಗಾಗಿ, 2017–18ನೇ ಸಾಲಿನಲ್ಲೂ ಹಿಂದಿನ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳನ್ನೇ ಮುಂದುವರಿಸಲಾಗಿತ್ತು. ಆದರೂ ನಿರೀಕ್ಷಿತ ಫಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ವರ್ಷ ಜುಲೈನಂತರ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಒಂದು ಗಂಟೆ ಹೆಚ್ಚುವರಿ ತರಗತಿ ಹಾಗೂ ನವೆಂಬರ್‌ ಬಳಿಕ ಮಧ್ಯಾಹ್ನ 1 ಗಂಟೆ ಹೆಚ್ಚುವರಿ ತರಗತಿಗಳನ್ನು ತೆಗೆದುಕೊಳ್ಳಲಾಗಿತ್ತು. ಡಿಸೆಂಬರ್ ಅಂತ್ಯಕ್ಕೆ ಪಠ್ಯವನ್ನು ಪೂರ್ಣಗೊಳಿಸಲಾಗಿತ್ತು.

ರಾಜ್ಯಮಟ್ಟದ, ಜಿಲ್ಲಾಮಟ್ಟದ ಹಾಗೂ ಶಾಲಾಮಟ್ಟದ ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಜನವರಿ, ಫೆಬ್ರುವರಿ, ಮಾರ್ಚ್‌ನಲ್ಲಿ ಪುನರಾವರ್ತನೆ ನಡೆಸಿ, ಮೂರು ಪೂರ್ವಭಾವಿ ಪರೀಕ್ಷೆಗಳನ್ನು ಆಯೋಜಿಸಲಾಗಿತ್ತು. ಬಳಿಕ ಉತ್ತರ ಪತ್ರಿಕೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ ವಿದ್ಯಾರ್ಥಿಗಳು ಎಲ್ಲಿ ಎಡವಿದ್ದಾರೆ ಎಂಬುದನ್ನು ಮನಗಂಡು ಅವರನ್ನು ಅಂತಿಮ ಪರೀಕ್ಷೆಗೆ ಸಜ್ಜುಗೊಳಿಸಲಾಗಿತ್ತು ಎಂದು ಡಿಡಿಪಿಐ ಮಾಹಿತಿ ನೀಡಿದರು.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ತಾಲ್ಲೂಕು ಮಟ್ಟದಲ್ಲಿ ಪ್ರೇರಣಾ ಶಿಬಿರಗಳನ್ನು ನಡೆಸಿ, ಯಾವ ರೀತಿ ಓದಬೇಕು, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯುವುದು ಹೇಗೆ ಎಂಬ ತರಬೇತಿ ನೀಡಲಾಗಿತ್ತು. ಒಟ್ಟಾರೆ ಉತ್ತಮ ಫಲಿತಾಂಶಕ್ಕೆ ಶಿಕ್ಷಣ ಇಲಾಖೆ ಶಕ್ತಿಮೀರಿ ಶ್ರಮಿಸಿತ್ತು. ಆದರೆ, ಉತ್ತಮ ಫಲ ಸಿಗಲಿಲ್ಲ ಎಂದು ನಿರಾಶೆ ವ್ಯಕ್ತಪಡಿಸಿದರು.

10ವರ್ಷಗಳ ಉಡುಪಿ ಎಸ್ಸೆಸ್ಸೆಲ್ಸಿ ಫಲಿತಾಂಶ
ವರ್ಷ–ಶೇಕಡವಾರು–ಜಿಲ್ಲೆಯ ಸ್ಥಾನ

2017–18–ಶೇ 88.18–1
2016–17–ಶೇ 84.23–1
2015–16–ಶೇ 89.64–2
2014–15–ಶೇ 93.37–1
2013–14–ಶೇ 88.09–10
2012–13–ಶೇ 92.43–3
2011–12–ಶೇ 93.68–1
2010–11–ಶೇ 88.68–2
2009–10–ಶೇ 77.30–2
2008–09–ಶೇ 86.39–1

ಶಿಕ್ಷಣ ಗುಣಮಟ್ಟ ಸುಧಾರಣೆ

ಗುಣಮಟ್ಟದ ಫಲಿತಾಂಶ ಎಂದರೆ ಜಿಲ್ಲೆಯ ವಿದ್ಯಾರ್ಥಿಗಳು ತೆಗೆದುಕೊಂಡ ಸರಾಸರಿ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಸರಾಸರಿಯ ಆಧಾರದ ಮೇಲೆ ಗುಣಾತ್ಮಕ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಂಕಗಳ ಆಧಾರದ ಫಲಿತಾಂಶದಲ್ಲಿ ರಾಮನಗರ 2ನೇ ಸ್ಥಾನದಲ್ಲಿದ್ದರೂ ಗುಣಾತ್ಮಕ ಶಿಕ್ಷಣದಲ್ಲಿ 9ನೇ ಸ್ಥಾನದಲ್ಲಿದೆ. ಆದರೆ, ಉಡುಪಿ ಗುಣಾತ್ಮಕ ಫಲಿತಾಂಶದಲ್ಲಿ 2ನೇ ಸ್ಥಾನದಲ್ಲಿದೆ. ಇದೇ ಮೊದಲ ಬಾರಿಗೆ ಶಿಕ್ಷಣ ಇಲಾಖೆ ವಿಭಿನ್ನ ಪ್ರಯತ್ನ ಮಾಡಿದೆ ಎಂದು ಡಿಡಿಪಿಐ ಶೇಷಶಯನ ಕರಿಂಜ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT